ಪೊಲೀಸ್ ಗುಂಡಿನ ದಾಳಿಗೆ ಮಗು ಬಲಿ; ತಾಯಿಯ ಭಾಷೆ ಮುಂದಿಟ್ಟು ಬಾಂಗ್ಲಾದೇಶಿ ಎಂಬ ಆರೋಪ
ಆಕ್ರೋಶಕ್ಕೆ ಕಾರಣವಾದ ಪತ್ರಕರ್ತೆ ರಾಣಾ ಅಯ್ಯೂಬ್ ಹಂಚಿಕೊಂಡ ವೀಡಿಯೊ
Photo: screengrab/x.com/RanaAyyub
ಹೊಸದಿಲ್ಲಿ: ಅಸ್ಸಾಂನಲ್ಲಿ ಮನೆಗಳ ತೆರವು ಕಾರ್ಯಾಚರಣೆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ ಮಗುವನ್ನು ಕಳೆದುಕೊಂಡ ಮಹಿಳೆಯ ಸಂದರ್ಶನದ ವೀಡಿಯೊವನ್ನು ಪತ್ರಕರ್ತೆ ರಾಣಾ ಅಯ್ಯೂಬ್ ಹಂಚಿಕೊಂಡಿದ್ದು, ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾಷೆ ಮತ್ತು ಪೌರತ್ವದ ವಿಚಾರವಾಗಿ ವಿವಾದಕ್ಕೆ ಕಾರಣವಾಗಿದೆ.
ರಾಣಾ ಅಯ್ಯೂಬ್ ನ. 26ರಂದು ಹಂಚಿಕೊಂಡ ವೀಡಿಯೊದಲ್ಲಿ, ಮನೆಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸ್ ಗುಂಡಿನ ದಾಳಿಗೆ ಮಗುವನ್ನು ಕಳೆದುಕೊಂಡ ಮಹಿಳೆಯೊಂದಿಗೆ ಮಾತನಾಡಿದ್ದಾರೆ. ಈ ವರದಿಗಾರಿಕೆ ತಮಗೆ ಮಾನಸಿಕವಾಗಿ ತೀವ್ರ ನೋವುಂಟುಮಾಡಿದ ಅನುಭವವಾಗಿದೆ ಎಂದು ಅವರು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಅಸ್ಸಾಂನಲ್ಲಿ ಸರ್ಕಾರಿ, ಅರಣ್ಯ ಹಾಗೂ ಮೇವು ಭೂಮಿಯಲ್ಲಿ ಅಕ್ರಮವಾಗಿ ನೆಲೆಸಿದ್ದಾರೆಂದು ಆರೋಪಿಸಲಾದ ಜನರ ವಿರುದ್ಧ ಹಲವು ವರ್ಷಗಳಿಂದ ತೆರವು ಕಾರ್ಯಾಚರಣೆಗಳು ನಡೆಯುತ್ತಿವೆ. ಈ ಕಾರ್ಯಾಚರಣೆಗಳಿಂದ ಸಾವಿರಾರು ಕುಟುಂಬಗಳು ಸ್ಥಳಾಂತರಗೊಂಡಿದ್ದು, ಕೆಲವು ಸಂದರ್ಭಗಳಲ್ಲಿ ಘರ್ಷಣೆಗಳು ಹಾಗೂ ಪೊಲೀಸ್ ಗುಂಡಿನ ದಾಳಿಗಳೂ ನಡೆದಿವೆ.
ರಾಣಾ ಅಯ್ಯೂಬ್ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ @arroworks ಎಂಬ ಬಲಪಂಥೀಯ ಧೋರಣೆಯ ಖಾತೆಯ ಬಳಕೆದಾರರು, ಮಹಿಳೆ ಮಾತನಾಡುತ್ತಿರುವ ಭಾಷೆ ಅಸ್ಸಾಮಿ ಅಥವಾ ಬಂಗಾಳಿ ಅಲ್ಲ, ಅದು ಸಿಲ್ಹೆಟಿ ಭಾಷೆ ಎಂದು ಪ್ರತಿಪಾದಿಸಿದ್ದಾರೆ. ಈ ಆಧಾರದಲ್ಲಿ ಮಹಿಳೆ ಬಾಂಗ್ಲಾದೇಶಿ ಎಂದು ಆರೋಪಿಸಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಮಗುವನ್ನು ಕಳೆದುಕೊಂಡ ತಾಯಿಯ ನೋವು ಹಾಗೂ ಘಟನೆಯ ಗಂಭೀರತೆಯ ಕುರಿತು ಚರ್ಚೆಯಾಗಬೇಕಿದ್ದ ಸಂದರ್ಭದಲ್ಲಿ, ಆಕೆ ಮಾತನಾಡುವ ಭಾಷೆಯನ್ನೇ ಮುಂದಿಟ್ಟು ಪೌರತ್ವದ ಬಗ್ಗೆ ತೀರ್ಮಾನಿಸುವ ಪ್ರಯತ್ನಕ್ಕೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಆಕೆ ಬಾಂಗ್ಲಾದೇಶದ ನಾಗರಿಕಳೇ ಆಗಿದ್ದರೂ ಮಗುವಿನ ಮೇಲೆ ಗುಂಡು ಹಾರಿಸಲು ನಿಮಗೆ ಅನುಮತಿ ಇದೆಯೇ? ಬಾಂಗ್ಲಾದೇಶಿಯೆಂಬ ಕಾರಣಕ್ಕೆ ಮಗುವಿಗೆ ಗುಂಡು ತಗುಲಿರುವುದನ್ನು ಸಮರ್ಥಿಸಬಹುದೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, 'ಇದರೊಂದಿಗೆ ಮಾನವೀಯತೆಯೂ ಗಾಳಿಯಲ್ಲಿ ಹಾರಿಹೋಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಸ್ಸಾಂನ ಬರಾಕ್ ಕಣಿವೆ ಪ್ರದೇಶ ಹಾಗೂ ತ್ರಿಪುರದ ಕೆಲವು ಭಾಗಗಳಲ್ಲಿ ಭಾರತೀಯ ನಾಗರಿಕರು ಬಹಳ ಹಿಂದಿನಿಂದಲೂ ಸಿಲ್ಹೆಟಿ ಭಾಷೆಯನ್ನು ಮಾತನಾಡುತ್ತಿದ್ದಾರೆ. ಹೀಗಾಗಿ, ಸಿಲ್ಹೆಟಿ ಮಾತನಾಡುವ ಕಾರಣಕ್ಕೆ ಒಬ್ಬರನ್ನು ಬಾಂಗ್ಲಾದೇಶದ ನಾಗರಿಕರೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ದಿಬ್ಯಜ್ಯೋತಿ ದಾಸ್ (@ICanRunRealFast), “ಅಸ್ಸಾಂನ ಬರಾಕ್ ಕಣಿವೆಯಲ್ಲಿ ಸಿಲ್ಹೆಟಿ ಮಾತನಾಡುವ ಜನರು ತುಂಬಿದ್ದಾರೆ. ಅವರಲ್ಲಿ ಹೆಚ್ಚಿನವರು ಹಿಂದೂಗಳು. ಅವರನ್ನೂ ನೀವು ಬಾಂಗ್ಲಾದೇಶಿಯರೆಂದು ಕರೆಯುತ್ತೀರಾ? ಅಜ್ಞಾನಿಗಳ ಆತ್ಮವಿಶ್ವಾಸ ನಿಜಕ್ಕೂ ಮೆಚ್ಚುವಂತದ್ದು!” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
@pradyuttweets ಎಂಬ ಖಾತೆದಾರರು, “ಅಸ್ಸಾಂನ ಬರಾಕ್ ಕಣಿವೆ ಹಾಗೂ ತ್ರಿಪುರದ ಉತ್ತರ ಮತ್ತು ಉನಕೋಟಿ ಜಿಲ್ಲೆಗಳಲ್ಲಿ ಸಿಲ್ಹೆಟಿ ಪ್ರಮುಖ ಭಾಷೆಯಾಗಿದೆ. ಸಿಲ್ಹೆಟಿ ಮಾತನಾಡುವುದರಿಂದ ಒಬ್ಬರು ಬಾಂಗ್ಲಾದೇಶಿಯರಾಗುವುದು ಹೇಗೆ?” ಎಂದು ಪ್ರಶ್ನಿಸಿದ್ದಾರೆ.