"ಸಚಿವರ ಪುತ್ರಿಯೊಂದಿಗೆ ಮಾತನಾಡುತ್ತೇನೆ; ಆದರೆ ತಂದೆಯನ್ನು ಟ್ರೋಲ್ ಮಾಡಬೇಡಿ": NEET ಪ್ರತಿಭಟನೆಯಲ್ಲಿ ಸಚಿವ ಕೇಶಬ್ ಮಹಾಂತ ಪುತ್ರಿ ಭಾಗಿಯಾಗಿದ್ದಕ್ಕೆ ಅಸ್ಸಾಂ ಸಿಎಂ ಪ್ರತಿಕ್ರಿಯೆ

"ಮಕ್ಕಳು ದೊಡ್ಡವರಾದ ಬಳಿಕ ಅವರ ನಡೆ-ನುಡಿಗಳನ್ನು ಪೋಷಕರ ರಾಜಕೀಯ ನಿಲುವಿನೊಂದಿಗೆ ಜೋಡಿಸಬಾರದು"

Update: 2026-07-26 16:20 IST

Photo source: NDTV, PTI

ಗುವಾಹಟಿ: ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಸಾ ಭಾಗವಹಿಸಿರುವ ಹಿನ್ನೆಲೆಯಲ್ಲಿ ಸಚಿವರನ್ನು ಟೀಕಿಸುವುದು ಅಥವಾ ಟ್ರೋಲ್ ಮಾಡುವುದು ಸರಿಯಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಮಕ್ಕಳು ದೊಡ್ಡವರಾದ ಬಳಿಕ ಅವರ ನಡೆ-ನುಡಿಗಳನ್ನು ಪೋಷಕರ ರಾಜಕೀಯ ನಿಲುವಿನೊಂದಿಗೆ ಜೋಡಿಸಬಾರದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಗುರುವಾರ ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಸ್ಸಾಂ ಗಣ ಪರಿಷತ್ (ಎಜಿಪಿ) ನಾಯಕ ಹಾಗೂ ಅಸ್ಸಾಂನ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಕೇಶಬ್ ಮಹಾಂತ ಅವರ ಪುತ್ರಿ ದಿಬಿಸಾ ಭಾಗವಹಿಸಿದ್ದರು. ಈ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ, ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ ಎಂದು ಪಿಟಿಐ ವರದಿ ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಕೇಶಬ್ ಮಹಾಂತ ಅವರ ಪುತ್ರಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕೆ ಸಚಿವರ ವಿರುದ್ಧ ದಾಳಿ ನಡೆಸುವುದು ಅಥವಾ ಅವರನ್ನು ಟ್ರೋಲ್ ಮಾಡುವುದು ಸರಿಯಲ್ಲ. ಅವರು ತಮ್ಮ ತಂದೆಯ ರಾಜಕೀಯ ಸಿದ್ಧಾಂತವನ್ನು ಅನುಸರಿಸದೇ ಇರಬಹುದು. ನಾಳೆ ನನ್ನ ಮಗ ವಕೀಲಿ ವೃತ್ತಿ ಆರಂಭಿಸಿದರೆ, ನನಗೆ ಇಷ್ಟವಿಲ್ಲದ ವ್ಯಕ್ತಿಯ ಪರವೂ ವಾದಿಸಬಹುದು. ಮಕ್ಕಳು ದೊಡ್ಡವರಾದ ಬಳಿಕ ಅವರ ಕೆಲಸಗಳನ್ನು ಪೋಷಕರೊಂದಿಗೆ ತಳುಕು ಹಾಕಬಾರದು," ಎಂದು ಹೇಳಿದರು.

"ಅವರು ಕೂಗಿದ ಘೋಷಣೆಗಳನ್ನು ನಾನು ಒಪ್ಪುವುದಿಲ್ಲ. ಮುಂದಿನ ಬಾರಿ ಅವರನ್ನು ಭೇಟಿಯಾದಾಗ ಈ ವಿಷಯದ ಬಗ್ಗೆ ಖಂಡಿತವಾಗಿ ಮಾತನಾಡುತ್ತೇನೆ. ಅವರು ಹೇಳಿದ್ದು ಸರಿಯಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇನೆ," ಎಂದೂ ಶರ್ಮಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News