Hyderabad ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಮೂರನೇ ದಿನಕ್ಕೆ | ಜಾತಿನಿಂದನೆ ಹೇಳಿಕೆ; ಪ್ರಾಧ್ಯಾಪಕನ ವಜಾಕ್ಕೆ ಆಗ್ರಹ
Photo Credit : X
ಹೈದರಾಬಾದ್, ನ.22: ಹೈದರಾಬಾದ್ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ವಿಜಯ ರಾಮದಾಸ್ ಮಂಡಲ ಅವರು ಜಾತಿನಿಂದನೆ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂದು ಆರೋಪಿಸಿ ವಿದ್ಯಾರ್ಥಿ ಒಕ್ಕೂಟದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ರವಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ರಾಮದಾಸ್ ಮಂಡಲ ಅವರು ಈ ವರ್ಷದ ಎ. 14 ಮತ್ತು 16ರ ನಡುವೆ ನಡೆಸಿದ ಇಮೇಲ್ ಸಂವಹನದಲ್ಲಿ ಪರಿಶಿಷ್ಟ ಜಾತಿಯ ಹಳೆಯ ವಿದ್ಯಾರ್ಥಿಗಳ ಕುರಿತು ಜಾತಿ ಆಧಾರಿತ ಅವಹೇಳನಕಾರಿ ಪದಗಳನ್ನು ಬಳಸಿರುವುದು, ಜಾರ್ಖಂಡ್ ಹಾಗೂ ಬಿಹಾರದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿರುದ್ಧ ಹೇಳಿಕೆಗಳನ್ನು ನೀಡಿರುವುದು ಮತ್ತು ಇಸ್ಲಾಮೊಫೋಬಿಕ್ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ಕಂಡುಬಂದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಇಂತಹ ಹೇಳಿಕೆಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧಕ ವರ್ಗದ ನೈತಿಕ ಜವಾಬ್ದಾರಿ ಹಾಗೂ ವಿದ್ಯಾರ್ಥಿಗಳ ಘನತೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ತಮ್ಮನ್ನು ವಿರೋಧಿಸುತ್ತಿರುವ ಕಾರಣಕ್ಕೆ ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಕೆಲವು ವಿದ್ಯಾರ್ಥಿಗಳಿಗೆ ರಾಮದಾಸ್ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಇದೆ.
ಇಷ್ಟೊಂದು ಗಂಭೀರವಾದ ವಿಷಯದ ಬಗ್ಗೆ ವಿಶ್ವವಿದ್ಯಾನಿಲಯದ ಆಡಳಿತ ಮೌನ ಧೋರಣೆ ತಾಳಿದೆ ಎಂದು ವಿದ್ಯಾರ್ಥಿ ಒಕ್ಕೂಟ ಆಕ್ರೋಶ ವ್ಯಕ್ತಪಡಿಸಿದೆ. ತಮ್ಮ ಹೋರಾಟಕ್ಕೆ ಬೆಂಬಲ ಕೋರಿ ಒಕ್ಕೂಟದ ಸದಸ್ಯರು, ರಾಜ್ಯಸಭಾ ಸದಸ್ಯ ವಿ. ಶಿವದಾಸನ್, ಇತಿಹಾಸಕಾರರಾದ ರೋಮಿಲಾ ಥಾಪರ್, ರಾಮಚಂದ್ರ ಗುಹಾ, ಕೆ.ಎನ್. ಗಣೇಶ್, ರಾಜನ್ ಗುರುಕ್ಕಳ್ ಹಾಗೂ ಇರ್ಫಾನ್ ಹಬೀಬ್ ಅವರಿಗೆ ಪತ್ರ ಬರೆದಿದ್ದಾರೆ.