Photo Credit : indiatoday

ಮುಂಬೈ: ಪ್ರಸ್ತಾಪಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ವಿರುದ್ಧ ದನಿ ಎತ್ತಿರುವ ಶಿವಸೇನೆ (UBT) ಮುಖ್ಯಸ್ಥ ಉದ್ಧವ್ ಠಾಕ್ರೆ, ಮಹಾರಾಷ್ಟ್ರದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುವಂತೆ ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಅವರಿಗೆ ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಎರಡೂ ಕಡೆಗಳ ರಾಜಕೀಯ ನಿಲುವುಗಳನ್ನು ಕಾಯ್ದುಕೊಳ್ಳಲು ಪ್ರಯತ್ನಿಸದೆ, ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸ್ಪಷ್ಟ ನಿಲುವು ತಳೆಯಬೇಕು ಎಂದು ಹೇಳಿದ್ದಾರೆ.

ತಮಗೂ ಕರೆಗಳು ಮತ್ತು ಸ್ಥಾನಮಾನದ ಆಫರ್‌ ಗಳು ಬಂದಿದ್ದವು ಎಂದು ಬಹಿರಂಗಪಡಿಸಿದ ಠಾಕ್ರೆ, ತಮ್ಮ ಪಕ್ಷದ ಹಿತಾಸಕ್ತಿಯನ್ನು ರಕ್ಷಿಸುವುದಕ್ಕೆ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಪವಾರ್ ಅವರೊಂದಿಗೆ ಮಾತನಾಡಲು ತಮಗೆ ಯಾವುದೇ ತೊಂದರೆಯಿಲ್ಲ ಎಂದ ಠಾಕ್ರೆ, ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಎರಡೂ ಕಡೆಗಳಲ್ಲಿ ನಿಲ್ಲುವ ಪ್ರಯತ್ನ ಮಾಡಬಾರದು ಎಂದು ಎಚ್ಚರಿಸಿದ್ದಾರೆ.

► ಉತ್ತರ ಪ್ರದೇಶಕ್ಕೆ ಹೆಚ್ಚಿನ ಸ್ಥಾನಗಳ ಆತಂಕ

ಬಿಜೆಪಿ ರೂಪಿಸಿರುವ ಪ್ರಸ್ತಾಪಿತ ಕ್ಷೇತ್ರ ಪುನರ್ವಿಂಗಡಣೆ ಯೋಜನೆಯಿಂದ ಮಹಾರಾಷ್ಟ್ರ ಮತ್ತು ದಕ್ಷಿಣ ರಾಜ್ಯಗಳ ರಾಜಕೀಯ ಪ್ರಾತಿನಿಧ್ಯ ದುರ್ಬಲಗೊಳ್ಳಲಿದ್ದು, ಉತ್ತರ ಪ್ರದೇಶದ ಪ್ರಾತಿನಿಧ್ಯ ಹೆಚ್ಚಾಗಲಿದೆ ಎಂಬುದು ಠಾಕ್ರೆ ಅವರ ಆರೋಪ.

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗಾಗಿ ರಚಿಸಿರುವ ಸಮಿತಿಯ ಸ್ವರೂಪದ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಸಮಿತಿಗೆ ಸೇರ್ಪಡೆಗೊಳಿಸಿರುವುದನ್ನು ಆಕ್ಷೇಪಿಸಿದ ಅವರು, ಚುನಾವಣಾ ಆಯೋಗದಲ್ಲಿ ಕುಮಾರ್ ಅವರ ಪಾತ್ರದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂ ಕೋರ್ಟ್‌ ನ ನಿವೃತ್ತ ನ್ಯಾಯಾಧೀಶರು ಸೇರಿದಂತೆ ಸಮಿತಿಯ ಇತರ ಸದಸ್ಯರ ನಿಷ್ಪಕ್ಷಪಾತದ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದ್ದಾರೆ.

"ಇದು ಹೇಗೆ ನ್ಯಾಯಯುತವಾಗಲು ಸಾಧ್ಯ? ಮೋದಿ ಮತ್ತು ಶಾ ಇದನ್ನು ರೂಪಿಸಿದ್ದಾರೆ. ಏನು ಮಾಡಬೇಕೆಂದು ಅವರು ಈಗಾಗಲೇ ಯೋಜಿಸಿದ್ದಾರೆ. ನಂತರ ಅವರು ಬಂದು ಕೇವಲ ಸಹಿ ಹಾಕುತ್ತಾರೆ ಅಷ್ಟೇ" ಎಂದು ಆರೋಪಿಸಿದ್ದಾರೆ.

ಕ್ಷೇತ್ರಗಳ ಪುನರ್ವಿಂಗಡಣೆಯ ಮೂಲಕ ವಿರೋಧ ಪಕ್ಷಗಳ ಸಾಂಪ್ರದಾಯಿಕ ಮತಬ್ಯಾಂಕ್‌ ಗಳನ್ನು ದುರ್ಬಲಗೊಳಿಸಿ ಬಿಜೆಪಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಸ್ತಾಪದಿಂದ ಉತ್ತರ ಪ್ರದೇಶ ಮತ್ತು ತಮಿಳುನಾಡಿನ ನಡುವಿನ ಸ್ಥಾನಗಳ ಅಂತರ ಈಗಿರುವ 41ರಿಂದ 61ಕ್ಕೆ ಏರಿಕೆಯಾಗಲಿದೆ ಎಂದು ಠಾಕ್ರೆ ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ನಡುವಿನ ಸ್ಥಾನಗಳ ವ್ಯತ್ಯಾಸವೂ ಪ್ರಸ್ತುತ 32ರಿಂದ 48ಕ್ಕೆ ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.

"ಉತ್ತರ ಪ್ರದೇಶದಲ್ಲಿ ಒಂದು ಮಹಾರಾಷ್ಟ್ರದಷ್ಟು ಸ್ಥಾನಗಳು ಹೆಚ್ಚಾಗಲಿವೆ" ಎಂದು ಹೇಳಿರುವ ಅವರು, ಇದರಿಂದ ಮಹಾರಾಷ್ಟ್ರ ಮತ್ತು ತಮಿಳುನಾಡಿನಂತಹ ರಾಜ್ಯಗಳ ರಾಜಕೀಯ ಪ್ರಭಾವ ಕುಗ್ಗಬಹುದು ಎಂದು ಎಚ್ಚರಿಸಿದ್ದಾರೆ.

ಸ್ಟಾಲಿನ್‌ಗೆ ಮನವಿ; ಮಹಿಳಾ ಮೀಸಲಾತಿ ಪ್ರತ್ಯೇಕವಾಗಿ ಜಾರಿಗೆ ಆಗ್ರಹ

ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಯಿಂದ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯದ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವಂತೆ ಎಂ.ಕೆ. ಸ್ಟಾಲಿನ್ ಅವರಿಗೆ ಠಾಕ್ರೆ ಮನವಿ ಮಾಡಿದ್ದಾರೆ.

"ಸ್ಟಾಲಿನ್ ಅವರು ಕಣ್ಣು ತೆರೆದು ನೋಡಬೇಕು. ತಮ್ಮ ರಾಜ್ಯದ ಜನರಿಗೆ ಮೋಸವಾಗಿದೆ ಎಂಬ ಭಾವನೆ ಉಂಟಾಗಬಾರದು" ಎಂದು ಹೇಳಿರುವ ಅವರು, ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯ ದುರ್ಬಲಗೊಳ್ಳಲು ಅವಕಾಶ ನೀಡಿದವರನ್ನು ಮುಂದಿನ ಪೀಳಿಗೆ ಪ್ರಶ್ನಿಸಲಿದೆ ಎಂದು ಎಚ್ಚರಿಸಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆಯನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಜೋಡಿಸುವುದಕ್ಕೂ ಠಾಕ್ರೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಸ್ತಿತ್ವದಲ್ಲಿರುವ ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

"ಅಸ್ತಿತ್ವದಲ್ಲಿರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವುದನ್ನು ನಾವು ಬೆಂಬಲಿಸುತ್ತೇವೆ. ಮಹಿಳಾ ಮೀಸಲಾತಿ ಮಸೂದೆಗೂ ನಮ್ಮ ಬೆಂಬಲವಿದೆ. ಆದರೆ ಅದನ್ನು ಕ್ಷೇತ್ರ ಮರುವಿಂಗಡಣೆಯೊಂದಿಗೆ ಸೇರಿಸದೆ ಪ್ರತ್ಯೇಕವಾಗಿ ಮಂಡಿಸಬೇಕು" ಎಂದು ಹೇಳಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಮುಂದುವರಿಸಲು ಬಿಜೆಪಿ ಮಹಿಳಾ ಮೀಸಲಾತಿ ವಿಷಯವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿರುವ ಅವರು, ಎರಡೂ ವಿಷಯಗಳನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

2017ರಲ್ಲಿ ಬೃಹನ್ಮುಂಬೈ ಮಹಾನಗರ ಪಾಲಿಕೆಯ ವಾರ್ಡ್‌ಗಳ ಪುನರ್ವಿಂಗಡಣೆ ಸಂದರ್ಭದಲ್ಲಿ ಶಿವಸೇನೆ ಪ್ರಬಲವಾಗಿದ್ದ ವಾರ್ಡ್‌ ಗಳನ್ನು ಬಿಜೆಪಿ ವಿಭಜಿಸಿತ್ತು ಎಂದು ಠಾಕ್ರೆ ಆರೋಪಿಸಿದ್ದಾರೆ. ಇದೇ ರೀತಿಯ ಪ್ರಕ್ರಿಯೆಯನ್ನು ಈಗ ಲೋಕಸಭೆ ಮತ್ತು ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯಿಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಸಂಸದರ ಸಂಖ್ಯೆಯನ್ನು ಹೆಚ್ಚಿಸುವ ಹಿಂದಿನ ತರ್ಕವನ್ನೂ ಅವರು ಪ್ರಶ್ನಿಸಿದ್ದಾರೆ. 26 ಲಕ್ಷ ಜನರಿಗೆ ಒಬ್ಬ ಸಂಸದ ಸಾಕಾಗುವುದಿಲ್ಲ ಎಂಬ ವಾದವನ್ನು ಮುಂದಿಡುವುದಾದರೆ, ಇದೇ ತರ್ಕವನ್ನು ಪ್ರಧಾನ ಮಂತ್ರಿ ಹುದ್ದೆಗೂ ಅನ್ವಯಿಸಬಹುದಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕ ಆಮಿಷಗಳಿಗೆ ಒಳಗಾಗಿ ಪ್ರಸ್ತಾಪಿತ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಬೆಂಬಲಿಸದಂತೆ ಮಹಾರಾಷ್ಟ್ರದ ಸಂಸದರಿಗೆ ಠಾಕ್ರೆ ಕರೆ ನೀಡಿದ್ದಾರೆ.

"ಇಂದು ಹಣದ ಆಮಿಷಕ್ಕೆ ಬಲಿಯಾಗಬೇಡಿ. ಏಕೆಂದರೆ ನಾಳೆ ಅವರು ನಿಮ್ಮನ್ನು ಕಸದ ಬುಟ್ಟಿಗೆ ಎಸೆದುಬಿಡುತ್ತಾರೆ" ಎಂದು ಎಚ್ಚರಿಸಿದ್ದಾರೆ.

ಈ ವಿಷಯದಲ್ಲಿ ನಿಲುವು ತೆಗೆದುಕೊಳ್ಳುವಾಗ ಸಮಾಜ ಸುಧಾರಕರಾದ ಜ್ಯೋತಿರಾವ್ ಫುಲೆ, ಶಾಹು ಮಹಾರಾಜ್ ಮತ್ತು ಬಿ.ಆರ್. ಅಂಬೇಡ್ಕರ್ ಅವರ ಪರಂಪರೆಯನ್ನು ಗಮನದಲ್ಲಿಟ್ಟುಕೊಳ್ಳುವಂತೆಯೂ ಶರದ್ ಪವಾರ್ ಅವರನ್ನು ಒತ್ತಾಯಿಸಿದ್ದಾರೆ.

"ಅವರು ಅದರಂತೆ ನಡೆದುಕೊಳ್ಳದಿದ್ದರೆ, ಕೊನೆಗೆ ಕಣ್ಣೀರು ಹಾಕುವುದನ್ನು ಬಿಟ್ಟರೆ ಬೇರೇನೂ ಉಳಿಯುವುದಿಲ್ಲ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.