ಪ್ಯಾಕ್ ಮಾಡಿದ ಕುಡಿಯುವ ನೀರನ್ನು ಪರೀಕ್ಷಿಸಲು FSSAIಯಿಂದ ದೇಶವ್ಯಾಪಿ ಕಾರ್ಯಾಚರಣೆ ಆರಂಭ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪ್ಯಾಕ್ ಮಾಡಿದ ಕುಡಿಯುವ ನೀರನ್ನು ಪರೀಕ್ಷಿಸಲು ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ದೇಶಾದ್ಯಂತ ಕಾರ್ಯಾಚರಣೆಯನ್ನು ನಡೆಸುತ್ತಿದೆ. ಇದರ ಪ್ರಯೋಗಾಲಯದ ಫಲಿತಾಂಶ ಒಂದರಿಂದ ಎರಡು ತಿಂಗಳಲ್ಲಿ ಕೈ ಸೇರುವ ನಿರೀಕ್ಷೆ ಇದೆ ಎಂದು ಎಫ್‌ಎಸ್‌ಎಸ್‌ಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಜಿತ್ ಪುನ್ಹಾನಿ ಬುಧವಾರ ತಿಳಿಸಿದ್ದಾರೆ.
ಆಹಾರ ಸುರಕ್ಷತೆಯ ಖಾತರಿ ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ತನ್ನ ಪ್ರಯತ್ನಗಳ ಭಾಗವಾಗಿ ಎಫ್‌ಎಸ್‌ಎಸ್‌ಎಐ ದೇಶಾದ್ಯಂತದಿಂದ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದೆ.
‘‘ನಾವು ಪ್ರಕ್ರಿಯೆಯಲ್ಲಿದ್ದೇವೆ. ಪ್ರಕ್ರಿಯೆ ಆರಂಭವಾಗಿದೆ. ನಾವು ಇದನ್ನು ದೇಶಾದ್ಯಂತ ಮಾಡುತ್ತಿದ್ದೇವೆ’’ ಎಂದು ಪುನ್ಹಾನಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪರೀಕ್ಷೆಗಳನ್ನು ಪೂರ್ಣಗೊಳಿಸುವ ಸಮಯ ಮಿತಿ ಬಗ್ಗೆ ಕೇಳಿದಾಗ, ‘‘ಇದು ತುಂಬಾ ದೊಡ್ಡ ದೇಶ. ಆದುದರಿಂದ ಇದಕ್ಕೆ ಕನಿಷ್ಠ ಒಂದು ಅಥವಾ ಎರಡು ತಿಂಗಳು ಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದರು.
‘‘ಈ ಕಾರ್ಯಾಚರಣೆ ಯಾವುದೇ ನಿರ್ದಿಷ್ಟ ಘಟನೆಯಿಂದ ಪ್ರೇರಿತವಾಗಿಲ್ಲ. ಬದಲಿಗೆ ವಿಭಿನ್ನ ಆಹಾರ ವಿಭಾಗಗಳನ್ನು ಪರಿಶೀಲಿಸುವ ಎಫ್‌ಎಸ್‌ಎಸ್‌ಎಐ ನಡೆಸುತ್ತಿರುವ ಪ್ರಯತ್ನಗಳ ಭಾಗವಾಗಿದೆ’’ ಎಂದು ಪುನ್ಹಾನಿ ಹೇಳಿದರು.
‘‘ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ನೀವು ಗಮನಿಸಿದರೆ, ಕಳೆದ ವರ್ಷ ನಾವು ಒಂದೊಂದಾಗಿ ಹಲವು ವಿಷಯಗಳನ್ನು ಕೈಗೆತ್ತಿಕೊಂಡಿದ್ದೇವೆ. ನಾವು ಹಾಲಿನ ಉತ್ಪನ್ನಗಳು, ಮಾಂಸ , ಮೊಟ್ಟೆ, ಧಾನ್ಯ, ಎನರ್ಜಿ ಡ್ರಿಂಕ್ಸ್ ಮತ್ತು ಸಕ್ಕರೆಯ ಪಾನೀಯಗಳನ್ನು ಪರಿಶೀಲಿಸಿದ್ದೇವೆ. ನೀರು ಕೂಡ ಆ ಪ್ರಕ್ರಿಯೆಯ ಭಾಗವಾಗಿದೆ’’ ಎಂದು ಅವರು ಹೇಳಿದರು.
ಬಿಸ್ಲೆರಿ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ಯಾಕ್ ಮಾಡಿದ ಕುಡಿಯುವ ನೀರಿನ ಮಾದರಿ ಅಸುರಕ್ಷಿತ ಎಂದು ಘೋಷಿಸಲ್ಪಟ್ಟ ಬಳಿಕ ಬಿಸ್ಲೆರಿ ವಿರುದ್ಧ ಕಾನೂನು ಕ್ರಮಕ್ಕೆ ಎಫ್‌ಎಸ್‌ಎಸ್‌ಎಐ ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ಈ ದೇಶ ವ್ಯಾಪಿ ಅಭಿಯಾನ ಆರಂಭವಾಗಿದೆ.
ಬಿಸ್ಲೆರಿ ವಿರುದ್ಧ ಕಾನೂನು ಪ್ರಕ್ರಿಯೆಗಳು ಯಾವಾಗ ಪ್ರಾರಂಭವಾಗುತ್ತವೆ ಎಂದು ಪ್ರಶ್ನಿಸಿದಾಗ, ಪುನ್ಹಾನಿ, ‘‘ಇದು ಸಾಮಾನ್ಯ ದಿನನಿತ್ಯದ ವಿಷಯ ಮತ್ತು ಅದು ನಡೆಯುತ್ತದೆ’’ ಎಂದರು.