Chhatron ki Goonj Kota Maha rally | ಶಿಕ್ಷಣ ವ್ಯವಸ್ಥೆಯು ‘ಸುಲಿಗೆ ಯಂತ್ರ’ವಾಗಿದೆ; ವಿದ್ಯಾರ್ಥಿಗಳ ಕನಸುಗಳನ್ನು ನಿಗ್ರಹಿಸಲಾಗುತ್ತಿದೆ: ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ | Photo Credit : PTI
ಕೋಟಾ (ರಾಜಸ್ಥಾನ): ಭಾರತದ ಶಿಕ್ಷಣ ವ್ಯವಸ್ಥೆಯು ವಿದ್ಯಾರ್ಥಿಗಳ ಕನಸುಗಳಿಗೆ ರೆಕ್ಕೆ ಕಟ್ಟುವ ಬದಲು ಅವುಗಳನ್ನು ಸೀಮಿತಗೊಳಿಸುತ್ತಿದೆ. ಕೆಲವೇ ವೃತ್ತಿಗಳತ್ತ ಯುವಕರನ್ನು ತಳ್ಳಲಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಹೆಸರಿನಲ್ಲಿ ಕುಟುಂಬಗಳಿಂದ ಅಪಾರ ಪ್ರಮಾಣದ ಹಣ ಸಂಗ್ರಹಿಸಲಾಗುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ರಾಜಸ್ಥಾನದ ಕೋಟಾದಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್–ಕೋಟಾ ಮಹಾ ರ‍್ಯಾಲಿ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಮಾತನಾಡಿದರು.
‘ಇದು ರಾಜಕೀಯ ಸಭೆಯಲ್ಲ. ನಾನು ಇಲ್ಲಿ ಬಿಜೆಪಿ, ಕಾಂಗ್ರೆಸ್ ಅಥವಾ ಚುನಾವಣೆಗಳ ಬಗ್ಗೆ ಮಾತನಾಡಲು ಬಂದಿಲ್ಲ. ಇದು ವಿದ್ಯಾರ್ಥಿಗಳ ಭವಿಷ್ಯ, ಅವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಚರ್ಚಿಸಲು ಆಯೋಜಿಸಿರುವ ಸಭೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ʼಭಾರತ್ ಜೋಡೋ ಯಾತ್ರೆʼಯ ಅನುಭವ ಹಂಚಿಕೊಂಡ ಅವರು, ‘ಸಾವಿರಾರು ಯುವಕರನ್ನು ಭೇಟಿಯಾದಾಗ ವೈದ್ಯ, ಇಂಜಿನಿಯರ್, ವಕೀಲ, IAS ಅಧಿಕಾರಿ ಅಥವಾ ಸಶಸ್ತ್ರ ಪಡೆಗಳಲ್ಲಿ ಸೇರುವುದು ಎಂಬ ಐದು ಉತ್ತರಗಳಷ್ಟೇ ಸಿಕ್ಕವು. ನಮ್ಮ ಶಿಕ್ಷಣ ವ್ಯವಸ್ಥೆ ಯುವಕರಿಗೆ ಕೇವಲ ಐದು ಆಯ್ಕೆಗಳನ್ನೇ ಏಕೆ ನೀಡುತ್ತಿದೆ ಎಂಬ ಪ್ರಶ್ನೆ ನನಗೆ ಕಾಡಿತು’ ಎಂದರು.
‘ಕೆಲ ಯುವತಿಯರನ್ನು ಅವರು ನಿಜವಾಗಿ ಏನಾಗಲು ಬಯಸುತ್ತಾರೆ ಎಂದು ಕೇಳಿದಾಗ ಲೇಖಕಿ, ನೃತ್ಯಗಾರ್ತಿ, ಗಗನಯಾತ್ರಿ ಆಗುವ ಕನಸುಗಳನ್ನು ವ್ಯಕ್ತಪಡಿಸಿದರು. ಆದರೆ ಅವರಿಗೆ ಆ ಅವಕಾಶಗಳ ಪರಿಚಯವೇ ಇಲ್ಲ. ಹೆಲಿಕಾಪ್ಟರ್ ನಲ್ಲಿ ಹಾರಾಟದ ಅನುಭವ ನೀಡಿದ ಬಳಿಕ ಕೆಲವು ಯುವತಿಯರು ಪೈಲಟ್ ಆಗಬೇಕೆಂದು ಹೇಳಿದರು. ಇದರಿಂದ ಶಿಕ್ಷಣ ವ್ಯವಸ್ಥೆ ಮಕ್ಕಳ ಕನಸುಗಳನ್ನು ವಿಸ್ತರಿಸುವ ಕೆಲಸ ಮಾಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಲೋಕಸಭೆಯ ವಿಪಕ್ಷ ನಾಯಕ ಹೇಳಿದರು.
►‘ಆಕಾಂಕ್ಷಾಳ ತಪ್ಪಲ್ಲ’
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಆಕಾಂಕ್ಷಾಳ ಪತ್ರವನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ ಅವರು, ‘ಆಕಾಂಕ್ಷಾ ತನ್ನ ಪೋಷಕರಿಗೆ ಬರೆದ ಪತ್ರದಲ್ಲಿ “ಅಮ್ಮ–ಅಪ್ಪ ಕ್ಷಮಿಸಿ, ನಾನು ಎಲ್ಲವನ್ನೂ ಹಾಳು ಮಾಡಿದೆ” ಎಂದು ಬರೆದಿದ್ದಳು. ಆದರೆ ಸತ್ಯವೆಂದರೆ ಅದು ಆಕೆಯ ತಪ್ಪಲ್ಲ, ಪೋಷಕರ ತಪ್ಪಲ್ಲ. ಅದು ಶಿಕ್ಷಣ ವ್ಯವಸ್ಥೆಯ ವೈಫಲ್ಯ. ಈ ವ್ಯವಸ್ಥೆ ಮಕ್ಕಳ ಮೇಲೆ ಭಾರೀ ಒತ್ತಡ ಹೇರುತ್ತದೆ, ಅವರನ್ನು ಕುಗ್ಗಿಸುತ್ತದೆ ಮತ್ತು ಕೆಲವೊಮ್ಮೆ ಆತ್ಮಹತ್ಯೆಯಂತಹ ಆಲೋಚನೆಗಳಿಗೂ ದೂಡುತ್ತದೆ. ‘ಈ ದೇಶದಲ್ಲಿ ಮತ್ತೊಬ್ಬ ವಿದ್ಯಾರ್ಥಿಯೂ ಇಂತಹ ಪರಿಸ್ಥಿತಿಗೆ ತಲುಪಬಾರದು. ಶಿಕ್ಷಣ ವ್ಯವಸ್ಥೆಯ ಉದ್ದೇಶ ಮಕ್ಕಳನ್ನು ಒತ್ತಡಕ್ಕೆ ದೂಡುವುದಲ್ಲ, ಅವರ ಕನಸುಗಳನ್ನು ಸಾಕಾರಗೊಳಿಸುವುದಾಗಿರಬೇಕು’ ಎಂದು ಅಭಿಪ್ರಾಯಪಟ್ಟರು.
►ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ NEET, JEE ಮತ್ತು UPSC ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳನ್ನು ವೇದಿಕೆಗೆ ಆಹ್ವಾನಿಸಿ ಅವರ ಅನುಭವಗಳನ್ನು ಕೇಳಲಾಯಿತು.ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರೊಂದಿಗೆ ಸಂವಾದ ನಡೆಸಿದರು.
NEET ಆಕಾಂಕ್ಷಿಯೊಬ್ಬರು, ‘ವೈದ್ಯರಾಗುವುದು ನನ್ನ ಕನಸು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಎರಡು–ಮೂರು ವರ್ಷಗಳ ಶ್ರಮ ವ್ಯರ್ಥವಾದಂತಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.
JEE ಪರೀಕ್ಷಾರ್ಥಿ ವಿದ್ಯಾರ್ಥಿನಿಯೊಬ್ಬರು, "IITಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುವುದರಿಂದ ಉತ್ತಮ ಅವಕಾಶಗಳು ದೊರೆಯುತ್ತವೆ ಎಂಬ ಕಾರಣಕ್ಕೆ JEEಗೆ ತಯಾರಿ ನಡೆಸುತ್ತಿದ್ದೇನೆ", ಎಂದರು.
UPSC ಅಭ್ಯರ್ಥಿ ಹನ್ಸ್ವಿ, "ಸಮಾಜದ ಸಮಸ್ಯೆಗಳೊಂದಿಗೆ ನಿಕಟವಾಗಿ ಕೆಲಸ ಮಾಡಿ, ಆಡಳಿತಾತ್ಮಕ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ UPSC ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ" ಎಂದರು.
ಮತ್ತೊಬ್ಬ ವಿದ್ಯಾರ್ಥಿನಿ, ‘ನನಗೆ ನೃತ್ಯದ ಬಗ್ಗೆ ಆಸಕ್ತಿ ಇದೆ. ಆದರೆ ಬಾಲ್ಯದಿಂದಲೇ ವೈದ್ಯ ಅಥವಾ ಇಂಜಿನಿಯರ್ ಆಗಬೇಕು ಎಂಬ ಗುರಿಯನ್ನೇ ನಮ್ಮ ಮನಸ್ಸಿನಲ್ಲಿ ತುಂಬಲಾಗುತ್ತದೆ’ ಎಂದು ತಮ್ಮ ಕನಸಿನ ಕುರಿತು ಹೇಳಿದರು.
►‘ಕುಟುಂಬಗಳ ಮೇಲೆ ಸಾಲದ ಹೊರೆ’
NEET ಪರೀಕ್ಷೆಗೆ ತಯಾರಿ ನಡೆಸಲು ಎಷ್ಟು ವೆಚ್ಚವಾಗುತ್ತದೆ ಎಂಬುದರ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ರಾಹುಲ್ ಗಾಂಧಿ, ‘ಎರಡು ವರ್ಷಗಳ ಕೋಚಿಂಗ್, ಹಾಸ್ಟೆಲ್ ಮತ್ತು ಇತರ ವೆಚ್ಚಗಳನ್ನು ಸೇರಿಸಿದರೆ ಒಬ್ಬ ವಿದ್ಯಾರ್ಥಿಗೆ 4 ಲಕ್ಷ ರೂ.ವರೆಗೆ ಖರ್ಚಾಗುತ್ತದೆ. ಅನೇಕ ಕುಟುಂಬಗಳು ಇದಕ್ಕಾಗಿ ಸಾಲ ಮಾಡುತ್ತಿವೆ’ ಎಂದು ಆರ್ಥಿಕ ಹೊರೆಯೆಡೆಗೆ ಬೆಳಕು ಚೆಲ್ಲಿದರು.
ಒಬ್ಬ ವಿದ್ಯಾರ್ಥಿ ತನ್ನ ಕುಟುಂಬ ಶಿಕ್ಷಣಕ್ಕಾಗಿ 2 ಲಕ್ಷ ರೂ. ಸಾಲ ಪಡೆದಿರುವುದಾಗಿ ತಿಳಿಸಿದಾಗ, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಕುಟುಂಬಗಳು ಭಾರೀ ಆರ್ಥಿಕ ಹೊರೆ ಹೊರುತ್ತಿವೆ. ಆದರೆ ಯಶಸ್ಸಿನ ಸಾಧ್ಯತೆಗಳು ಅತ್ಯಂತ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ದೊಡ್ಡ ಅಪಾಯವನ್ನು ಎದುರಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
►‘3,000 ಆಕಾಂಕ್ಷಿಗಳಲ್ಲಿ ಒಬ್ಬರಿಗೆ ಮಾತ್ರ IAS ಅವಕಾಶ’
ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ಪ್ರಮಾಣವನ್ನು ಉಲ್ಲೇಖಿಸಿದ ಅವರು, ‘3,000 ವಿದ್ಯಾರ್ಥಿಗಳಲ್ಲಿ ಒಬ್ಬರು ಮಾತ್ರ IAS ಅಧಿಕಾರಿಯಾಗುತ್ತಾರೆ. ಸುಮಾರು 30 ಮಂದಿ ಮಾತ್ರ IITಗೆ ಸೇರುತ್ತಾರೆ. ಸುಮಾರು 180 ಮಂದಿ ಮಾತ್ರ ವೈದ್ಯಕೀಯ ಸೀಟು ಪಡೆಯುತ್ತಾರೆ. ಇವು ಯುವಕರು ಎದುರಿಸುತ್ತಿರುವ ನಿಜವಾದ ಸವಾಲುಗಳು’ ಎಂದು ಅಂಕಿ ಅಂಶಗಳನ್ನು ಪ್ರದರ್ಶಿಸಿ ಬೆಳಕು ಚೆಲ್ಲಿದರು.
‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಅವಕಾಶಗಳು ಅತ್ಯಂತ ಸೀಮಿತವಾಗಿವೆ. ಹೆಚ್ಚಿನ ವಿದ್ಯಾರ್ಥಿಗಳು ಹೊರಗುಳಿಯುವಂತಾಗಿರುವ ಇಂದಿನ ಶಿಕ್ಷಣ ವ್ಯವಸ್ಥೆ ಅವಕಾಶ ಕಲ್ಪಿಸುವುದಕ್ಕಿಂತ ಹೆಚ್ಚಿನವರನ್ನು ಹೊರಗಿಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದರು.
NEETಗಾಗಿ 1.32 ಲಕ್ಷ ಕೋಟಿ ರೂ.ವೆಚ್ಚ!
NEET ಪರೀಕ್ಷೆಯ ಕುರಿತು ಅಂಕಿ-ಅಂಶಗಳನ್ನು ಮಂಡಿಸಿದ ರಾಹುಲ್ ಗಾಂಧಿ, ‘ಪ್ರತಿ ವರ್ಷ 22 ಲಕ್ಷ ವಿದ್ಯಾರ್ಥಿಗಳು NEET ಪರೀಕ್ಷೆ ಬರೆಯುತ್ತಾರೆ. ಅವರ ಕುಟುಂಬಗಳು ಒಟ್ಟಾರೆ 1.32 ಲಕ್ಷ ಕೋಟಿ ರೂ.ವೆಚ್ಚ ಮಾಡುತ್ತಿವೆ. ಇದು ಕೇಂದ್ರ ಸರ್ಕಾರದ ಸಂಪೂರ್ಣ ಶಿಕ್ಷಣ ಬಜೆಟ್ ಗೆ ಸಮಾನವಾಗಿದೆ’ ಎಂದು ಹೇಳಿದರು.
SSC, UPSC, RRB, JEE ಮತ್ತು NEET ಪರೀಕ್ಷೆಗಳನ್ನು ಉಲ್ಲೇಖಿಸಿ, ‘ಈ ಐದು ಪರೀಕ್ಷೆಗಳಿಗಾಗಿ ಕುಟುಂಬಗಳು ಒಟ್ಟಾರೆ ರೂ.3.5 ಲಕ್ಷ ಕೋಟಿ ವೆಚ್ಚ ಮಾಡುತ್ತಿವೆ. ಇದು ಶಿಕ್ಷಣ, ಆರೋಗ್ಯ, ಕಾರ್ಮಿಕ, ವಿಜ್ಞಾನ ಮತ್ತು ಮಹಿಳಾ–ಮಕ್ಕಳ ಕಲ್ಯಾಣ ಸಚಿವಾಲಯಗಳ ಒಟ್ಟಾರೆ ಬಜೆಟ್ ಗೆ ಸಮಾನವಾಗಿದೆ’ ಎಂದರು.
‘ಮಕ್ಕಳ ಶಿಕ್ಷಣಕ್ಕಾಗಿ ಕುಟುಂಬಗಳು ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತವೆ, ಸಾಲವನ್ನೂ ಮಾಡುತ್ತವೆ. ಆದರೆ ಅಂತಿಮವಾಗಿ ಹೆಚ್ಚಿನ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ದೊರೆಯುವುದಿಲ್ಲ’ ಎಂದು ರಾಹುಲ್ ಗಾಂಧಿ ವಾಸ್ತವವನ್ನು ತೆರೆದಿಟ್ಟರು.
ಮಗಳ UPSC ಕನಸಿಗೆ ‘ಮನೆ ಮಾರಲು ಸಿದ್ಧ’ನಾದ ಅಪ್ಪ!
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ UPSC ಅಭ್ಯರ್ಥಿ ಭಾವನಾ ಮಹಾವರ್, ‘ಸುಮಾರು 15 ಲಕ್ಷ ಮಂದಿ ಪರೀಕ್ಷೆಗೆ ಅರ್ಜಿ ಹಾಕುತ್ತಾರೆ. ಆದರೆ ಹುದ್ದೆಗಳು ಸಾವಿರದಷ್ಟೇ ಇವೆ. ಉಳಿದವರಿಗಾಗಿ ಸರ್ಕಾರದ ಬಳಿ ಯಾವ ಯೋಜನೆ ಇದೆ?’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಭಾವನಾ ಅವರ ತಂದೆ ನರೇಶ್ ಕುಮಾರ್ ಮಹಾವರ್, ‘ನಾನು ಆರ್ಥಿಕವಾಗಿ ದುರ್ಬಲನಾಗಿದ್ದರೂ ಮಗಳ ಕನಸು ನನಸಾಗಿಸಲು ಅಗತ್ಯವಿದ್ದರೆ ಮನೆ ಮಾರಲು ಸಹ ಸಿದ್ಧನಿದ್ದೇನೆ’ ಎಂದು ಮಗಳ ಕನಸಿಗೆ ಧಾರೆಯೆಯುವ ತಮ್ಮ ಯೋಜನೆಯನ್ನು ಬಹಿರಂಗಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ‘ಮಕ್ಕಳ ಶಿಕ್ಷಣಕ್ಕಾಗಿ ಪೋಷಕರು ಮನೆ ಮಾರಬೇಕಾದ ಪರಿಸ್ಥಿತಿ ಬರಬಾರದು. ಯುವಕರಿಗೆ ಶಿಕ್ಷಣ ನೀಡುವುದು ದೇಶದ ಕರ್ತವ್ಯ’ ಎಂದು ಹೇಳಿದರು.
ಭಾವನಾ ಅವರ ತಾಯಿ ಪಾರ್ವತಿ ಮಹಾವರ್, ‘ಪರೀಕ್ಷಾ ಅಕ್ರಮಗಳು ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಪೋಷಕರಲ್ಲಿ ಭಯ ಮೂಡಿಸಿವೆ. ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆಯೇ ಎಂಬ ಆತಂಕದಿಂದ ರಾತ್ರಿ ಹಲವಾರು ಬಾರಿ ಎದ್ದು ನೋಡಬೇಕಾಗುತ್ತದೆ’ ಎಂದು ತಮ್ಮ ಕಳವಳವನ್ನು ಬಹಿರಂಗಪಡಿಸಿದರು.
►‘ಇದು ಶಿಕ್ಷಣ ವ್ಯವಸ್ಥೆಯಲ್ಲ, ಸುಲಿಗೆ ಯಂತ್ರ’
ಭಾರತದ ಶಿಕ್ಷಣ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ರಾಹುಲ್ ಗಾಂಧಿ, ‘ಇದು ಕೇವಲ ಶಿಕ್ಷಣ ನೀಡುವ ವ್ಯವಸ್ಥೆಯಲ್ಲ. ಇದು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಹಣ ಸಂಗ್ರಹಿಸಲು ರೂಪುಗೊಂಡ ಸುಲಿಗೆ ಯಂತ್ರವಾಗಿದೆ’ ಎಂದು ಆರೋಪಿಸಿದರು.
‘ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗಿದೆ. ವಿದ್ಯಾರ್ಥಿಗಳನ್ನು ಖಾಸಗಿ ಶಾಲೆಗಳು, ಕೋಚಿಂಗ್ ಕೇಂದ್ರಗಳು ಮತ್ತು ದುಬಾರಿ ತರಬೇತಿ ವ್ಯವಸ್ಥೆಗಳತ್ತ ತಳ್ಳಲಾಗಿದೆ. ಶಾಲೆ, ಕಾಲೇಜು, ಕೋಚಿಂಗ್, ಹಾಸ್ಟೆಲ್, ಪುಸ್ತಕಗಳು, ಸಮವಸ್ತ್ರಗಳು ಸೇರಿದಂತೆ ಪ್ರತಿಯೊಂದು ಹಂತದಲ್ಲೂ ಹಣ ವೆಚ್ಚವಾಗುತ್ತಿದೆ’ ಎಂದು ಹೇಳಿದರು.
‘ಈ ವ್ಯವಸ್ಥೆ ಎರಡು ದೊಡ್ಡ ಸುಳ್ಳುಗಳನ್ನು ಹೇಳುತ್ತಿದೆ. ಮೊದಲನೆಯದು ಇದು ಶಿಕ್ಷಣ ವ್ಯವಸ್ಥೆ ಎಂಬುದು. ಎರಡನೆಯದು ಶಿಕ್ಷಣದ ಬಳಿಕ ಉದ್ಯೋಗ ಸಿಗುತ್ತದೆ ಎಂಬುದು’ ಎಂದು ರಾಹುಲ್ ಗಾಂಧಿ ಹೇಳಿದರು.
‘1,000 ವಿದ್ಯಾರ್ಥಿಗಳಲ್ಲಿ ಕೇವಲ 12 ಮಂದಿಗೆ ಮಾತ್ರ ಪದವಿಗೆ ಸಂಬಂಧಿಸಿದ ಸಂಬಳದ ಉದ್ಯೋಗ ಸಿಗುತ್ತದೆ. ಅನೇಕರು ನಿರುದ್ಯೋಗಿಗಳಾಗುತ್ತಾರೆ. ಕೆಲವರು ಗಿಗ್ ಕಾರ್ಮಿಕರಾಗುತ್ತಾರೆ. ಕೆಲವರು ಅನೌಪಚಾರಿಕ ವಲಯದಲ್ಲಿ ಕೆಲಸ ಮಾಡುತ್ತಾರೆ. ದೇಶದಲ್ಲಿ ಪ್ರತಿ 100 ಇಂಜಿನಿಯರ್‌ಗಳಲ್ಲಿ ಸುಮಾರು 80 ಮಂದಿ ನಿರುದ್ಯೋಗಿಗಳಾಗಿದ್ದಾರೆ’ ಎಂದು ಹೇಳಿದರು.
‘ಭಾರತದ ಶಿಕ್ಷಣ ವ್ಯವಸ್ಥೆ ಪ್ರತಿಯೊಬ್ಬ ಯುವಕ–ಯುವತಿಗೂ ದೊಡ್ಡ ಕನಸು ಕಾಣುವ ಅವಕಾಶ ನೀಡಬೇಕು. ಅವರ ಆಸಕ್ತಿಗೆ ತಕ್ಕ ಮಾರ್ಗಗಳನ್ನು ತೆರೆದಿಡಬೇಕು. ಕನಸುಗಳನ್ನು ಸಾಕಾರಗೊಳಿಸುವ ವ್ಯವಸ್ಥೆಯಾಗಬೇಕು. ಕುಟುಂಬಗಳ ಮೇಲೆ ಸಾಲದ ಭಾರ ಹಾಕಬಾರದು’ ಎಂದು ಹೇಳಿದರು.