×
Ad

15 ಕೋಟಿ ಬಳಕೆದಾರರ ಹಕ್ಕುಗಳನ್ನು ಮೊಟಕುಗೊಳಿಸುವುದು ಹೇಗೆ?; ಟೆಲಿಗ್ರಾಮ್ ನಿಷೇಧದ ಕುರಿತು ದಿಲ್ಲಿ ಹೈಕೋರ್ಟ್ ಪ್ರಶ್ನೆ

Update: 2026-06-18 22:06 IST

ಹೊಸದಿಲ್ಲಿ, ಜೂ. 18: ನೀಟ್-ಯುಜಿ ಮರು ಪರೀಕ್ಷೆಯ ಮುನ್ನ ಟೆಲಿಗ್ರಾಮ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಕ್ರಮವನ್ನು ದಿಲ್ಲಿ ಉಚ್ಚ ನ್ಯಾಯಾಲಯ ಗುರುವಾರ ಪ್ರಶ್ನಿಸಿದೆ.

ಕೇವಲ ಒಂದು ವರ್ಗದ ನಾಗರಿಕರು ಪರೀಕ್ಷೆ ಬರೆಯುತ್ತಿದ್ದಾರೆ ಎಂಬ ಕಾರಣಕ್ಕೆ 15 ಕೋಟಿ ಬಳಕೆದಾರರ ಹಕ್ಕುಗಳನ್ನು ಮೊಟಕುಗೊಳಿಸುವುದು ಹೇಗೆ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ನೀಟ್-ಯುಜಿ ಮರು ಪರೀಕ್ಷೆಯ ಮುನ್ನ ಟೆಲಿಗ್ರಾಮ್ ಅನ್ನು ನಿಷೇಧಿಸಿದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಟೆಲಿಗ್ರಾಮ್ ಸಲ್ಲಿಸಿದ ಅರ್ಜಿಯ ಕುರಿತ ವಾದ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ರಜಾಕಾಲದ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿತು.

ವಿಚಾರಣೆ ಸಂದರ್ಭ ಕೇಂದ್ರ ಸರಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತು. ಟೆಲಿಗ್ರಾಮ್ ಆ್ಯಪ್ ಬಾಟ್ ಮೂಲ ಸೌಕರ್ಯವನ್ನು ಒದಗಿಸುತ್ತದೆ. ಇದನ್ನು ಭಾರೀ ಪ್ರಮಾಣದಲ್ಲಿ ಮಾಹಿತಿ ಪ್ರಸಾರ ಮಾಡಲು ಬಳಸಬಹುದು ಎಂದು ಅದು ವಾದಿಸಿತು.

ಕೇಂದ್ರ ಸರಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಒಂದೇ ಟೆಲಿಗ್ರಾಮ್ ಖಾತೆಯಲ್ಲಿ ಗರಿಷ್ಠ 40 ಬಾಟ್‌ಗಳನ್ನು ರಚಿಸಬಹುದು. ಸರಕಾರಕ್ಕೆ ಇತರ ಮಧ್ಯವರ್ತಿ ವೇದಿಕೆಗಳೊಂದಿಗೆ ಈ ರೀತಿಯ ಸಮಸ್ಯೆ ಇಲ್ಲ ಎಂದು ಹೇಳಿದರು.

ಟೆಲಿಗ್ರಾಮ್ ಪರವಾಗಿ ಹಿರಿಯ ವಕೀಲ ಧ್ರುವ್ ಮೆಹ್ತಾ ಹಾಜರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News