ಬೂಟಾ ಸಿಂಗ್ ವಿರುದ್ಧ ‘ಜಾತಿ ನಿಂದನೆ’ ಆರೋಪ: ಪಂಜಾಬ್ ಕಾಂಗ್ರೆಸ್ ವರಿಷ್ಠನ ವಿರುದ್ಧ ಎಫ್ಐಆರ್ ದಾಖಲು
ಅಮರಿಂದರ್ ಸಿಂಗ್ ರಾಜಾ ವಾರಿಂಗ್ - Photo/ANI
ಚಂಡಿಗಡ, ನ. 5: ಕೇಂದ್ರದ ಮಾಜಿ ಸಚಿವ ದಿವಂಗತ ಬೂಟಾ ಸಿಂಗ್ ವಿರುದ್ಧ ಮಾನಹಾನಿಕರ ಹಾಗೂ ಜಾತಿ ನಿಂದನೆ ಹೇಳಿಕೆ ನೀಡಿದ ಆರೋಪದಲ್ಲಿ ಪಂಜಾಬ್ ಕಾಂಗ್ರೆಸ್ ವರಿಷ್ಠ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಲುಧಿಯಾನದ ಸಂಸದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆೆ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196ರ ಅಡಿಯಲ್ಲಿ ಮಂಗಳವಾರ ಎಫ್ಐಆರ್ ದಾಖಲಿಸಲಾಗಿದೆ.
ಬೂಟಾ ಸಿಂಗ್ ಅವರ ಪುತ್ರ ಸರಬ್ಜೋತ್ ಸಿಂಗ್ ಸಿಧು ಅವರು ಸಲ್ಲಿಸಿದ ದೂರಿನ ಆಧಾರದಲ್ಲಿ ಕಪುರ್ತಲಾ ಜಿಲ್ಲೆಯ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ.
ಜಾತಿ ನಿಂದನೆ ಹಾಗೂ ಮಾನಹಾನಿಕರ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ವಿರುದ್ಧ ಸರಬ್ಜೋತ್ ಸಿಂಗ್ ಸಿಧು ಅವರು ಕಪುರ್ತಲಾದ ಹಿರಿಯ ಪೊಲೀಸ್ ಅಧೀಕ್ಷರನ್ನು ಭೇಟಿಯಾಗಿದ್ದರು.
ನವೆಂಬರ್ 11ರಂದು ನಡೆಯಲಿರುವ ತರನ್ ತರನ್ ವಿಧಾನ ಸಭಾ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವ ಸಂದರ್ಭ ಬೂಟಾ ಸಿಂಗ್ ವಿರುದ್ಧ ಜಾತಿ ನಿಂದನೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು. ವಾರಿಂಗ್ ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಪಂಜಾಬ್‌ನ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಅಮರಿಂದರ್ ಸಿಂಗ್ ರಾಜ ವಾರಿಂಗ್ ಸೋಮವಾರ ನಿಶ್ಯರ್ಥ ಕ್ಷಮೆ ಕೋರಿದ್ದಾರೆ ಹಾಗೂ ಪಕ್ಷದ ಹಿರಿಯ ನಾಯಕರಾಗಿದ್ದ ಬೂಟಾ ಸಿಂಗ್ ತಂದೆಯಂತೆ ಇದ್ದರು ಎಂದು ಹೇಳಿದ್ದಾರೆ.