ಮಲ್ಲಿಕಾರ್ಜುನ ಖರ್ಗೆ / ಎಂ.ಕೆ. ಸ್ಟಾಲಿನ್ (Photo: PTI)

ಹೊಸದಿಲ್ಲಿ: ಕೇಂದ್ರ ಸರಕಾರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ಸೂಚಿಸಿರುವ ಹಿನ್ನೆಲೆಯಲ್ಲಿ, ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಮನವೊಲಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದ INDIA ಮೈತ್ರಿಕೂಟದ ಹಿರಿಯ ನಾಯಕರ ನಿಯೋಗ ರವಿವಾರ ಚೆನ್ನೈಗೆ ತೆರಳಲಿದೆ.

ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಲಿರುವ ನಿಯೋಗದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, RJD ಸಂಸದೆ ಮಿಸಾ ಭಾರತಿ ಸೇರಿದಂತೆ ಹಲವು ಪ್ರಮುಖ ನಾಯಕರು ಇರಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣದ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ, ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡ ನಿಯೋಗದಲ್ಲಿ ಭಾಗವಹಿಸಲಿದ್ದಾರೆ. ಸಮಾಜವಾದಿ ಪಕ್ಷದ ಸಂಸದ ರಾಜೀವ್ ರಾಯ್ ಸೇರಿದಂತೆ ಇತರ ನಾಯಕರು ಕೂಡ ಭೇಟಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ನ. 29ರಂದು ಬೆಳಗ್ಗೆ 11 ಗಂಟೆಗೆ ಹೊಸದಿಲ್ಲಿಯಿಂದ ನಿಯೋಗದ ವಿಮಾನ ಹೊರಡುವ ನಿರೀಕ್ಷೆಯಿದೆ.

ಕೇಂದ್ರದ ಪ್ರಸ್ತಾವಿತ ಕ್ಷೇತ್ರ ಪುನರ್ವಿಂಗಡಣೆ ಮಸೂದೆಗಳಿಗೆ ಡಿಎಂಕೆ ಬೆಂಬಲ ಸೂಚಿಸಿರುವುದು INDIA ಮೈತ್ರಿಕೂಟದ ನಾಯಕರ ನಡುವೆ ಚರ್ಚೆಗೆ ಕಾರಣವಾಗಿದೆ. ಡಿಎಂಕೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಮಸೂದೆಗಳಿಗೆ ಬೆಂಬಲ ಸೂಚಿಸುವ ನಿರ್ಣಯ ಕೈಗೊಂಡಿದೆ. ತಮಿಳುನಾಡಿನ ಲೋಕಸಭಾ ಸ್ಥಾನಗಳ ಪಾಲು ಕಡಿಮೆಯಾಗದಂತೆ ನೋಡಿಕೊಳ್ಳುವುದು ಪಕ್ಷದ ನಿಲುವಾಗಿದೆ ಎಂದು ಡಿಎಂಕೆ ನಾಯಕ ಎ. ರಾಜಾ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸ್ಟಾಲಿನ್ ಅವರನ್ನು ಭೇಟಿಯಾಗಿ ಮಸೂದೆಯ ಕುರಿತು ತಮ್ಮ ಆತಂಕಗಳನ್ನು ವಿವರಿಸುವುದು ಹಾಗೂ ವಿರೋಧ ಪಕ್ಷಗಳ ನಡುವೆ ಒಮ್ಮತ ಮೂಡಿಸುವುದು ನಿಯೋಗದ ಉದ್ದೇಶವಾಗಿದೆ.

ನ. 30ರಿಂದ ಡಿ. 3ರವರೆಗೆ ನಡೆಯಲಿರುವ ವಿಶೇಷ ಸಂಸತ್ ಅಧಿವೇಶನದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಮಹಿಳಾ ಮೀಸಲಾತಿಯನ್ನು ಈಗಿರುವ ಲೋಕಸಭಾ ಸ್ಥಾನಗಳ ಆಧಾರದಲ್ಲೇ ಜಾರಿಗೊಳಿಸಬೇಕು ಹಾಗೂ ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಲೋಕಸಭಾ ಪ್ರಾತಿನಿಧ್ಯಕ್ಕೆ ಧಕ್ಕೆಯಾಗಬಾರದು ಎಂಬುದು ವಿರೋಧ ಪಕ್ಷಗಳ ಪ್ರಮುಖ ಕಳವಳವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇರ್ಷಾದ್ ಎಂ. ವೇಣೂರು/ವಾರ್ತಾಭಾರತಿ

contributor

ಇರ್ಷಾದ್ ಎಂ. ವೇಣೂರು ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಪತ್ರಿಕೋದ್ಯಮ ಕ್ಷೇತ್ರದಲ್ಲಿ 13 ವರ್ಷಗಳ ಅನುಭವ ಹೊಂದಿದ್ದಾರೆ. ಪ್ರಸ್ತುತ ‘ವಾರ್ತಾಭಾರತಿ’ಯಲ್ಲಿ ಡಿಜಿಟಲ್ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಡೆಕ್ಕನ್ ಹೆರಾಲ್ಡ್–ಪ್ರಜಾವಾಣಿ’ ಸಮೂಹದಲ್ಲಿ ಫೋಟೊ ಜರ್ನಲಿಸ್ಟ್ ಆಗಿಯೂ ಕೆಲಸ ಮಾಡಿದ್ದಾರೆ. ಅಂತರರಾಷ್ಟ್ರೀಯ ವಿದ್ಯಮಾನಗಳು, ಮಧ್ಯಪ್ರಾಚ್ಯದ ಸಂಘರ್ಷಗಳು, ಗಲ್ಫ್ ರಾಷ್ಟ್ರಗಳ ಬೆಳವಣಿಗೆಗಳು, ರಾಜಕೀಯ, ವಾಯುಯಾನ, ಅಪರಾಧ ಮತ್ತು ಕ್ರೀಡೆ ಅವರ ಆಸಕ್ತಿಯ ಸುದ್ದಿ ಕ್ಷೇತ್ರಗಳಾಗಿವೆ.