BRICS Foreign Ministers' Meeting | ಮಿನಾಬ್ 168 ವಿಮಾನದಲ್ಲಿ ದಿಲ್ಲಿಗೆ ಬಂದ ಇರಾನ್ ನ ವಿದೇಶಾಂಗ ಸಚಿವ ಅರಾಗ್ಛಿ
ಇಸ್ರೇಲ್ - ಅಮೆರಿಕ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ 168 ಬಾಲಕಿಯರ ಸ್ಮರಣಾರ್ಥ ಹೆಸರಿಟ್ಟ ಇರಾನ್ ವಿಮಾನ
Photo Credit ; NDTV
ಹೊಸದಿಲ್ಲಿ: ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಅಧಿಕೃತ ಭಾರತ ಭೇಟಿಗಾಗಿ ಇರಾನ್ ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಛಿ ಗುರುವಾರ ಹೊಸದಿಲ್ಲಿಗೆ ಆಗಮಿಸಿದರು. ಮಧ್ಯಪ್ರಾಚ್ಯದಲ್ಲಿ ಎರಡು ತಿಂಗಳಿಗಿಂತ ಹೆಚ್ಚು ಕಾಲದಿಂದ ಮುಂದುವರಿದಿರುವ ಬಿಕ್ಕಟ್ಟಿನ ಬಳಿಕ ಉನ್ನತ ಮಟ್ಟದ ರಾಜತಾಂತ್ರಿಕ ಸಭೆಯಲ್ಲಿ ಇರಾನ್ ಪಾಲ್ಗೊಳ್ಳುತ್ತಿರುವುದು ಇದೇ ಮೊದಲ ಬಾರಿ ಎಂದು ಹೇಳಲಾಗಿದೆ.
ಅರಾಗ್ಛಿ ಅವರು ಎರಡು ದಿನಗಳ ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಲಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯನ್ನೂ ನಡೆಸಲಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ ತೀವ್ರಗೊಂಡಿರುವ ಬಿಕ್ಕಟ್ಟಿನ ಕುರಿತು ಈ ವೇಳೆ ಸಮಗ್ರ ಚರ್ಚೆ ನಡೆಯುವ ಸಾಧ್ಯತೆ ಇದೆ.
ಅರಾಗ್ಛಿಯ ಭಾರತ ಭೇಟಿಯ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ‘ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ಆಗಮಿಸಿರುವ ಇರಾನ್ ನ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಛಿ ಅವರಿಗೆ ಆತ್ಮೀಯ ಸ್ವಾಗತ’ ಎಂದು ತಿಳಿಸಿದ್ದಾರೆ.
ಅರಾಗ್ಛಿಯನ್ನು ಭಾರತಕ್ಕೆ ಕರೆತಂದ ವಿಮಾನಕ್ಕೆ ‘ಮಿನಾಬ್ 168’ ಎಂದು ಹೆಸರಿಡಲಾಗಿದೆ. ಇರಾನ್ ನ ಮಿನಾಬ್ ನಗರದಲ್ಲಿನ ಶಾಲೆಯೊಂದರ ಮೇಲೆ ಇಸ್ರೇಲ್–ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಮೃತಪಟ್ಟ 168 ಬಾಲಕಿಯರ ಸ್ಮರಣಾರ್ಥ ಈ ಹೆಸರು ಇಡಲಾಗಿದೆ ಎಂದು ತಿಳಿಸಲಾಗಿದೆ.
ಅರಾಗ್ಛಿ ಮತ್ತು ಜೈಶಂಕರ್ ನಡುವಿನ ಮಾತುಕತೆಯಲ್ಲಿ ಹಾರ್ಮುಝ್ ಜಲಸಂಧಿಯ ಸ್ಥಿತಿಗತಿ ಕುರಿತು ಕೂಡ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಜಾಗತಿಕ ತೈಲ ಪೂರೈಕೆಯ ಶೇ.20ರಷ್ಟು ಸಾಗಣೆ ನಡೆಯುವ ಪ್ರಮುಖ ಜಲಮಾರ್ಗವಾದ ಹಾರ್ಮುಝ್ ಜಲಸಂಧಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಜಾಗತಿಕ ಇಂಧನ ಪೂರೈಕೆ ಸರಪಣಿಯ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ. ಉಳಿದ ವಾಣಿಜ್ಯ ಹಡಗುಗಳಿಗೂ ಹಾರ್ಮುಝ್ ಜಲಸಂಧಿಯಲ್ಲಿ ಸುರಕ್ಷಿತವಾಗಿ ಸಂಚರಿಸಲು ಅವಕಾಶ ನೀಡಬೇಕು ಎಂಬುದನ್ನು ಭಾರತ ಮಾತುಕತೆಯಲ್ಲಿ ಬಲವಾಗಿ ಪ್ರತಿಪಾದಿಸಲಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸುವ ಕಾರ್ಯಕ್ರಮವೂ ನಿಗದಿಯಾಗಿದೆ. ಬ್ರಿಕ್ಸ್ ವಿದೇಶಾಂಗ ಸಚಿವರ ಸಭೆಯಲ್ಲಿ ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ಜಾಗತಿಕ ಇಂಧನ ಪೂರೈಕೆ ಸರಪಣಿಯ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ಪ್ರಮುಖ ಚರ್ಚೆ ನಡೆಯುವ ನಿರೀಕ್ಷೆಯಿದೆ.