Uttar Pradesh | ಮೀರತ್ ನಲ್ಲಿ ಪತಿಯನ್ನು ಕೊಂದು ಹಾವು ಕಚ್ಚಿದಂತೆ ನಾಟಕ: ಪತ್ನಿ, ಪ್ರಿಯಕರನಿಗೆ ಮರಣದಂಡನೆ
ವಿಷದ ಗ್ರಂಥಿ ತೆಗೆದ ಹಾವನ್ನು ಮೃತದೇಹದ ಕೆಳಗಿಟ್ಟು ಕೊಲೆ ಮುಚ್ಚಿಹಾಕುವ ಯತ್ನ
Photo Credit : indiatoday.in
ಮೀರತ್: ಪತಿಯನ್ನು ಕತ್ತು ಹಿಸುಕಿ ಕೊಂದು, ಬಳಿಕ ಆತನ ಮೃತದೇಹದ ಕೆಳಗೆ ಹಾವನ್ನು ಇರಿಸಿ, ಹಾವು ಕಚ್ಚಿದ್ದರಿಂದ ಸಾವು ಸಂಭವಿಸಿದೆ ಎಂಬಂತೆ ಬಿಂಬಿಸಲು ಯತ್ನಿಸಿದ ಮಹಿಳೆ ಮತ್ತು ಆಕೆಯ ಪ್ರಿಯಕರನಿಗೆ ಮೀರತ್ ನ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಈ ಪ್ರಕರಣವನ್ನು ‘ಅಪರೂಪದಲ್ಲಿ ಅತ್ಯಂತ ಅಪರೂಪದ’ ಪ್ರಕರಣ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ (ಕೋರಂ–12) ನ್ಯಾಯಾಲಯವು ಅಕ್ಟೋಬರ್ 7ರಂದು ರವಿತಾ ಮತ್ತು ಆಕೆಯ ನೆರೆಯ ನಿವಾಸಿ ಅಮರ್ ದೀಪ್ ನನ್ನು ಕೊಲೆ ಹಾಗೂ ಅಪರಾಧ ಸಂಚು ರೂಪಿಸಿದ ಆರೋಪಗಳಲ್ಲಿ ದೋಷಿಗಳೆಂದು ಘೋಷಿಸಿತ್ತು. ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿತು.
ಶಿಕ್ಷೆ ಪ್ರಕಟಿಸುವ ವೇಳೆ ನ್ಯಾಯಾಲಯವು ಹಿಂದೂ ಸಂಪ್ರದಾಯದಲ್ಲಿ ಪತ್ನಿಯನ್ನು ಪತಿಯ ‘ಅರ್ಧಾಂಗಿನಿ’ ಎಂದು ಕರೆಯಲಾಗುತ್ತದೆ ಎಂಬುದನ್ನು ಉಲ್ಲೇಖಿಸಿತು. ಪತಿಯ ಪ್ರಾಣ ಉಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಿದ ಸಾವಿತ್ರಿಯ ಉದಾಹರಣೆಯನ್ನೂ ಸ್ಮರಿಸಿತು.
►ಹಾವು ಕಚ್ಚಿದ್ದರಿಂದ ಸಾವು ಎಂಬ ನಾಟಕ
ಅಕ್ಬರ್ ಪುರ ಸಾದತ್ ಗ್ರಾಮದ ಮನೆಯೊಂದರಲ್ಲಿ 2025ರ ಎಪ್ರಿಲ್ 12ರಂದು ಅಮಿತ್ ಕಶ್ಯಪ್ ಅಲಿಯಾಸ್ ಮಿಕ್ಕಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮೃತದೇಹದ ಕೆಳಗೆ ಹಾವೊಂದು ಸಿಕ್ಕಿದ್ದರಿಂದ, ಆರಂಭದಲ್ಲಿ ಕುಟುಂಬದವರು ಹಾವು ಕಚ್ಚಿದ್ದರಿಂದ ಸಾವು ಸಂಭವಿಸಿರಬಹುದು ಎಂದು ಶಂಕಿಸಿದ್ದರು.
ಆದರೆ, ಅಮಿತ್ ಅವರ ಕುತ್ತಿಗೆಯ ಮೇಲಿದ್ದ ಗಾಯಗಳು ಮತ್ತು ದೇಹದ ಮೇಲಿನ ಉಗುರಿನಿಂದ ಪರಚಿದ ಗುರುತುಗಳು ಅನುಮಾನ ಮೂಡಿಸಿದ್ದವು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹಾವು ಕಚ್ಚಿದ್ದರಿಂದಲ್ಲ, ಕುತ್ತಿಗೆಯನ್ನು ಬಿಗಿದ ಪರಿಣಾಮ ಉಸಿರುಗಟ್ಟಿ ಸಾವು ಸಂಭವಿಸಿದೆ ಎಂಬುದು ದೃಢಪಟ್ಟಿತ್ತು.
ಸರ್ಕಾರಿ ಅಭಿಯೋಜಕರ ಪ್ರಕಾರ, ರವಿತಾ ಮತ್ತು ಅಮರ್ ದೀಪ್ ಪ್ರೇಮ ಸಂಬಂಧ ಹೊಂದಿದ್ದರು. ಅಮಿತ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಇಬ್ಬರೂ, ಅವರ ಕುತ್ತಿಗೆಯನ್ನು ಬಿಗಿದು ಕೊಂದಿದ್ದರು ಎನ್ನಲಾಗಿದೆ. ಬಳಿಕ ಕೊಲೆಯನ್ನು ಮುಚ್ಚಿಹಾಕಿ, ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಮೃತದೇಹದ ಕೆಳಗೆ ಹಾವನ್ನು ಇರಿಸಿದ್ದರು ಎಂದು ತಿಳಿದು ಬಂದಿದೆ.
ಹಾವನ್ನು ಹಿಡಿದು ಪಾತ್ರೆಯೊಂದರಲ್ಲಿ ಇರಿಸಲಾಗಿತ್ತು. ಅದನ್ನು ಪರಿಶೀಲಿಸಿದ ಹಾವು ಹಿಡಿಯುವವರು, ಹಾವಿನ ವಿಷದ ಚೀಲವನ್ನು ತೆಗೆದುಹಾಕಲಾಗಿತ್ತು ಎಂದು ತಿಳಿಸಿದ್ದರು. ಇದರಿಂದ ಹಾವು ಕಚ್ಚಿದ್ದರಿಂದ ಸಾವು ಸಂಭವಿಸಿದೆ ಎಂಬ ಸಾಧ್ಯತೆಯನ್ನು ತಳ್ಳಿಹಾಕಲಾಗಿತ್ತು. ರವಿತಾ ಮತ್ತು ಅಮರ್ ದೀಪ್ ಅವರನ್ನು ಬಂಧಿಸುವ ಮೊದಲು, ಹಾವನ್ನು ಪೂರೈಸಿದ್ದ ವ್ಯಕ್ತಿಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದರು.
►500 ಪುಟಗಳಿಗೂ ಹೆಚ್ಚು ದೋಷಾರೋಪ ಪಟ್ಟಿ
ಪೊಲೀಸರು 500 ಪುಟಗಳಿಗೂ ಹೆಚ್ಚು ವಿಸ್ತಾರವಾದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ವೇಳೆ ಅಭಿಯೋಜನಾ ಪಕ್ಷವು ಹನ್ನೆರಡಕ್ಕೂ ಹೆಚ್ಚು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.
ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲೆ ಫರ್ಜಾನಾ ಅವರ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿ ಮತ್ತು ಮೊಬೈಲ್ ಫೋನ್ ದಾಖಲೆಗಳು ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿದ್ದವು. ಅಮಿತ್ ಮೃತಪಟ್ಟ ಬಳಿಕದ ನಾಲ್ಕು ದಿನಗಳಲ್ಲಿ ರವಿತಾ ಮತ್ತು ಅಮರ್ ದೀಪ್ ಪರಸ್ಪರ 70ಕ್ಕೂ ಹೆಚ್ಚು ಬಾರಿ ಮಾತನಾಡಿದ್ದರು.
ಅಮರ್ ದೀಪ್, ರವಿತಾಳನ್ನು ಸಂಪರ್ಕಿಸಲು ಬಳಸುತ್ತಿದ್ದ ಫೋನ್ ಸಂಖ್ಯೆಯ ಮೂಲಕ ಇಬ್ಬರ ನಡುವೆ 500ಕ್ಕೂ ಹೆಚ್ಚು ಕರೆಗಳು ನಡೆದಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು. ಈ ಸಿಮ್ ಕಾರ್ಡ್ ಜಾಗೃತಿ ವಿಹಾರದ ನಿವಾಸಿ ಸೋನು ಎಂಬುವರ ಹೆಸರಿನಲ್ಲಿ ನೋಂದಣಿಯಾಗಿತ್ತು. ಆದರೆ, ತಾನು ಆ ಸಂಖ್ಯೆಯನ್ನು ಬಳಸಿಲ್ಲ ಹಾಗೂ ಆರೋಪಿಗಳಿಬ್ಬರೂ ತನಗೆ ಪರಿಚಯವಿಲ್ಲ ಎಂದು ಸೋನು ನ್ಯಾಯಾಲಯಕ್ಕೆ ತಿಳಿಸಿದ್ದರು.
►ಮರಣದಂಡನೆಗೆ ಅಭಿಯೋಜಕರ ಆಗ್ರಹ
ಶಿಕ್ಷೆಯ ಪ್ರಮಾಣದ ಕುರಿತು ನಡೆದ ವಾದದ ವೇಳೆ ಜಿಲ್ಲಾ ಸರ್ಕಾರಿ ವಕೀಲ ಕೆ.ಕೆ. ಚೌಬೆ ಅವರು, ಇದು ಪೂರ್ವಯೋಜಿತ ಕೊಲೆಯಾಗಿದ್ದು, ಸಾಕ್ಷ್ಯ ನಾಶಪಡಿಸುವ ಪ್ರಯತ್ನವೂ ನಡೆದಿರುವುದರಿಂದ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಎಂದು ನ್ಯಾಯಾಲಯವನ್ನು ಕೋರಿದರು.
ಆರೋಪಿಗಳು ಪೂರ್ವಯೋಜಿತವಾಗಿ ಕೊಲೆ ಮಾಡಿರುವುದರಿಂದ ಅವರಿಗೆ ಮರಣದಂಡನೆ ವಿಧಿಸಬೇಕು ಎಂದು ಸರ್ಕಾರಿ ವಕೀಲ ಕೆ.ಕೆ. ಚೌಬೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ತಮ್ಮ ವಾದಕ್ಕೆ ಬೆಂಬಲವಾಗಿ ಅವರು ಶಬ್ನಮ್ ಕೊಲೆ ಪ್ರಕರಣದ ತೀರ್ಪು ಸೇರಿದಂತೆ ವಿವಿಧ ನ್ಯಾಯಾಲಯಗಳ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸಿದರು.
ಅಮಿತ್ ಅವರ ಕುಟುಂಬದ ಪರ ವಕೀಲರಾದ ಫರ್ಝಾನಾ ಮತ್ತು ಬಲ್ರಾಜ್ ಸಿಂಗ್ ಕೂಡ ಇಬ್ಬರು ಆರೋಪಿಗಳಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದರು.
ಸೌಜನ್ಯ: indiatoday.in