ರಾಹುಲ್ ಗಾಂಧಿಯನ್ನು ಪರಶುರಾಮನಿಗೆ ಹೋಲಿಸಿದ ಪೋಸ್ಟರ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು; ಬಿಜೆಪಿಯಿಂದ ತೀವ್ರ ಆಕ್ಷೇಪ
Photo: x.com/NewsArenaIndia
ವಾರಣಾಸಿ, ಜೂ. 19: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ವಾರಣಾಸಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿಯನ್ನು ಭಗವಾನ್ ಪರಶುರಾಮನ ರೂಪದಲ್ಲಿ ಬಿಂಬಿಸಿದ ಪೋಸ್ಟರ್ ಗೆ ಹಾಲಿನ ಅಭಿಷೇಕ ನಡೆಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಗಂಗಾ ನದಿಯ ದಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ರಾಹುಲ್ ಗಾಂಧಿಯವರ ಚಿತ್ರವಿರುವ ಪೋಸ್ಟರ್ ಗೆ ಹಾಲಿನ ಅಭಿಷೇಕ ಮಾಡಿದರು. ಪೋಸ್ಟರ್ ನಲ್ಲಿ ರಾಹುಲ್ ಗಾಂಧಿ ಒಂದು ಕೈಯಲ್ಲಿ ಕೊಡಲಿ ಹಾಗೂ ಮತ್ತೊಂದು ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದಿರುವಂತೆ ಚಿತ್ರಿಸಲಾಗಿತ್ತು. ವೇದ ಮಂತ್ರಗಳ ಪಠಣದೊಂದಿಗೆ ಹಾಲಿನ ಅಭಿಷೇಕ ನಡೆಸಿದ ಕಾರ್ಯಕರ್ತರು 11 ಕೆಜಿ ಕೇಕ್ ಕತ್ತರಿಸಿ ರಾಹುಲ್ ಅವರ ದೀರ್ಘಾಯುಷ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥಿಸಿದರು.
ಈ ಬೆಳವಣಿಗೆಯನ್ನು ಖಂಡಿಸಿರುವ ಬಿಜೆಪಿ, ಭಗವಾನ್ ಪರಶುರಾಮರನ್ನು ರಾಜಕೀಯ ನಾಯಕರೊಂದಿಗೆ ಹೋಲಿಸುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನ ಎಂದು ಆರೋಪಿಸಿದೆ.
ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ‘ವಿಷ್ಣುವಿನ ಅವತಾರರಾದ ಭಗವಾನ್ ಪರಶುರಾಮರನ್ನು ರಾಹುಲ್ ಗಾಂಧಿಯವರೊಂದಿಗೆ ಹೋಲಿಸುವುದು ಅಸಂಗತ’ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, ‘ಕಾಂಗ್ರೆಸ್ ಕಾರ್ಯಕರ್ತರು ಭಗವಾನ್ ಪರಶುರಾಮರನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ಬಿಜೆಪಿ ನಾಯಕ ಅಮಿತ್ ಮಾಳವೀಯ, ‘ರಾಹುಲ್ ಗಾಂಧಿಯನ್ನು ಭಗವಾನ್ ಪರಶುರಾಮರಿಗೆ ಹೋಲಿಸುವುದು ಹಿಂದೂ ನಂಬಿಕೆ ಮತ್ತು ಸಂಪ್ರದಾಯಕ್ಕೆ ಮಾಡಿದ ಅವಮಾನ’ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟೀಕಿಸಿದ್ದಾರೆ.
ಆದರೆ, ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಂಡಿದೆ.
ವಾರಣಾಸಿ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ್ ಸಿಂಗ್, ‘ಭಗವಾನ್ ಪರಶುರಾಮರು ದುಷ್ಟತನದ ವಿರುದ್ಧ ಹೋರಾಡಿದಂತೆ ರಾಹುಲ್ ಗಾಂಧಿಯವರೂ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತಿದ್ದಾರೆ. ಪೋಸ್ಟರ್ ನಮ್ಮ ಭಾವನೆಗಳ ಅಭಿವ್ಯಕ್ತಿ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಕ್ತಾರ ಅಲೋಕ್ ಶರ್ಮಾ, ‘ಕಾರ್ಯಕ್ರಮವನ್ನು ಆಯೋಜಿಸಿದವರು ಬ್ರಾಹ್ಮಣ ಸಮುದಾಯದವರಾಗಿದ್ದು, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದ್ದಾರೆ.