Photo Credit : PTI 

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯೊಂದಿಗೆ ಹಲವು ಸ್ಥಳಗಳಲ್ಲಿ ಮುಖಾಮುಖಿ ಮುಂದುವರಿದಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದೆ. ಚೀನಾ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಸರಕಾರ ಮೌನ ವಹಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಚೀನಾಕ್ಕೆ ಮೋದಿ ಸರಕಾರ ನೀಡುತ್ತಿರುವ ರಿಯಾಯಿತಿಗಳು ಮುಂದುವರಿದಿವೆ ಎಂದು ಟೀಕಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್ ಅವರು, ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ITBP) ಮಹಾನಿರ್ದೇಶಕ ಶತ್ರುಜೀತ್ ಕಪೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಕಳೆದ ಕೆಲವು ದಿನಗಳಲ್ಲಿ ಅರುಣಾಚಲ ಪ್ರದೇಶದ ಹಲವು ಸ್ಥಳಗಳಲ್ಲಿ ಮುಖಾಮುಖಿ ನಡೆದಿದ್ದು, ಅದು ಇನ್ನೂ ಮುಂದುವರಿದಿದೆ” ಎಂದು ಐಟಿಬಿಪಿ ಮಹಾನಿರ್ದೇಶಕರು ಹೇಳಿರುವುದಾಗಿ ವರದಿಯಾಗಿದೆ. ತಮ್ಮನ್ನು ತಾವೇ ವಿಶ್ವಗುರು ಎಂದು ಕರೆದುಕೊಳ್ಳುವ ಪ್ರಧಾನಿಯವರ ಆಡಳಿತದಲ್ಲಿ ಚೀನಾಕ್ಕೆ ಹಂತ ಹಂತವಾಗಿ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಇದೇ ವೇಳೆ, ಅರುಣಾಚಲ ಪ್ರದೇಶದಲ್ಲಿ ಇತ್ತೀಚೆಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (PLA) ಜತೆ ನಡೆದ ಮುಖಾಮುಖಿಗಳ ಸಂದರ್ಭದಲ್ಲಿ ಐಟಿಬಿಪಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಅದರ ಮಹಾನಿರ್ದೇಶಕರು ಶ್ಲಾಘಿಸಿದ್ದಾರೆ. ಆದರೆ, ಈ ವಿಚಾರದಲ್ಲಿ ಪ್ರಧಾನಿ ಮತ್ತು ಅವರ ಆಡಳಿತದ ಮೌನ ಕಿವುಡುಗೊಳಿಸುವಂತಿದೆ” ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.

ಕಳೆದ ತಿಂಗಳು ತಕ್ಸಿಂಗ್‌ನಲ್ಲಿ ನಡೆದ ಮುಖಾಮುಖಿಯ ಬಳಿಕ ಅರುಣಾಚಲ ಪ್ರದೇಶದ ವಾಚಾ ಮತ್ತು ದಮೈ ಪ್ರದೇಶಗಳಲ್ಲಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ನಡೆದಿದ್ದವು ಎಂದು ಅವರು ತಿಳಿಸಿದ್ದಾರೆ.

ಲಡಾಖ್‌ನಲ್ಲಿ ನಡೆದ ಘಟನೆಗಳಂತೆಯೇ ಅರುಣಾಚಲ ಪ್ರದೇಶದಲ್ಲಿಯೂ ಗಸ್ತು ತಿರುಗುವ ಕೆಲವು ಪ್ರದೇಶಗಳ ಮೇಲಿನ ಹಿಡಿತವನ್ನು ಭಾರತ ಮತ್ತೆ ಕಳೆದುಕೊಂಡಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ ಎಂದು ರಮೇಶ್ ಹೇಳಿದ್ದಾರೆ. ಅರುಣಾಚಲ ಪ್ರದೇಶದ ಸ್ಥಳಗಳಿಗೆ ಚೀನಾ ನಿರಂತರವಾಗಿ ಮರುನಾಮಕರಣ ಮಾಡುತ್ತಿದೆ. ಅಲ್ಲದೆ, ಭಾರತದ ಪರಿಸರ ಮತ್ತು ಜಲ ಭದ್ರತೆಗೆ ಬೆದರಿಕೆಯೊಡ್ಡುವ 60,000 ಮೆಗಾವಾಟ್ ಸಾಮರ್ಥ್ಯದ ಅಣೆಕಟ್ಟನ್ನೂ ನಿರ್ಮಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಚೀನಾದೊಂದಿಗಿನ ಭಾರತದ ಹೆಚ್ಚುತ್ತಿರುವ ವ್ಯಾಪಾರ ಕೊರತೆಯ ಬಗ್ಗೆಯೂ ಕಾಂಗ್ರೆಸ್ ಕಳವಳ ವ್ಯಕ್ತಪಡಿಸಿದೆ.

2025–26ರಲ್ಲಿ ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆ ದಾಖಲೆಯ 112 ಬಿಲಿಯನ್ ಡಾಲರ್‌ಗೆ ಏರಿದೆ. ಹಿಂದಿನ ವರ್ಷ ಇದು 99 ಬಿಲಿಯನ್ ಡಾಲರ್ ಇತ್ತು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

“ಇದರಿಂದ ಹಲವು ಉದ್ಯಮ ಕ್ಷೇತ್ರಗಳಲ್ಲಿನ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSME) ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ‘ಮೇಕ್ ಇನ್ ಇಂಡಿಯಾ’ ಈಗ ‘ಇಂಪೋರ್ಟ್ ಫ್ರಂ ಚೈನಾ’ ಆಗಿ ಬದಲಾಗಿದೆ. ಇಷ್ಟೊಂದು ದೊಡ್ಡ ವ್ಯಾಪಾರ ಕೊರತೆಯು ಭಾರತದ ಆರ್ಥಿಕ ಭದ್ರತೆಗೆ ಗಂಭೀರ ಬೆದರಿಕೆಯಾಗಿದೆ” ಎಂದು ಅವರು ಟೀಕಿಸಿದ್ದಾರೆ.

2020ರ ಜೂನ್ 19ರಂದು ಚೀನಾದೊಂದಿಗಿನ ಗಡಿ ಸಂಘರ್ಷದ ಕುರಿತು ಪ್ರಧಾನಿ ಮೋದಿ ನೀಡಿದ್ದ ಹೇಳಿಕೆಯನ್ನು ರಮೇಶ್ ಮತ್ತೆ ಪ್ರಸ್ತಾಪಿಸಿದ್ದಾರೆ.

“ನಮ್ಮ 20 ಮಂದಿ ವೀರ ಯೋಧರು ಹುತಾತ್ಮರಾದ ಬಳಿಕವೂ, ‘ಅಲ್ಲಿ ಯಾರೂ ನಮ್ಮ ಗಡಿಯೊಳಗೆ ನುಸುಳಿ ಬಂದಿಲ್ಲ, ಯಾರೂ ಒಳಗೆ ನುಸುಳಿಕೊಂಡು ಉಳಿದಿಲ್ಲ, ನಮ್ಮ ಯಾವುದೇ ಸೇನಾ ನೆಲೆ ಮತ್ತೊಬ್ಬರ ವಶದಲ್ಲಿಲ್ಲ’ ಎಂದು ಪ್ರಧಾನಿ ಹೇಳಿದ್ದರು. ಚೀನಾಕ್ಕೆ ಪ್ರಧಾನಿ ನೀಡಿದ ಆ ಹೇಳಿಕೆಯ ಬೆಲೆಯನ್ನು ಭಾರತ ಇಂದಿಗೂ ತೆರಬೇಕಾಗಿದೆ” ಎಂದು ಅವರು ಆರೋಪಿಸಿದ್ದಾರೆ.

ಚೀನಾದೊಂದಿಗಿನ ಸಂಬಂಧ ಹಾಗೂ ಗಡಿ ಅತಿಕ್ರಮಣಗಳನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರದ ನೀತಿಯನ್ನು ಕಾಂಗ್ರೆಸ್ ಈ ಹಿಂದೆಯೂ ಟೀಕಿಸಿತ್ತು. ಆದರೆ, ಪ್ರತಿಪಕ್ಷಗಳ ಆರೋಪಗಳನ್ನು ಕೇಂದ್ರ ಸರ್ಕಾರ ಈ ಹಿಂದೆ ತಳ್ಳಿಹಾಕಿದೆ. ಸೇನಾಪಡೆಗಳ ನೈತಿಕ ಸ್ಥೈರ್ಯವನ್ನು ಕುಗ್ಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಕೂಡ ಈ ಹಿಂದೆ ಆರೋಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor