ರಾಹುಲ್ ಗಾಂಧಿ | Photo Credit : PTI 

 

ಹೈದರಾಬಾದ್: ಭಾರತ ಇನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ. 2014ರಲ್ಲೇ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸಲಾಗಿದ್ದು, ಈ ಬದಲಾವಣೆಯ ಆಘಾತದಿಂದ ವಿರೋಧ ಪಕ್ಷಗಳು ಸುಮಾರು ಒಂದು ದಶಕ ಕಾಲ ಹೊರಬರಲು ಸಾಧ್ಯವಾಗಿರಲಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ಶನಿವಾರ ಆಯೋಜಿಸಿದ್ದ ಭಾರತ ಶೃಂಗಸಭೆ 2026ರಲ್ಲಿ ಮಾತನಾಡಿದ ಅವರು, 2014ರ ಲೋಕಸಭಾ ಚುನಾವಣೆಯ ಬಳಿಕ ಭಾರತೀಯ ರಾಜಕಾರಣದಲ್ಲಿ ಆಗುತ್ತಿದ್ದ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ವಿರೋಧ ಪಕ್ಷಗಳು ಆರಂಭದಲ್ಲಿ ಕಷ್ಟಪಟ್ಟಿದ್ದವು ಎಂದು ಅವರು ಹೇಳಿದರು.

“2014ರಲ್ಲಿ ನಾವು ಹಿಂದೆಂದೂ ನೋಡಿರದ ಹೊಸ ಬಗೆಯ ಚುನಾವಣೆಗೆ ಸಾಕ್ಷಿಯಾದೆವು. ರಾಜಕೀಯ ವ್ಯವಸ್ಥೆಗೆ ಕೋಟ್ಯಂತರ ರೂಪಾಯಿಗಳನ್ನು ಹರಿಸಲಾಯಿತು. ಸಂಪೂರ್ಣ ಭಿನ್ನ ಸ್ವರೂಪದ ಚುನಾವಣಾ ಪ್ರಚಾರವನ್ನು ನಡೆಸಲಾಯಿತು. ಇಂತಹ ನಾಟಕೀಯ ರಾಜಕೀಯವನ್ನು ನಾವು ಹಿಂದೆಂದೂ ಕಂಡಿರಲಿಲ್ಲ” ಎಂದು ಅವರು ಹೇಳಿದರು.

ರಾಜಕೀಯ ವ್ಯವಸ್ಥೆಯಲ್ಲಿ ತೀವ್ರ ಬದಲಾವಣೆಗಳಾದವು. ಮೈತ್ರಿ ಸರಕಾರಗಳನ್ನು ದಿಢೀರನೆ ಪದಚ್ಯುತಗೊಳಿಸಲಾಯಿತು. ಈ ಬೆಳವಣಿಗೆಗಳು ವಿರೋಧ ಪಕ್ಷಗಳನ್ನು ತೀವ್ರ ಆಘಾತಕ್ಕೆ ತಳ್ಳಿದವು. ಆ ಆಘಾತ ಒಂದು ಅಥವಾ ಎರಡು ವರ್ಷಗಳದ್ದಾಗಿರಲಿಲ್ಲ; ಇಡೀ ಒಂದು ದಶಕದವರೆಗೆ ಮುಂದುವರಿದಿತ್ತು ಎಂದು ರಾಹುಲ್ ಗಾಂಧಿ ಹೇಳಿದರು.

“ವಿರೋಧ ಪಕ್ಷಗಳು ಆಘಾತಕ್ಕೊಳಗಾಗಿರಲಿಲ್ಲ ಎಂದು ನಾನು ಹೇಳಿದರೆ ಅದು ಸುಳ್ಳಾಗುತ್ತದೆ. ನಾವು ಆಘಾತದಲ್ಲಿದ್ದೆವು. ಒಂದು ಅಥವಾ ಎರಡು ವರ್ಷವಲ್ಲ, ಇಡೀ ಒಂದು ದಶಕದ ಕಾಲ” ಎಂದು ಅವರು ಹೇಳಿದರು.

ಮಹಾರಾಷ್ಟ್ರ ಚುನಾವಣೆಯ ಫಲಿತಾಂಶವನ್ನು ಪ್ರಸ್ತಾಪಿಸಿದ ಅವರು, ರಾಜಕೀಯದಲ್ಲಿನ ಬದಲಾವಣೆಗಳ ಹಿಂದಿನ ಕಾರಣಗಳನ್ನು ಅರಿಯಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿವಿಧ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಪರಿಶೀಲಿಸಲು ಆರಂಭಿಸಿದವು ಎಂದರು.

“ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ವಿರೋಧ ಪಕ್ಷಗಳು ಬಹುತೇಕ ಒಂದೇ ಪ್ರಮಾಣದ ಮತಗಳನ್ನು ಪಡೆದಿದ್ದವು. ಆದರೆ, ಎರಡೂ ಚುನಾವಣೆಗಳ ಫಲಿತಾಂಶಗಳು ಮಾತ್ರ ಭಿನ್ನವಾಗಿದ್ದವು” ಎಂದು ವಿವರಿಸಿದರು.

ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ನಡುವೆ ಸುಮಾರು 6 ತಿಂಗಳ ಅಂತರವಿತ್ತು. ಈ ಅವಧಿಯಲ್ಲಿ 70 ಲಕ್ಷ ಹೊಸ ಮತದಾರರನ್ನು ಸೇರ್ಪಡೆ ಮಾಡಲಾಗಿತ್ತು. ಅವರೆಲ್ಲರೂ ಬಿಜೆಪಿಗೆ ಮತ ಚಲಾಯಿಸಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.

“ಇಂತಹ ಉದಾಹರಣೆಗಳನ್ನು ಒಂದು ರಾಜ್ಯದಿಂದ ಇನ್ನೊಂದು ರಾಜ್ಯದ ವರೆಗೆ ನೀಡಬಲ್ಲೆ. ಕಾಂಗ್ರೆಸ್ ಈ ವಿವರಗಳನ್ನು ಪರಿಶೀಲಿಸಿ, ತನ್ನ ಕಳವಳಗಳಿಗೆ ಪುರಾವೆಗಳನ್ನು ಪತ್ತೆಹಚ್ಚಿತು. ಇದರಿಂದ ಭಾರತ ಇನ್ನು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಉಳಿದಿಲ್ಲ ಎಂಬುದು ನಮಗೆ ಕಂಡುಬಂದಿತು ಹಾಗೂ ಸಾಬೀತಾಯಿತು” ಎಂದು ಅವರು ಹೇಳಿದರು.

ಶೃಂಗಸಭೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಫ್ಯಾಸಿಸ್ಟ್ ಎಂದು ಕರೆದ ರಾಹುಲ್ ಗಾಂಧಿ, ವ್ಯವಸ್ಥೆ ಕುಸಿದಾಗ ಫ್ಯಾಸಿಸ್ಟ್ ಶಕ್ತಿಗಳು ಹೇಗೆ ಮುನ್ನೆಲೆಗೆ ಬರುತ್ತವೆ ಎಂಬುದನ್ನು ವಿವರಿಸಿದರು.

“ಫ್ಯಾಸಿಸ್ಟರು ದೊಡ್ಡ ಗಂಟಲು ಹೊಂದಿರುತ್ತಾರೆ. ಐತಿಹಾಸಿಕವಾಗಿ ವ್ಯವಸ್ಥೆ ಕುಸಿದುಬಿದ್ದಾಗ ಫ್ಯಾಸಿಸ್ಟರು ಉದ್ಭವಿಸುತ್ತಾರೆ. ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಅವರು ಬಚ್ಚಿಟ್ಟುಕೊಂಡಿರುತ್ತಾರೆ. ಆದರೆ, ವ್ಯವಸ್ಥೆ ಮತ್ತು ರಚನೆ ಕುಸಿದಾಗ ಹಠಾತ್ತನೆ ಮೇಲೆದ್ದು ನಿಲ್ಲುತ್ತಾರೆ. ಕೆಲಕಾಲ ಉಪದ್ರವ ಸೃಷ್ಟಿಸಿ, ಮತ್ತೆ ಕಣ್ಮರೆಯಾಗುತ್ತಾರೆ” ಎಂದು ವ್ಯಂಗ್ಯವಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor