ಕ್ಯಾನ್ಸರ್ ನಿರೋಧಕ ಔಷಧಿಗಳ ಅಕ್ರಮ ದಂಧೆಯನ್ನು ಭೇದಿಸಿದ ದಿಲ್ಲಿ ಪೊಲೀಸರು, 17 ಜನರ ಬಂಧನ
Photo Credit : NDTV
ಹೊಸದಿಲ್ಲಿ, ಆ. 20: ದುಬಾರಿ ಕ್ಯಾನ್ಸರ್ ನಿರೋಧಕ ಔಷಧಿಗಳ ಅಕ್ರಮ ಖರೀದಿ, ಸಂಗ್ರಹ, ಮರುಪ್ಯಾಕಿಂಗ್ ಮತ್ತು ಪೂರೈಕೆಯಲ್ಲಿ ತೊಡಗಿದ್ದ ಅಂತರರಾಜ್ಯ ದಂಧೆಯನ್ನು ಭೇದಿಸಿರುವ ದಿಲ್ಲಿ ಕ್ರೈಂ ಬ್ರ್ಯಾಂಚ್ ಈವರೆಗೆ 17 ಜನರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾಧಿಕಾರಿಗಳ ಪ್ರಕಾರ, ಈ ಜಾಲವು ದಿಲ್ಲಿ-ಎನ್ಸಿಆರ್, ಮುಂಬೈ, ನವಿ ಮುಂಬೈ, ಹೈದರಾಬಾದ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಾದ್ಯಂತ ಹರಡಿಕೊಂಡಿತ್ತು.
ಈ ಜಾಲವು ನಕಲಿ ಔಷಧಿಗಳ ಮಾರಾಟ ಮಾತ್ರವಲ್ಲದೆ, ಆಸ್ಪತ್ರೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಂದ ಅಕ್ರಮವಾಗಿ ಪಡೆದುಕೊಂಡ ಕ್ಯಾನ್ಸರ್ ನಿರೋಧಕ ಔಷಧಿಗಳ ವ್ಯವಹಾರದಲ್ಲೂ ತೊಡಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ದಾಳಿ ಮತ್ತು ನಂತರದ ತನಿಖೆಯ ಸಮಯದಲ್ಲಿ, ಕ್ರೈಂ ಬ್ರ್ಯಾಂಚ್ 588 ಭರ್ತಿಯಾದ ಕ್ಯಾನ್ಸರ್ ನಿರೋಧಕ ಔಷಧಿಯಿದ್ದ ವಯಲ್ ಗಳು, ಆರು ಖಾಲಿ ವಯಲ್ ಗಳು, ಏಳು ಖಾಲಿ ಔಷಧಿ ಪೆಟ್ಟಿಗೆಗಳು ಮತ್ತು 3,021 ಯೂನಿಟ್ ಗಳಷ್ಟು ಇತರ ಔಷಧಿಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 9 ಕೋಟಿ ರೂ.ಗಳಾಗಿವೆ.
ಸುಮಾರು 50 ಲಕ್ಷ ರೂ. ನಗದು, ಮೊಬೈಲ್ ಫೋನ್ಗಳು, ಎಲೆಕ್ಟ್ರಾನಿಕ್ ಸಾಧನಗಳು, ಪ್ಯಾಕಿಂಗ್ ಸಾಮಗ್ರಿಗಳು ಮತ್ತು ಔಷಧಿ ವಹಿವಾಟುಗಳು ಹಾಗೂ ಹಣಕಾಸಿನ ವಿವರಗಳನ್ನು ಒಳಗೊಂಡಿರುವ ರಿಜಿಸ್ಟರ್ ಮತ್ತು ಡೈರಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕ್ರೈಂ ಬ್ರ್ಯಾಂಚ್ ಪ್ರಕಾರ, ಈ ಜಾಲವು ಸಂಘಟಿತ ಪೂರೈಕೆ ಸರಪಳಿಯನ್ನು ಹೊಂದಿತ್ತು. ಔಷಧಿಗಳ ಖರೀದಿ, ಸಂಗ್ರಹ, ಮರುಪ್ಯಾಕಿಂಗ್ ಮತ್ತು ವಿತರಣೆಯ ಜವಾಬ್ದಾರಿಗಳನ್ನು ವಿವಿಧ ವ್ಯಕ್ತಿಗಳಿಗೆ ವಹಿಸಲಾಗಿತ್ತು.
ಆರೋಪಿಗಳು ಔಷಧಿಗಳನ್ನು ಪಡೆಯುತ್ತಿದ್ದ ಮೂರು ಮೂಲಗಳನ್ನು ತನಿಖಾಧಿಕಾರಿಗಳು ಗುರುತಿಸಿದ್ದಾರೆ. ಅನಧಿಕೃತ ಮಾರ್ಗಗಳ ಮೂಲಕ ಪಡೆದ ನಕಲಿ ಔಷಧಿಗಳು, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಿಂದ ಕಳವು ಮಾಡಲಾದ ಔಷಧಿಗಳು ಮತ್ತು ಸರಕಾರಿ ಸಂಸ್ಥೆಗಳು ಹಾಗೂ ಗೋದಾಮುಗಳಿಗೆ ಪೂರೈಕೆಯಾಗಿ ಬಳಿಕ ಅಕ್ರಮ ಮಾರುಕಟ್ಟೆಗೆ ಸಾಗಿಸಲಾದ ಔಷಧಿಗಳು ಇವುಗಳಲ್ಲಿ ಸೇರಿವೆ.
ಈ ಔಷಧಿಗಳನ್ನು ಯಾವುದೇ ಮಾನ್ಯ ಬಿಲ್ಗಳು, ಡ್ರಗ್ ಲೈಸೆನ್ಸ್, ಖರೀದಿ ದಾಖಲೆಗಳು ಅಥವಾ ಇತರ ಕಡ್ಡಾಯ ದಾಖಲೆಗಳಿಲ್ಲದೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.