ಅಝಮ್ ಖಾನ್ ಮೇಲಿನ ED ದಾಳಿ ಪ್ರಕರಣ | ‘ರಾಮ ಮಂದಿರದ ದೇಣಿಗೆ ಕದ್ದವರ ವಿರುದ್ಧ ಏಕೆ ಕ್ರಮವಿಲ್ಲ?’: ಅಖಿಲೇಶ್ ಯಾದವ್ ಟೀಕೆ

Update: 2026-08-19 19:38 IST

 ಅಝಮ್ ಖಾನ್ , ಅಖಿಲೇಶ್ ಯಾದವ್ | Photo Credit : PTI 

ಲಕ್ನೋ, ಆ. 19: ಜೈಲಿನಲ್ಲಿರುವ ಸಮಾಜವಾದಿ ಪಕ್ಷದ (SP) ನಾಯಕ ಅಝಮ್ ಖಾನ್ ಅವರಿಗೆ ಸಂಬಂಧಿಸಿದ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯನ್ನು SP ಮುಖ್ಯಸ್ಥ ಅಖಿಲೇಶ್ ಯಾದವ್ ಟೀಕಿಸಿದ್ದಾರೆ. ಬಿಜೆಪಿ ಸರಕಾರ ಹಾಗೂ ಬಿಜೆಪಿ ಬೆಂಬಲಿತ ವ್ಯಕ್ತಿಗಳ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ಬಗ್ಗೆಯೂ ED ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಯೋಧ್ಯೆಯ ರಾಮ ಮಂದಿರಕ್ಕೆ ಬಂದ ದೇಣಿಗೆಯಲ್ಲಿ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯ್ಲಲಿ ಆರೋಪಿತರ ವಿರುದ್ಧವೂ ED ದಾಳಿ ನಡೆಸಬೇಕು. ಅಕ್ರಮವಾಗಿ ಔಷಧ ದಾಸ್ತಾನು ಮಾಡಿರುವವರು ಹಾಗೂ ಕೊಡೈನ್ ಹೊಂದಿರುವ ಸಿರಪ್ ಗಳ ಪೂರೈಕೆಯಲ್ಲಿ ಭಾಗಿಯಾಗಿರುವವರ ವಿರುದ್ಧವೂ ED ದಾಳಿ ನಡೆಸಬೇಕು ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಈಗ ಹದಗೆಟ್ಟಿರುವ ಎಕ್ಸ್ಪ್ರೆಸ್ವೇಗಳ ನಿರ್ಮಾಣದಲ್ಲಿನ ಅಕ್ರಮಗಳ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

►ಅಝಮ್ ಖಾನ್ ಅವರ ಸಂಸ್ಥೆಗಳ ಮೇಲೆ ದಾಳಿ

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ED ಬುಧವಾರ ಅಝಮ್ ಖಾನ್ ಸ್ಥಾಪಿಸಿರುವ ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್ ಮತ್ತು ಅದಕ್ಕೆ ಸಂಬಂಧಿಸಿದ ಸಂಸ್ಥೆಗಳ ಸುಮಾರು 10 ಸ್ಥಳಗಳಲ್ಲಿ ಶೋಧ ನಡೆಸಿದೆ.

ಉತ್ತರ ಪ್ರದೇಶದ ರಾಂಪುರ ಮತ್ತು ಸಹರಾನ್ ಪುರದಲ್ಲಿರುವ ಖಾನ್ ಸ್ಥಾಪಿಸಿದ ವಿಶ್ವವಿದ್ಯಾಲಯಗಳು ಹಾಗೂ ಹೊಸದಿಲ್ಲಿಯ ಜಾಮಿಯಾ ನಗರದಲ್ಲಿರುವ ಸಂಸ್ಥೆಗೆ ಸಂಬಂಧಿಸಿದ ಸ್ಥಳಗಳಲ್ಲೂ ಶೋಧ ನಡೆದಿದೆ.

ಸರ್ಕಾರಿ ಗುತ್ತಿಗೆಗಳ ಹಣವನ್ನು ಖಾಸಗಿ ಗುತ್ತಿಗೆದಾರರ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ. ಬಳಿಕ ಆ ಹಣವನ್ನು ಟ್ರಸ್ಟ್ ಮತ್ತು ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ನಿರ್ಮಿಸಲು ಬಳಸಲಾಗಿದೆ ಎಂಬ ಆರೋಪಗಳ ಕುರಿತು ED ತನಿಖೆ ನಡೆಸುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News