Mumbai | ಬಾಲಿವುಡ್ ನಟ ಟೈಗರ್ ಶ್ರಾಫ್ ಹತ್ಯೆ ಯತ್ನ: ಗುಂಡಿನ ದಾಳಿಯ ದೃಶ್ಯಾವಳಿ ಲಭ್ಯ
ಸಲ್ಮಾನ್ ಖಾನ್ ಜೊತೆ ಕೆಲಸ ಮುಂದುವರಿಸಿದ್ದಕ್ಕೆ ದಾಳಿ ನಡೆಸಿರುವುದಾಗಿ ಆಡಿಯೊ ಸಂದೇಶದಲ್ಲಿ ಉಲ್ಲೇಖ
Photo Credit: ndtv
ಮುಂಬೈ, ಅ. 18: ಬಾಲಿವುಡ್ ನಟ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡು ಮುಂಬೈನ ಜುಹು ಪ್ರದೇಶದಲ್ಲಿ ರವಿವಾರ ಸಂಜೆ ಗುಂಡಿನ ದಾಳಿ ನಡೆದಿದೆ. ದಾಳಿಯಲ್ಲಿ ನಟ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಅವರ ಚಾಲಕ ಹಾಗೂ ಆಟೋರಿಕ್ಷಾ ಚಾಲಕರೊಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಾರುವ ವೀಡಿಯೊದಲ್ಲಿ, ಟೈಗರ್ ಶ್ರಾಫ್ ಅವರಿಗೆ ಸೇರಿದ ಕಾರಿನ ಮೇಲೆ ಗುಂಡು ಹಾರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ವೀಡಿಯೊದಲ್ಲಿ ಕನಿಷ್ಠ ನಾಲ್ಕು ಬಾರಿ ಗುಂಡು ಹಾರಿಸಿದ ಶಬ್ದ ಕೇಳಿಸುತ್ತದೆ. ಆದರೆ, ಎಷ್ಟು ಸುತ್ತು ಗುಂಡು ಹಾರಿಸಲಾಗಿದೆ ಮತ್ತು ಎಷ್ಟು ಬಂದೂಕುಗಳನ್ನು ಬಳಸಲಾಗಿದೆ ಎಂಬುದು ಇನ್ನೂ ಖಚಿತವಾಗಿಲ್ಲ.
ಮುಂಬೈನ ಪಶ್ಚಿಮ ಉಪನಗರಗಳಲ್ಲಿರುವ ಪುಷ್ಪಾ ಪಾರ್ಕ್ ಸಮೀಪ ಈ ಘಟನೆ ನಡೆದಿದೆ. ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ನಟನ ಚಾಲಕನ ಎದೆಗೆ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಕೋರರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಅವರ ಗುರುತು ಪತ್ತೆಹಚ್ಚಲು, ಚಲನವಲನಗಳನ್ನು ಪರಿಶೀಲಿಸಲು ಹಾಗೂ ಘಟನೆಯ ಬಳಿಕ ಅವರು ಹೇಗೆ ಪರಾರಿಯಾದರು ಎಂಬುದನ್ನು ತಿಳಿಯಲು ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
ಬಿಷ್ಣೋಯ್ ಗ್ಯಾಂಗ್ ಹೆಸರು ಉಲ್ಲೇಖ
ಸಾಮಾಜಿಕ ಜಾಲತಾಣದ ಪೋಸ್ಟ್ ಹಾಗೂ ಧ್ವನಿ ಸಂದೇಶವೊಂದರಲ್ಲಿ ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಗೆ ಹೊರಿಸಲಾಗಿದೆ. ಆದರೆ, ಈ ಹೇಳಿಕೆಯ ಸತ್ಯಾಸತ್ಯತೆ ಇನ್ನೂ ದೃಢಪಟ್ಟಿಲ್ಲ. ಗ್ಯಾಂಗ್ಗೂ ಗುಂಡಿನ ದಾಳಿಗೂ ಸಂಬಂಧವಿದೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಆಡಿಯೊ ಸಂದೇಶದಲ್ಲಿ ಅನಿಲ್ ಪಂಡಿತ್ ಎಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಟೈಗರ್ ಶ್ರಾಫ್ ಅವರನ್ನು ಗುರಿಯಾಗಿಸಿಕೊಂಡಿರುವುದಾಗಿ ಹೇಳಿದ್ದಾನೆ. ಗ್ಯಾಂಗ್ ನ ಸೂಚನೆಗಳನ್ನು ನಿರ್ಲಕ್ಷಿಸಿ, ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿಯಿಂದ ಪದೇ ಪದೇ ಬೆದರಿಕೆ ಎದುರಿಸುತ್ತಿರುವ ನಟ ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ ಶ್ರಾಫ್ ಕೆಲಸ ಮುಂದುವರಿಸಿದ್ದೇ ದಾಳಿಗೆ ಕಾರಣ ಎಂದು ಸಂದೇಶದಲ್ಲಿ ಹೇಳಲಾಗಿದೆ.
ಚಲನಚಿತ್ರೋದ್ಯಮದಲ್ಲಿ ತಮ್ಮ ಗ್ಯಾಂಗ್ ನಿಂದ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡುವವರನ್ನು ಕೊಲ್ಲುವುದಾಗಿ ಆಡಿಯೊ ಸಂದೇಶದಲ್ಲಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಅವರನ್ನು ದಾವೂದ್ ಇಬ್ರಾಹಿಂನ ನಾ* ಎಂದು ನಿಂದಿಸಿರುವುದಲ್ಲದೆ, ತಮ್ಮ ಮನೆಯಲ್ಲಿ ದಾವೂದ್ ಹೆಸರಿನ ನಾ*ಯೊಂದನ್ನು ಸಾಕಿರುವುದಾಗಿಯೂ ಹೇಳಿದ್ದಾನೆ.
‘ನಾವು ಆತನಿಗೆ ಕರೆ ಮಾಡಿ ವಿಷಯವನ್ನು ವಿವರಿಸಲು ಪ್ರಯತ್ನಿಸಿದೆವು. ಆದರೆ, ಆತನಿಗೆ ಅರ್ಥವಾಗಲಿಲ್ಲ. ಹೀಗಾಗಿ, ಇಂದು ಆತನಿಗೆ ಸರಿಯಾಗಿ ಅರ್ಥವಾಗುವಂತೆ ವಿವರಿಸಿದ್ದೇವೆ’ ಎಂದು ಸಂದೇಶದಲ್ಲಿ ಹೇಳಲಾಗಿದೆ.
ಮೂಲಗಳ ಪ್ರಕಾರ, ರವಿವಾರ ಸಂಜೆ ಜುಹು ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೋಟಾರ್ ಸೈಕಲ್ನಲ್ಲಿ ಬಂದಿದ್ದ ಮೂವರು ವ್ಯಕ್ತಿಗಳು ಭಾಗಿಯಾಗಿದ್ದರು. ಘಟನೆ ನಡೆದಾಗ ಟೈಗರ್ ಶ್ರಾಫ್ ಫುಟ್ಬಾಲ್ ಮೈದಾನದಿಂದ ಹೊರಬರುತ್ತಿದ್ದರು ಎಂದು ವರದಿಯಾಗಿದೆ.
ಸಲ್ಮಾನ್ ಖಾನ್ಗೆ ಸರಣಿ ಬೆದರಿಕೆ
ಪ್ರಸ್ತುತ ಗುಜರಾತ್ ನ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್, ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಹಲವು ಬಾರಿ ಬೆದರಿಕೆ ಹಾಕಿದ್ದಾನೆ. ಬಿಷ್ಣೋಯ್ ಗ್ಯಾಂಗ್ ನಿಂದ ಸಲ್ಮಾನ್ ಖಾನ್ ಗೆ ಸರಣಿ ಬೆದರಿಕೆಗಳು ಬಂದಿದ್ದು, ಅವರೊಂದಿಗೆ ಗುರುತಿಸಿಕೊಂಡಿರುವ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಬೆದರಿಕೆ ಹಾಕಿರುವ ಆರೋಪಗಳೂ ಕೇಳಿಬಂದಿವೆ.
‘ಸಲ್ಮಾನ್ ಖಾನ್ ಕ್ಷಮೆ ಕೇಳದಿದ್ದರೆ, ಅವರ ಕುಟುಂಬದ ಯಾರನ್ನೂ ಬಿಡುವುದಿಲ್ಲ. ಕೊನೆಗೆ ಅವರ ಸಾಕು ನಾ*ಗಳನ್ನೂ ಬಿಡುವುದಿಲ್ಲ’ ಎಂದು ಬಿಷ್ಣೋಯ್ ಗ್ಯಾಂಗ್ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಆದರೆ, ಟೈಗರ್ ಶ್ರಾಫ್ ಮೇಲಿನ ದಾಳಿಯಲ್ಲಿ ಬಿಷ್ಣೋಯ್ ಗ್ಯಾಂಗ್ನ ಪಾತ್ರವಿರುವುದು ಇನ್ನೂ ದೃಢಪಟ್ಟಿಲ್ಲ.