Keralam | CJP ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಬೇಕಿತ್ತು ಎಂದು ವೀಡಿಯೋ ಪೋಸ್ಟ್ ಮಾಡಿದ ಆರೋಪ; RSS ಬೆಂಬಲಿಗ ಟಿ.ಜಿ.ಮೋಹನ್ ದಾಸ್ ಪೊಲೀಸ್ ವಶಕ್ಕೆ
ಟಿ.ಜಿ. ಮೋಹನ್ ದಾಸ್ | Photo Credit : X\ @mohandastg
ಕೊಚ್ಚಿ, ಆ. 9: ಹೊಸದಿಲ್ಲಿಯ ಜಂತರ್ ಮಂತರ್ ಬಳಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ವಿವಾದಾತ್ಮಕ ಹಾಗೂ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ RSS ಪರ ಒಲವು ಹೊಂದಿರುವ ಟಿ.ಜಿ.ಮೋಹನ್ ದಾಸ್ ರನ್ನು ಸೈಬರ್ ಅಪರಾಧ ಘಟಕದ ಪೊಲೀಸರು ಕೊಚ್ಚಿಯ ಮಟ್ಟಂಚೆರ್ರಿಯಲ್ಲಿರುವ ಅವರ ನಿವಾಸದಿಂದ ವಶಕ್ಕೆ ಪಡೆದಿದ್ದಾರೆ.
ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ಹಾಗೂ ಮೋಹನ್ ದಾಸ್ ಅವರನ್ನು ವಿಚಾರಣೆಗೆ ಒಳಪಡಿಸಲು ಸೈಬರ್ ಅಪರಾಧ ಪೊಲೀಸರ ತಂಡವು ಅವರ ನಿವಾಸಕ್ಕೆ ಆಗಮಿಸಿತ್ತು.
CJP ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಮೋಹನ್ ದಾಸ್ ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ದ್ವೇಷ ಭಾಷಣದ ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳಾ ಪ್ರತಿಭಟನಾಕಾರರ ವಿರುದ್ಧವೂ ಅವರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎಂದು ಆರೋಪಿಸಲಾಗಿದೆ.
ತಿರುವನಂತಪುರಂನ ಸೈಬರ್ ಘಟಕದ ತಂಡವು ಕೊಚ್ಚಿಯ ಮಟ್ಟಂಚೆರ್ರಿಯಲ್ಲಿರುವ ಅವರ ನಿವಾಸದಲ್ಲಿ ಶೋಧ ಕಾರ್ಯವನ್ನೂ ನಡೆಸಿತು.
ಇದಕ್ಕೂ ಹತ್ತು ದಿನಗಳ ಹಿಂದೆ, ಗಲಭೆಗೆ ಪ್ರಚೋದನೆ ನೀಡಿದ ಆರೋಪ ಸೇರಿದಂತೆ ವಿವಿಧ ಶಾಸನಾತ್ಮಕ ಅವಕಾಶಗಳ ಅಡಿಯಲ್ಲಿ ತಿರುವನಂತಪುರಂ ನಗರ ಸೈಬರ್ ಅಪರಾಧ ಪೊಲೀಸರು ಮೋಹನ್ ದಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ದಿಲ್ಲಿಯಲ್ಲಿ ಕರ್ಫ್ಯೂ ಹೇರಿದ ಬಳಿಕ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಬೇಕಿತ್ತು ಎಂದು ಹೇಳಿರುವ ವೀಡಿಯೊವೊಂದನ್ನು ಮೋಹನ್ ದಾಸ್ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದರು. ಈ ವೀಡಿಯೊ ಹಾಗೂ ವಿದ್ಯಾರ್ಥಿ ಪ್ರತಿಭಟನಾಕಾರರ ವಿರುದ್ಧ ಅವರು ಮಾಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ಸೈಬರ್ ಅಪರಾಧ ಘಟಕದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.