NEET ಪ್ರತಿಭಟನೆ ವೇಳೆ AK-47ನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ : ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಬಿಹಾರ ಸರಕಾರ
ವಿದ್ಯಾರ್ಥಿಗಳ ಮೇಲೆ ಅತಿಯಾದ ಬಲಪ್ರಯೋಗ ಆರೋಪ ನಿರಾಕರಿಸಿದ ಸರಕಾರ
ಹೊಸದಿಲ್ಲಿ : ಬಿಹಾರದಲ್ಲಿ NEET-UG ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯ ವೇಳೆ ಪೊಲೀಸ್ ಕಾನ್ಸ್ಟೇಬಲ್ ವೊಬ್ಬರು AK-47ನಿಂದ ನಾಲ್ಕು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ. ಆದರೆ, ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ಮಾಡಿದ್ದಾರೆ ಎಂಬ ಆರೋಪವನ್ನು ಸರಕಾರ ನಿರಾಕರಿಸಿದೆ.
ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಬಿಹಾರ ಸರಕಾರ ಸುಪ್ರೀಂ ಕೋರ್ಟ್‌ಗೆ ಈ ಮಾಹಿತಿ ನೀಡಿದ್ದು, AK-47ನಿಂದ ಹಾರಿಸಿದ ಗುಂಡುಗಳಿಂದ ಯಾರಿಗೂ ಗಾಯವಾಗಿಲ್ಲ ಎಂದು ತಿಳಿಸಿದೆ.
“ಸಿವಾನ್‌ನಲ್ಲಿ AK-47 ರೈಫಲ್ ಬಳಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಜನಸಂದಣಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಓರ್ವ ಪೊಲೀಸ್ ಕಾನ್ಸ್ಟೇಬಲ್ ಗಾಳಿಯಲ್ಲಿ ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಆದರೆ, ಈ ಗುಂಡಿನ ದಾಳಿಯಿಂದ ಯಾರಿಗೂ ಗಾಯವಾಗಿಲ್ಲ. ಹಾಥಿ ಚೌಕ್ ಬಳಿ ಜನಸಂದಣಿಯನ್ನು ಚದುರಿಸಲು ಓರ್ವ ಎಎಸ್ಐ ತನ್ನ 9 ಎಂಎಂ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿದ್ದರು. ಈ ವೇಳೆ ಮೂವರು ಪ್ರತಿಭಟನಾಕಾರರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಮೂವರು ಪ್ರತಿಭಟನಾಕಾರರು ಎಕೆ 47 ರೈಫಲ್‌ನಿಂದ ಗಾಯಗೊಂಡಿಲ್ಲ ಮತ್ತು ರೈಫಲ್ ಬಳಸಿದ ಸ್ಥಳದಲ್ಲಿ ಅವರು ಇರಲಿಲ್ಲ" ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ.
AK-47 ವಿಶೇಷ ಕಾರ್ಯಾಚರಣೆಗಳಲ್ಲಿ ಬಳಸಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಂದರ್ಭಗಳಲ್ಲಿ ಇದನ್ನು ಬಳಸುವಂತಿಲ್ಲ. AK-47 ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚನೆ ಹೊರಡಿಸಿದ್ದಾರೆ ಎಂದು ಅಫಿಡವಿಟ್ ನಲ್ಲಿ ಉಲ್ಲೇಖಿಸಲಾಗಿದೆ.