ಸುಪ್ರೀಂಕೋರ್ಟ್ | Photo Credit : PTI 

ಹೊಸದಿಲ್ಲಿ: ಸರಕಾರಿ ಶಾಲೆಗಳಿಗೆ ಬಾಹ್ಯ ವ್ಯಕ್ತಿಗಳು, ಪತ್ರಕರ್ತರು , ಯೂಟ್ಯೂಬರ್‌ಗಳು ಹಾಗೂ ನಾಗರಿಕ ಸಮುದಾಯದ ಪ್ರತಿನಿಧಿಗಳ ಪ್ರವೇಶವನ್ನು ನಿರ್ಬಂಧಿಸುವಂತೆ ಕೋರಿ ಉತ್ತರಪ್ರದೇಶ ಹಾಗೂ ರಾಜಸ್ತಾನ ಸರಕಾರಗಳು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.

ಈ ಎರಡೂ ರಾಜ್ಯಗಳಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರಗಳು, ಸರಕಾರಿ ಶಾಲೆಗಳ ಒಳಗಡೆ ಛಾಯಾಚಿತ್ರಗಳನ್ನು, ವೀಡಿಯೊ ಚಿತ್ರೀಕರಣವನ್ನು, ಸಂದರ್ಶನಗಳನ್ನು, ಆಡಿಯೋ ರೆಕಾರ್ಡಿಂಗ್ ಹಾಗೂ ನೇರ ಪ್ರಸಾರವನ್ನು ನಡೆಸಬೇಕಾದರೆ ಪೂರ್ವಭಾವಿ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದವು.

ಸರಕಾರಿ ಶಾಲೆಗಳ ಸ್ತಿತಿಗತಿಯನ್ನು ಸುಧಾರಣೆಗೊಳಿಸುವ ಕುರಿತ ತನ್ನ ಅಭಿಯಾನದ ಭಾಗವಾಗಿ ಕಾಕ್ರೋಚ್ ಜನತಾ ಪಾರ್ಟಿಯು ರಾಷ್ಟ್ರವ್ಯಾಪಿ ಅಭಿಯಾನವನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ. ಹಲವಾರು ರಾಜ್ಯಗಳಲ್ಲಿನ ಸಿಜೆಪಿ ಕಾರ್ಯಕರ್ತರು, ಪೋಸ್ಟ್ ಮಾಡಿದ ಸರಕಾರಿ ಶಾಲೆಗಳ ವೀಡಿಯೊಗಳನ್ನು ಈ ಅಭಿಯಾನದ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ.

ಆಗಸ್ಟ್ 16ರಂದು ರಾಜಸ್ತಾನ ಸರಕಾರವು ಆದೇಶವೊಂದನ್ನು ಹೊರಡಿಸಿ, ಸರಕಾರಿ ಶಾಲೆಗಳಲ್ಲಿ ವೀಡಿಯೊ ಚಿತ್ರೀಕರಣವನ್ನು ನಿರ್ಬಂಧಿಸಿತ್ತು. ಅದೇ ರೀತಿಯ ಉತ್ತರಪ್ರದೇಶದ ಅಯೋಧ್ಯೆಯ ಜಿಲ್ಲಾ ಮೂಲಭೂತ ಶಿಕ್ಷಣ ಇಲಾಖೆಯ ಅಧಿಕಾರಿ ಕೂಡಾ ಇದೇ ರೀತಿಯ ಆದೇಶವೊಂದನ್ನು ಹೊರಡಿಸಿದ್ದರು. ತರುವಾಯ ಉತ್ತರಪ್ರದೇಶದ ಇತರ ಜಿಲ್ಲೆಗಳಾದ ಅಝಂಗಡ, ಬಲ್ಲಿಯಾ, ಬಸ್ತಿ, ಬಲರಾಮಪುರ,ಶಾಮ್ಲಿ ಹಾಗೂ ಆ್ರಾ ಜಿಲ್ಲೆಗಳ ಅಧಿಕಾರಿಗಳು ಕೂಡಾ ಅದನ್ನು ಅನುಸರಿಸಿದರು.

ಈ ಎರಡು ಬಿಜೆಪಿ ಸರಕಾರಗಳು ಹೊರಡಿಸಿದ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ವಿರುದ್ಧ ಸಾರ್ವಜನಿಕ ಹಿತಾಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಆದೇಶವು, ಸಮಾನತೆ, ಸ್ವಾತಂತ್ರ್ಯ ಹಾಗೂ ಬದುಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ ಸಂವಿಧಾನದ 14,19 ಹಾಗೂ 21 ವಿಧಿಯಡಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆಯೆಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor