ಸರ್ಕಾರ ಅಥವಾ ಮುಖ್ಯಮಂತ್ರಿಯನ್ನು ಟೀಕಿಸಿದ ಮಾತ್ರಕ್ಕೆ ರಾಷ್ಟ್ರದ ವಿರುದ್ಧ ಯುದ್ಧ ಸಾರಿದಂತಾಗುವುದಿಲ್ಲ: ಪುಣೆ ನ್ಯಾಯಾಲಯ
NCP (SP) ನಾಯಕ ಮಹಾದೇವ್ ಬಾಲ್ಗುಡೆಗೆ ಜಾಮೀನು
ಸಾಂದರ್ಭಿಕ ಚಿತ್ರ (AI)
ಪುಣೆ: ಸರ್ಕಾರ ಅಥವಾ ಮುಖ್ಯಮಂತ್ರಿಯನ್ನು ಟೀಕಿಸುವುದನ್ನು ಮಾತ್ರ ರಾಷ್ಟ್ರದ ವಿರುದ್ಧ ಯುದ್ಧ ಸಾರಿದಂತೆಯೇ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪುಣೆಯ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ ಹಾಗೂ ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಮುಖ್ಯಸ್ಥ ಮಹಾದೇವ್ ಬಾಲ್ಗುಡೆ ಅವರಿಗೆ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಾಲಯ ಈ ಹೇಳಿಕೆ ನೀಡಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಡಿ. ಕುಲಕರ್ಣಿ ಅವರು ಮಂಗಳವಾರ ಜಾಮೀನು ಅರ್ಜಿಯನ್ನು ಅಂಗೀಕರಿಸಿ, ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಕ್ರಮಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ, ಹೊಗಳುವ ಮತ್ತು ಟೀಕಿಸುವ ಹಕ್ಕಿದೆ ಎಂದು ಹೇಳಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಪಕ್ಷದ ಸಾಮಾಜಿಕ ಮಾಧ್ಯಮ ವಿಭಾಗದ ರಾಜ್ಯ ಮುಖ್ಯಸ್ಥರಾಗಿರುವ ಬಾಲ್ಗುಡೆ ಅವರನ್ನು ಈ ವರ್ಷದ ಎಪ್ರಿಲ್ ನಲ್ಲಿ ಬಂಧಿಸಲಾಗಿತ್ತು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮಾರ್ಫ್ ಮಾಡಿದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿರುವುದು ಹಾಗೂ ನಕ್ಸಲೀಯರಿಗೆ ಸಹಾನುಭೂತಿ ವ್ಯಕ್ತಪಡಿಸುವಂತಿರುವ ವಿಷಯವನ್ನು ಪೋಸ್ಟ್ ಮಾಡಿರುವ ಆರೋಪ ಅವರ ವಿರುದ್ಧ ಕೇಳಿಬಂದಿತ್ತು.
ಇತರ ಆರೋಪಗಳ ಜೊತೆಗೆ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 152ರ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿತ್ತು. ಈ ಸೆಕ್ಷನ್ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಉದ್ದೇಶಪೂರ್ವಕವಾಗಿ ಅಥವಾ ತಿಳಿದೂ ಅಪಾಯ ಉಂಟುಮಾಡುವ ಕೃತ್ಯಗಳಿಗೆ ಸಂಬಂಧಿಸಿದೆ.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ, ಅರ್ಜಿದಾರರು ಸಾರ್ವಜನಿಕ ಚರ್ಚೆಯ ವ್ಯಾಪ್ತಿಗೆ ಬರುವ ಕೆಲವು ವಿಷಯಗಳಲ್ಲಿ ತನಿಖಾ ಪ್ರಕ್ರಿಯೆ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನವನ್ನು ಪ್ರಶ್ನಿಸಿದ್ದಾರೆ ಎಂದು ಹೇಳಿದೆ.
‘ಆರೋಪಿಯು ರಾಜ್ಯದ ವಿರುದ್ಧ ಯುದ್ಧ ನಡೆಸುವುದಾಗಿ ಘೋಷಿಸಿರುವುದು ಅಥವಾ ಅದಕ್ಕೆ ಪ್ರಚೋದಿಸಿರುವುದು, ಅಥವಾ ಭಾರತದ ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಗೆ ಅಪಾಯ ಉಂಟುಮಾಡುವ ಯಾವುದೇ ಕೃತ್ಯ ಎಸಗಿರುವುದಕ್ಕೆ ದಾಖಲೆಯಲ್ಲಿ ಯಾವುದೇ ಸೂಚನೆ ಇಲ್ಲ’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಈ ಪ್ರಕರಣದಲ್ಲಿ ಬಿಎನ್‌ಎಸ್ ಸೆಕ್ಷನ್ 152ರ ಅನ್ವಯಿಕೆ ‘ಚರ್ಚಾಸ್ಪದ’ವಾಗಿದೆ. ಆರೋಪಿಯ ವಿರುದ್ಧದ ಉಳಿದ ಆರೋಪಗಳು ಜಾಮೀನು ನೀಡಬಹುದಾದ ಸ್ವರೂಪದ್ದಾಗಿವೆ ಎಂದು ನ್ಯಾಯಾಲಯ ಹೇಳಿದೆ.
ತನಿಖೆ ಪೂರ್ಣಗೊಂಡಿದ್ದು, ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ಹೀಗಾಗಿ ಆರೋಪಿಯನ್ನು ಮತ್ತಷ್ಟು ಕಸ್ಟಡಿಯಲ್ಲಿ ಇರಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
25,000 ರೂ. ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಒಬ್ಬರು ಅಥವಾ ಇಬ್ಬರು ಶ್ಯೂರಿಟಿಗಳನ್ನು ಸಲ್ಲಿಸುವ ಷರತ್ತಿನ ಮೇಲೆ ನ್ಯಾಯಾಲಯ ಜಾಮೀನು ನೀಡಿದೆ. ಸಾಕ್ಷ್ಯಗಳನ್ನು ತಿರುಚಬಾರದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ತನಿಖಾಧಿಕಾರಿಗೆ ನಿವಾಸದ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನೀಡಬೇಕು ಹಾಗೂ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯಬಾರದು ಎಂದು ಬಾಲ್ಗುಡೆ ಅವರಿಗೆ ನಿರ್ದೇಶಿಸಲಾಗಿದೆ.
ಬಾಲ್ಗುಡೆ ಪರ ವಕೀಲ ಸಮೀರ್ ಶೇಖ್, ಪ್ರಕರಣವು ರಾಜಕೀಯ ಪ್ರೇರಿತವಾಗಿದ್ದು, ಸರ್ಕಾರವನ್ನು ಟೀಕಿಸುವುದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಅಡಿಯಲ್ಲಿ ರಕ್ಷಿತವಾಗಿದೆ ಎಂದು ವಾದಿಸಿದರು. ತನಿಖೆ ಪೂರ್ಣಗೊಂಡಿರುವುದರಿಂದ ಆರೋಪಿಯಿಂದ ಇನ್ನೇನನ್ನೂ ವಶಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದೂ ಹೇಳಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್, ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳಲ್ಲಿ ಆರೋಪಿಯು ಆಕ್ಷೇಪಾರ್ಹ ಭಾಷೆ ಬಳಸಿದ್ದು, ರಾಜ್ಯದ ವಿರುದ್ಧದ ಅಪರಾಧ ಎಸಗಿರುವುದರಿಂದ ಜಾಮೀನು ನೀಡಬಾರದು ಎಂದು ವಾದಿಸಿತು.