ಪ್ರಕರಣದಲ್ಲಿ ಸುಳ್ಳು ಹೇಳಿಕೆ | 6 CBI ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ದಿಲ್ಲಿ ಹೈಕೋರ್ಟ್ ಆದೇಶ
Photo Credit : PTI
ಹೊಸದಿಲ್ಲಿ, ಅ. 7: ಭಾರತೀಯ ಕಂದಾಯ ಸೇವೆ (ಐಆರ್ಎಸ್) ಅಧಿಕಾರಿ ಅಶೋಕ್ ಕುಮಾರ್ ಅಗರ್ವಾಲ್ ಅವರ ಖುಲಾಸೆಯನ್ನು ಪ್ರಶ್ನಿಸುವಾಗ, ಸರಕಾರದೊಂದಿಗಿನ ಪತ್ರವ್ಯವಹಾರದ ಕುರಿತು ನ್ಯಾಯಾಲಯಕ್ಕೆ ಸುಳ್ಳು ಹೇಳಿಕೆ ನೀಡಿದ್ದ ಆರೋಪದಲ್ಲಿ ಆರು CBI ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮಗಳನ್ನು ಆರಂಭಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ನಿರ್ದೇಶಿಸಿದೆ.
ಅಗರ್ವಾಲ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾ. ಮಧು ಜೈನ್ ಅವರು CBI ಅಧಿಕಾರಿಗಳಾದ ಸುಶೀಲ್ ದಿವಾನ್, ವಿನೀತ್ ವಿನಾಯಕ್, ಅಮಿತ್ ಕುಮಾರ್, ರಮಣ ತ್ಯಾಗಿ, ಪ್ರೇಮ್ ಕುಮಾರ್ ಗೌತಮ್ ಮತ್ತು ಮುಹಮ್ಮದ್ ಆಜಾದ್ ವಿರುದ್ಧ ಲಿಖಿತ ದೂರು ನೀಡುವಂತೆ ವಿಶೇಷ CBI ನ್ಯಾಯಾಧೀಶರಿಗೆ ನಿರ್ದೇಶನ ನೀಡಿದ್ದಾರೆ.
ಈ ಅಧಿಕಾರಿಗಳ ವಿರುದ್ಧ ಐಪಿಸಿಯ ಕಲಂ 191 (ಸುಳ್ಳು ಸಾಕ್ಷ್ಯ ನೀಡುವುದು), ಕಲಂ 193 (ಸುಳ್ಳು ಸಾಕ್ಷ್ಯಕ್ಕೆ ಶಿಕ್ಷೆ) ಮತ್ತು ಕಲಂ 209ರ (ನ್ಯಾಯಾಲಯದಲ್ಲಿ ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಸುಳ್ಳು ಹೇಳಿಕೆ ನೀಡುವುದು) ಅಡಿಯಲ್ಲಿ ಆರೋಪಗಳಿಗೆ ಸೂಕ್ತ ಆಧಾರಗಳು ಇವೆ ಎಂದು ಹೈಕೋರ್ಟ್ ಹೇಳಿದೆ. ನಾಲ್ಕು ವಾರಗಳಲ್ಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಲಿಖಿತ ದೂರು ರವಾನಿಸುವಂತೆ ಹೈಕೋರ್ಟ್ ತನ್ನ ಅ. 6ರ ಆದೇಶದಲ್ಲಿ CBI ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದೆ.
►ಪ್ರಕರಣದ ಹಿನ್ನೆಲೆ
CBI ಅಗರ್ವಾಲ್ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ ಆರೋಪದಲ್ಲಿ CBI ಪ್ರಕರಣ ದಾಖಲಿಸಿತ್ತು. ಜನವರಿ 2016ರಲ್ಲಿ ಉಚ್ಚ ನ್ಯಾಯಾಲಯವು ಅಗರ್ವಾಲ್ ವಿರುದ್ಧ ಕಾನೂನು ಕ್ರಮವನ್ನು ಅನೂರ್ಜಿತಗೊಳಿಸಿ, ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು. ಇದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು CBI ಚಿಂತನೆ ನಡೆಸಿತ್ತಾದರೂ, ಜೂನ್ 2016ರಲ್ಲಿ ಕಾನೂನು ಸಚಿವಾಲಯವು ಮೇಲ್ಮನವಿಯನ್ನು ಸಲ್ಲಿಸಲು ಯಾವುದೇ ಬಲವಾದ ಆಧಾರವಿಲ್ಲ ಎಂದು ಅಭಿಪ್ರಾಯಿಸಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (ಡಿಒಪಿಟಿ) ಈ ವಿಷಯವನ್ನು ಜುಲೈ 2016ರಲ್ಲಿ CBIಗೆ ತಿಳಿಸಿತ್ತು.
ಬಳಿಕ ಅಗರ್ವಾಲ್ ಅವರು ತನಿಖೆಯ ಸಂದರ್ಭದಲ್ಲಿ ಜಪ್ತಿ ಮಾಡಿದ್ದ ದಾಖಲೆಗಳನ್ನು ಹಿಂತಿರುಗಿಸುವಂತೆ ಕೋರಿದಾಗ, CBI ತನ್ನ ಆಗಸ್ಟ್ 2, 2016ರ ಉತ್ತರದಲ್ಲಿ ಮುಂದಿನ ಕಾನೂನು ಕ್ರಮಗಳ ಕುರಿತು ಸಚಿವಾಲಯದೊಂದಿಗೆ ಪತ್ರವ್ಯವಹಾರ ನಡೆಯುತ್ತಿದೆ ಎಂದು ಸುಳ್ಳು ಹೇಳಿಕೆ ನೀಡಿತ್ತು. ನಂತರದ ತನಿಖೆಯಲ್ಲಿ CBI ಅಧಿಕಾರಿಗಳು ಡಿಒಪಿಟಿಯ ಸಂವಹನದಲ್ಲಿನ ಮೇಲ್ಮನವಿಯನ್ನು ತಿರಸ್ಕರಿಸಿದ್ದ ಹೇಳಿಕೆಯನ್ನು ಅಳಿಸಿ, ಕೈಯಿಂದ ಬರೆದಿದ್ದ ಸುಳ್ಳು ಮಾಹಿತಿ ಸೇರಿಸಿದ್ದು ಕಂಡುಬಂದಿತ್ತು.
CBI ನಂತರ ಆಗಸ್ಟ್ 9ರಂದು ತನ್ನ ಹೇಳಿಕೆಯನ್ನು ತಿದ್ದುಪಡಿ ಮಾಡಿಕೊಂಡರೂ, ಸುಳ್ಳುಸಾಕ್ಷ್ಯ ಸಲ್ಲಿಸಿದ ಅಧಿಕಾರಿಗಳ ನಡವಳಿಕೆಯನ್ನು ಉಚ್ಚ ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಅವರ ವಿರುದ್ಧ ಕ್ರಿಮಿನಲ್ ಕ್ರಮಕ್ಕೆ ಆದೇಶಿಸಿದೆ.