“ಕ್ಯಾ ಹುವಾ ತೇರಾ ವಾದಾ?”: ಬೆಲೆಯೇರಿಕೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ ಕಾಂಗ್ರೆಸ್
ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ । ನರೇಂದ್ರ ಮೋದಿ (Photo: PTI)
ಹೊಸದಿಲ್ಲಿ: ಗಗನಮುಖಿಯಾಗಿರುವ ಆಹಾರ ಪದಾರ್ಥಗಳ ಬೆಲೆಯನ್ನು ಉಲ್ಲೇಖಿಸಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, “ನಿಮ್ಮ ಭರವಸೆ ಏನಾಯಿತು?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದೆ. ಹಣದುಬ್ಬರದ ಕುರಿತ ಅವರ ಮೌನವನ್ನೂ ಕಾಂಗ್ರೆಸ್ ಪಕ್ಷ ಪ್ರಶ್ನಿಸಿದೆ.
ಎಕ್ಸ್ ನಲ್ಲಿ ಮಾಧ್ಯಮ ವರದಿಯೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಬೇಳೆಕಾಳುಗಳು ಹಾಗೂ ಖಾದ್ಯ ತೈಲದೊಂದಿಗೆ ಹಲವಾರು ಆಹಾರ ಪದಾರ್ಥಗಳ ಬೆಲೆಯೇರಿಕೆಯಾಗಿದ್ದು, ಈ ಬೆಲೆಯೇರಿಕೆಯಿಂದಾಗಿ ಕುಟುಂಬಗಳ ಆಯವ್ಯಯ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ” ಎಂದು ಆರೋಪಿಸಿದ್ದಾರೆ.
“ದೇಶದಲ್ಲಿ ಗಗನಮುಖಿಯಾಗಿರುವ ಆಹಾರ ಪದಾರ್ಥಗಳ ಬೆಲೆಯೇರಿಕೆಯು ಮಧ್ಯಮ ವರ್ಗ ಹಾಗೂ ಬಡ ವರ್ಗದ ಬೆನ್ನು ಮೂಳೆ ಮುರಿದಿದೆ” ಎಂದು ದೂರಿದ್ದಾರೆ. “ದೈನಂದಿನ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಈ ಬೆಲೆಯೇರಿಕೆಯನ್ನು ತಡೆದುಕೊಳ್ಳುವುದು ಸಾಮಾನ್ಯ ಜನರ ಪಾಲಿಗೆ ಅಸಾಧ್ಯವಾಗಿ ಪರಿಣಮಿಸಿದೆ” ಎಂದೂ ಹೇಳಿದ್ದಾರೆ.
“ಕಳೆದ ತಿಂಗಳು ಮಸಾಲೆ ಪದಾರ್ಥಗಳ ಬೆಲೆ ಶೇ. 10ರಿಂದ ಶೇ. 25ರಷ್ಟು ಏರಿಕೆಯಾಗಿತ್ತು. ಹಸಿರು ಏಲಕ್ಕಿಯ ಬೆಲೆ ಪ್ರತಿ ಕೆಜಿಗೆ 4,000 ರೂ.ನಿಂದ 4,400ಕ್ಕೆ ಏರಿಕೆಯಾಗಿತ್ತು. ಕಪ್ಪು ಏಲಕ್ಕಿಯ ಬೆಲೆ ಪ್ರತಿ ಕೆಜಿಗೆ 2,400 ರೂ.ನಿಂದ 2,800 ರೂ.ಗೆ ಏರಿಕೆಯಾಗಿತ್ತು. ಜೀರಿಗೆ ಬೆಲೆ ಪ್ರತಿ ಕೆಜಿಗೆ 360 ರೂ.ನಿಂದ 400 ರೂ.ಗೆ ಏರಿಕೆಯಾಗಿತ್ತು. ಜಾಪತ್ರೆ ಬೆಲೆ ಪ್ರತಿ ಕೆಜಿಗೆ ನೇರವಾಗಿ 2,500 ರೂ.ನಿಂದ 3,000 ರೂ.ಗೆ ಏರಿಕೆಯಾಗಿತ್ತು” ಎಂದು ಅವರು ಉಲ್ಲೇಖಿಸಿದ್ದಾರೆ.
“ತೊಗರಿ ಬೇಳೆ ದರ ಪ್ರತಿ ಕೆಜಿಗೆ 100 ರೂ.ನಿಂದ 130 ರೂ.ಗೆ ತಲುಪಿದೆ. ಕಡಲೆ ಬೇಳೆ ದರ ಪ್ರತಿ ಕೆಜಿಗೆ 70 ರೂ.ನಿಂದ 100 ರೂ.ಗೆ ತಲುಪಿದೆ. ಉದ್ದಿನ ಬೇಳೆ ದರ ಪ್ರತಿ ಕೆಜಿಗೆ 120 ರೂ.ನಿಂದ 140 ರೂ.ಗೆ ತಲುಪಿದೆ. ಸಾಸಿವೆ ಎಣ್ಣೆ ದರ ಪ್ರತಿ ಲೀಟರ್ ಗೆ 190 ರೂ.ನಿಂದ 210 ರೂ.ಗೆ ತಲುಪಿದೆ. ಸಫೋಲಾ ಎಣ್ಣೆಯ ಬೆಲೆ ಪ್ರತಿ ಲೀಟರ್ ಗೆ 280 ರೂ.ನಿಂದ 280 ರೂ.ಗೆ ಏರಿಕೆಯಾಗಿದೆ” ಎಂದು ಅವರು ಉದಹರಿಸಿದ್ದಾರೆ.
“ಜೂನ್ ನಿಂದ ಸೆಪ್ಟೆಂಬರ್ ವರೆಗೆ ಈರುಳ್ಳಿಯ ಬೆಲೆ ಅಖಿಲ ಭಾರತ ಮಟ್ಟದಲ್ಲಿ ಸರಾಸರಿ ಪ್ರತಿ ಕೆಜಿಗೆ 29.50 ರೂ.ನಿಂದ 53.78 ರೂ.ಗೆ ಜಿಗಿದಿದೆ. ಇದು ಕೇವಲ ಮೂರೂವರೆ ತಿಂಗಳಲ್ಲಿ ಶೇ. 82.3ರಷ್ಟು ಏರಿಕೆಯಾಗಿದೆ” ಎಂದೂ ಅವರು ಬೊಟ್ಟು ಮಾಡಿದ್ದಾರೆ.
“ಏರುತ್ತಿರುವ ಹಣದುಬ್ಬರದಿಂದಾಗಿ ಬೇಳೆಕಾಳುಗಳು ಹಾಗೂ ಅಗತ್ಯ ಆಹಾರ ಪದಾರ್ಥಗಳು ಬಡವರ ಮನೆಗಳಿಗೆ ತಲುಪದಂತಾಗಿದೆ” ಎಂದು ಅವರು ಆರೋಪಿಸಿದ್ದಾರೆ.
“ಹೀಗಿದ್ದೂ, ಪ್ರಧಾನಿಗಳು ಹಣದುಬ್ಬರದ ಕುರಿತು ಮೌನ ತಾಳಿದ್ದಾರೆ. “ಅಚ್ಛೆ ದಿನಗಳು ಎಲ್ಲಿ ಹೋದವು ಎಂದು ದೇಶ ಪ್ರಶ್ನಿಸುತ್ತಿದೆ ಪ್ರಧಾನಿಗಳೆ? ಅವನ್ನು ಕೇವಲ ಧರ್ಮೋಪದೇಶಗಳಲ್ಲಿ ಬಿಡಲಾಗಿದೆಯೆ?” ಎಂದು ಅವರು ವ್ಯಂಗ್ಯವಾಡಿದ್ದಾರೆ.
“ಜನರು ಹಸಿವಿನಿಂದಿದ್ದರೂ ಸರಕಾರ ಮೌನವಾಗಿದೆ. ಇದೇನಾ ನವ ಭಾರತ?” ಎಂದು ಅವರು ಛೇಡಿಸಿದ್ದಾರೆ.
1977ರ ಬಾಲಿವುಡ್ ಚಲನಚಿತ್ರ ‘ಹಮ್ ಕಿಸಿಸೆ ಕಮ್ ನಹೀಂ’ ಚಲನಚಿತ್ರದ ಗೀತೆ “ಕ್ಯಾ ಹುವಾ ತೇರಾ ವಾದಾ? ವೋಹ್ ಕಸಂ, ವೋಹ್ ಇರಾದಾ?” ಎಂಬ ಎಂಬ ಗೀತೆಯನ್ನು ಉಲ್ಲೇಖಿಸಿ, ಅವರು ಪ್ರಧಾನಿ ಮೋದಿಯನ್ನು ವ್ಯಂಗ್ಯವಾಡಿದ್ದಾರೆ.
“ಅನಿಯಂತ್ರಿತ ಹಣದುಬ್ಬರದ ವಿರುದ್ಧ ನರೇಂದ್ರ ಮೋದಿ ನೇತೃತ್ವದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಜನಸಾಮಾನ್ಯರಿಗೆ ನಿರಾಳತೆ ತರಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಏರುತ್ತಿರುವ ಹಣದುಬ್ಬರದ ಕುರಿತು ಕಾಂಗ್ರೆಸ್ ಪದೇ ಪದೇ ಎಚ್ಚರಿಸುತ್ತಿದ್ದು, ಕೇಂದ್ರ ಸರಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ದೂರುತ್ತಾ ಬಂದಿದೆ.