‘ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಲೇಬೇಕು’: ರಾಹುಲ್ ಗಾಂಧಿ
‘ದೇಶದ್ರೋಹಿ’ ಎಂದು ಆರೋಪ, ಬಿಜೆಪಿಯಿಂದ ತಿರುಗೇಟು
Photo Credit : ndtv
ಹೊಸದಿಲ್ಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸೇರಿದಂತೆ ಚುನಾವಣಾ ಆಯುಕ್ತರ ಆಕ್ಷೇಪಣೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಗುರುವಾರ ತೀವ್ರ ವಾಗ್ದಾಳಿ ನಡೆಸಿದರು.
‘ಮತಗಳನ್ನು ಕದಿಯಲಾಗುತ್ತಿದೆ’ ಎಂದು ಆರೋಪಿಸಿದ ಅವರು, ಇದರ ಪರಿಣಾಮವಾಗಿ ಸಂಸತ್ತು ರೂಪಿಸುವ ಕಾನೂನುಗಳೇ ಕಾನೂನುಬಾಹಿರವಾಗುತ್ತವೆ ಎಂದು ಹೇಳಿದರು. ಜ್ಞಾನೇಶ್ ಕುಮಾರ್ ಅವರನ್ನು ‘ದೇಶದ್ರೋಹಿ’ ಎಂದು ಕರೆದ ರಾಹುಲ್, ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗುವುದನ್ನು ಕಾಂಗ್ರೆಸ್ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ ಎಂದೂ ಎಚ್ಚರಿಸಿದರು.
ಹೊಸದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ 30 ವರ್ಷಗಳ ಕಾಲ ಅಧಿಕಾರದಲ್ಲಿರಲಿದೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗಳನ್ನು ಉಲ್ಲೇಖಿಸಿದರು.
ಪ್ರಜಾಪ್ರಭುತ್ವದಲ್ಲಿ ಯಾವುದೇ ರಾಜಕೀಯ ನಾಯಕರು ಇಷ್ಟು ವಿಶ್ವಾಸದಿಂದ ಮಾತನಾಡಲು ಸಾಧ್ಯವಿಲ್ಲ. ಏಕೆಂದರೆ ‘ಆಡಳಿತ ವಿರೋಧಿ ಅಲೆ’ ಎಂಬುದು ಪ್ರಜಾಪ್ರಭುತ್ವದ ಮೂಲಭೂತ ಶಕ್ತಿಯಾಗಿದೆ ಎಂದು ಅವರು ಹೇಳಿದರು.
“1971ರ ಬಾಂಗ್ಲಾದೇಶ ಯುದ್ಧದಲ್ಲಿ ಗೆದ್ದ ಬಳಿಕ ಇಂದಿರಾ ಗಾಂಧಿ ಅವರು ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಆದರೆ ಒಂದೆರಡು ವರ್ಷಗಳಲ್ಲೇ ಅವರು ಭಾರಿ ಆಡಳಿತ ವಿರೋಧಿ ಅಲೆ ಮತ್ತು ಒತ್ತಡವನ್ನು ಎದುರಿಸಬೇಕಾಯಿತು. ಕಾಂಗ್ರೆಸ್ ನಾಯಕರು ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರೂ ಸೇರಿದಂತೆ ಅನೇಕ ನಾಯಕರು ಇದೇ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಆದರೆ, ಕಾರಣವೇನೆಂದು ತಿಳಿಯದು, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಬಿಜೆಪಿಯ ವಿಷಯದಲ್ಲಿ ಮಾತ್ರ ಇದು ಸಂಭವಿಸುತ್ತಿಲ್ಲ” ಎಂದು ಅವರು ಪ್ರತಿಪಾದಿಸಿದರು.
“ಹರಿಯಾಣದಲ್ಲಿ ಕಳೆದ 50 ವರ್ಷಗಳಿಂದ ಅಧಿಕಾರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬದಲಾಗುತ್ತಾ ಬಂದಿದೆ. ಆದರೆ ಇದ್ದಕ್ಕಿದ್ದಂತೆ ಆಡಳಿತ ವಿರೋಧಿ ಅಲೆ ಮಾಯವಾಗುತ್ತದೆ. ಮಹಾರಾಷ್ಟ್ರದಲ್ಲೂ ಇದೇ ರೀತಿ ಆಗುತ್ತದೆ. ಅಲ್ಲಿಯೂ ಆ ಅಲೆ ಮಾಯವಾಗುತ್ತದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದಿಂದ ಬಹುಜನ ಸಮಾಜ ಪಕ್ಷಕ್ಕೆ ಅಧಿಕಾರ ಬದಲಾಗುತ್ತದೆ. ಅಲ್ಲಿಯೂ ಆ ಅಲೆ ಮಾಯವಾಗುತ್ತದೆ.
“ಇದು ನಮಗೆ ಮೂಲಭೂತ ಪ್ರಶ್ನೆಯಾಗಿದೆ. ಒಬ್ಬ ವ್ಯಕ್ತಿಯ ಜನಪ್ರಿಯತೆಯನ್ನು ನಾವು ಅರ್ಥಮಾಡಿಕೊಳ್ಳಬಹುದು. ಸರ್ಕಾರದ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಆಡಳಿತ ವಿರೋಧಿ ಅಲೆ ಹೇಗೆ ಮಾಯವಾಗುತ್ತದೆ ಎಂಬುದನ್ನು ನಮಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ” ಎಂದು ರಾಹುಲ್ ಹೇಳಿದರು.
► ‘ಮತದಾನ ಪ್ರಕ್ರಿಯೆಯೇ ನಾಶವಾದರೆ ಸಂವಿಧಾನವೂ ನಾಶ’
“ಚುನಾವಣಾ ಆಯೋಗದಿಂದ ರಕ್ಷಿಸಲ್ಪಡಬೇಕಾದ ಮತದಾನ ಪ್ರಕ್ರಿಯೆಯಿಂದಲೇ ನಮ್ಮ ಸಂವಿಧಾನ ತನ್ನ ಶಕ್ತಿಯನ್ನು ಪಡೆಯುತ್ತದೆ. ಸಂವಿಧಾನದಿಂದಲೇ ನಮ್ಮ ಕಾನೂನುಗಳು ರೂಪುಗೊಳ್ಳುತ್ತವೆ. ಕಾನೂನುಗಳಿಂದಲೇ ನಮ್ಮ ಸಂಸ್ಥೆಗಳು ಉದ್ಭವಿಸುತ್ತವೆ. ಇದೊಂದು ಸರಪಳಿ. ಈ ಸರಪಳಿಯೇ ಆಧುನಿಕ ಭಾರತವನ್ನು ವ್ಯಾಖ್ಯಾನಿಸುತ್ತದೆ.
“ಮತದಾನ ಪ್ರಕ್ರಿಯೆಯೇ ನಾಶವಾದರೆ, ನಮ್ಮ ಸಂವಿಧಾನವೂ ನಾಶವಾದಂತೆಯೇ. ಆಗ ಅದಕ್ಕೆ ತನ್ನ ಶಕ್ತಿ ಇರುವುದಿಲ್ಲ ಮತ್ತು ಅದು ಕಾರ್ಯನಿರ್ವಹಿಸುವುದಿಲ್ಲ. ಸಂವಿಧಾನವೇ ನಾಶವಾದರೆ, ನಮ್ಮ ಕಾನೂನುಗಳು ಕಾನೂನುಬಾಹಿರವಾಗುತ್ತವೆ. ಕಾನೂನುಗಳು ಕಾನೂನುಬಾಹಿರವಾದರೆ, ನಮ್ಮ ಸಂಸ್ಥೆಗಳು ಅರ್ಥಹೀನವಾಗುತ್ತವೆ. ಮತದ ಕಳ್ಳತನದಿಂದ ಕಾನೂನಿನ ಕಳ್ಳತನ ಉಂಟಾಗುತ್ತದೆ ಮತ್ತು ಅದರಿಂದ ಸಂಸ್ಥೆಗಳ ಕಳ್ಳತನವೂ ಉಂಟಾಗುತ್ತದೆ” ಎಂದು ಅವರು ಪ್ರತಿಪಾದಿಸಿದರು.
► ‘ಅಕ್ರಮ ನಡೆದಿದೆ ಎಂಬುದು ಶೇ 100 ಖಚಿತ’
2024ರ ಸಾರ್ವತ್ರಿಕ ಚುನಾವಣೆಗಳು ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಅಕ್ರಮಗಳು ನಡೆದಿವೆ ಎಂಬುದು ಶೇಕಡಾ 100ರಷ್ಟು ಖಚಿತ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ಇಬ್ಬರು ಚುನಾವಣಾ ಆಯುಕ್ತರು ಜ್ಞಾನೇಶ್ ಕುಮಾರ್ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾನೂ ಹಾಗೆಯೇ ಪ್ರಶ್ನೆಗಳನ್ನು ಎತ್ತಿದ್ದೇನೆ. ಆದರೆ ಆ ಪ್ರಶ್ನೆಗಳನ್ನು ನಿರ್ಲಕ್ಷಿಸಲಾಯಿತು. ಆದ್ದರಿಂದ ಸಂಸತ್ತಿನಲ್ಲಿರುವ ಸಂಸದರು ಕಳವು ಮಾಡಿದ ಮತಗಳ ಆಧಾರದ ಮೇಲೆ ಅಲ್ಲಿ ಕುಳಿತಿದ್ದಾರೆ. ಅವರು ರೂಪಿಸುವ ಯಾವುದೇ ಕಾನೂನು ಕಾನೂನುಬಾಹಿರವಾಗಿದೆ ಎಂಬುದನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ” ಎಂದು ಅವರು ಹೇಳಿದರು.
► ‘ರಾಜೀನಾಮೆ ನೀಡಿ, ಅಪ್ರೂವರ್ ಆಗಿ’
“ಜ್ಞಾನೇಶ್ ಕುಮಾರ್ ತಕ್ಷಣವೇ ರಾಜೀನಾಮೆ ನೀಡಬೇಕು. ನೀವು ಮಾಡಿರುವುದು ಭಾರತ ರಾಷ್ಟ್ರದ ವಿರುದ್ಧದ ಕೃತ್ಯ. ಇದು ಭಾರತದ ಸಂವಿಧಾನದ ಮೇಲಿನ ದಾಳಿ. ಭಾರತದಲ್ಲಿ ಪ್ರಜಾಪ್ರಭುತ್ವ ನಾಶವಾಗುವುದನ್ನು ನಾವು ಸುಮ್ಮನೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ.
“ಇದಕ್ಕೆ ಕಾರಣರಾದವರು ಶಿಕ್ಷೆಯನ್ನು ಅನುಭವಿಸಲೇಬೇಕು. ಇಂದು ಇಲ್ಲದಿದ್ದರೆ ನಾಳೆ, ನಾಳೆ ಇಲ್ಲದಿದ್ದರೆ ಅದರ ಮರುದಿನವಾದರೂ ಸರಿ. ಇಬ್ಬರು ಚುನಾವಣಾ ಆಯುಕ್ತರು ವಿವೇಕಯುತವಾದ ಕೆಲಸ ಮಾಡಿದ್ದಾರೆ.
“ಜ್ಞಾನೇಶ್ ಕುಮಾರ್ ತಾವು ಇರುವ ಹುದ್ದೆಯ ಬಗ್ಗೆ ಗಂಭೀರವಾಗಿ ಯೋಚಿಸಿ, ‘ಅಪ್ರೂವರ್’ (ಸಾಕ್ಷಿದಾರ) ಆಗಬೇಕು. ಅದು ರಾಷ್ಟ್ರಪ್ರೇಮದ ಕೆಲಸವಾಗುತ್ತದೆ” ಎಂದು ರಾಹುಲ್ ಗಾಂಧಿ ಸಲಹೆ ನೀಡಿದರು.
► ‘ನಿಷ್ಫಲ ಪ್ರಯತ್ನ’: ಬಿಜೆಪಿ
ರಾಯ್ ಬರೇಲಿ ಸಂಸದ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯನ್ನು ಬಿಜೆಪಿ ‘ನಿಷ್ಫಲ ಪ್ರಯತ್ನ’ ಎಂದು ಟೀಕಿಸಿದೆ. ಅವರನ್ನು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ಜನರ ಬೆಂಬಲ ಪಡೆಯಲು ಸಾಧ್ಯವಾಗದ ಹತಾಶ ನಾಯಕ ಎಂದು ಹೇಳಿದೆ.
“ಭಾರತದ ಜನರು ಪ್ರಜಾಸತ್ತಾತ್ಮಕವಾಗಿ ಗಾಂಧಿ–ವಧ್ರಾ ಕುಟುಂಬವನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಹೀಗಾಗಿ ‘ಪ್ರಜಾಪ್ರಭುತ್ವದ ಕಳ್ಳ’ ಆಗಿರುವ ಕಾಂಗ್ರೆಸ್ ಹತಾಶೆಗೊಂಡಿದೆ” ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ತಿರುಗೇಟು ನೀಡಿದ್ದಾರೆ.