ಆರೋಪಿ ಕಲ್ಯಾಣ್ ಬೈನ್ಸ್ಲಾ (Photo: TOI)

ಗುರುಗ್ರಾಮ್: ಮಹಿಳಾ ಬೈಕರ್ ಮೇಲೆ ನಡೆದ ಹಿಟ್-ಆ್ಯಂಡ್‌-ರನ್ ಪ್ರಕರಣದಲ್ಲಿ ಗುರುಗ್ರಾಮ್ ಪೊಲೀಸರು ಎಫ್ಐಆರ್‌ನಲ್ಲಿ ಕೊಲೆ ಯತ್ನದ ಸೆಕ್ಷನ್ ಅನ್ನು ಸೇರಿಸಿದ್ದು, ಆರೋಪಿ ಕಾರುಚಾಲಕನನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.

ಘಟನೆಯ ವಿಡಿಯೋ ಸಾಕ್ಷ್ಯವಿದ್ದರೂ ಎಫ್ಐಆರ್‌ನಲ್ಲಿ ಕೊಲೆ ಯತ್ನದ ಆರೋಪವನ್ನು ಆರಂಭದಲ್ಲಿ ಸೇರಿಸಿರಲಿಲ್ಲ ಎಂದು ಆರೋಪಿಸಿ ಸಂತ್ರಸ್ತೆ ಸಿಯಾ ಮತ್ತು ಅವರ ಕುಟುಂಬಸ್ಥರು ಪೊಲೀಸರ ನಿರ್ಲಕ್ಷ್ಯವನ್ನು ಪ್ರಶ್ನಿಸಿದ್ದರು. ಬಳಿಕ ಪೊಲೀಸರು ಎಫ್ಐಆರ್‌ಗೆ ಕೊಲೆ ಯತ್ನದ ಸೆಕ್ಷನ್ ಅನ್ನು ಸೇರಿಸಿದ್ದಾರೆ.

ಇದಕ್ಕೂ ಮುನ್ನ, ಸಿಯಾ ಅವರ ತಂದೆ, ಸಹೋದರ ಹಾಗೂ ಇತರ ಕುಟುಂಬ ಸದಸ್ಯರು ಪೊಲೀಸರನ್ನು ಸಂಪರ್ಕಿಸಿ ಎಫ್ಐಆರ್‌ನಲ್ಲಿ ಸೂಕ್ತ ಸೆಕ್ಷನ್‌ಗಳನ್ನು ಸೇರಿಸುವಂತೆ ಮನವಿ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಸಂದೀಪ್ ಮಲಿಕ್, ಚಾಲಕ ಕಲ್ಯಾಣ್ ಬೈನ್ಸ್ಲಾ ಉದ್ದೇಶಪೂರ್ವಕವಾಗಿ ಬೈಕರ್‌ಗೆ ಢಿಕ್ಕಿ ಹೊಡೆದಿದ್ದು, ಆಕೆಯ ಹತ್ಯೆಗೆ ಪ್ರಯತ್ನಿಸಿದ್ದಾನೆ ಎಂಬುದನ್ನು ವೈರಲ್ ವೀಡಿಯೊದಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ.

“ತಲೆಮರೆಸಿಕೊಂಡಿದ್ದ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ದೌಸಾದಿಂದ ಬಂಧಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.

ಈ ಘಟನೆಯ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಸಿಯಾ, ಗುರುಗ್ರಾಮ್ ಪೊಲೀಸರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ಸರಿಯಾಗಿಲ್ಲ ಎಂದು ಆರೋಪಿಸಿದರು.

ಟ್ರಾಫಿಕ್ ಪೊಲೀಸರು ಸಾಮಾನ್ಯವಾಗಿ ಬೈಕರ್‌ಗಳಿಗೆ ದಂಡ ವಿಧಿಸಲು ಮುಂದಾಗುತ್ತಾರೆ. ಆದರೆ, ನಾಲ್ಕು ಚಕ್ರಗಳ ವಾಹನಗಳ ಚಾಲಕರ ವಿಚಾರದಲ್ಲಿ ತುಂಬಾ ಮೃದು ಧೋರಣೆ ತೋರುತ್ತಾರೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor