ಇರಾನ್ ಗೆ ಅನಗತ್ಯ ಪ್ರವಾಸ ಬೇಡ: ಭಾರತೀಯರಿಗೆ ರಾಯಭಾರ ಕಚೇರಿ ಸಲಹೆ
Photo: thewire.in
ಹೊಸದಿಲ್ಲಿ: ಇತ್ತೀಚಿನ ಭದ್ರತಾ ಸಂಬಂಧಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತೀಯ ಪ್ರಜೆಗಳು ಇರಾನ್ ಗೆ ಅನಗತ್ಯ ಪ್ರವಾಸ ಕೈಗೊಳ್ಳದಂತೆ ಭಾರತೀಯ ರಾಜಭಾರ ಕಚೇರಿ ಮಂಗಳವಾರ ರಾತ್ರಿ ಸೂಚನೆ ನೀಡಿದೆ.
ರಾಯಭಾರ ಕಚೇರಿಯ ಅಧಿಕೃತ ಎಕ್ಸ್ ಹ್ಯಾಂಡಲ್ ನಲ್ಲಿ ಈ ಕುರಿತು ಸೂಚನೆ ನೀಡಲಾಗಿದ್ದು, ಇರಾನ್ ನಲ್ಲಿ ಈಗಾಗಲೇ ವಾಸ್ತವ್ಯ ಇರುವವರು ಜಾಗರೂಕರಾಗಿದ್ದು, ಲಭ್ಯವಿರುವ ವಾಣಿಜ್ಯ ಮತ್ತು ನೌಕಾಸೇವೆಗಳಲ್ಲಿ ವಾಪಾಸ್ಸಾಗುವುದನ್ನು ಪರಿಗಣಿಸಬೇಕು ಎಂದು ಸಲಹೆ ಮಾಡಲಾಗಿದೆ.
"ಕಳೆದ ಹಲವು ವಾರಗಳಿಂದ ಆಗುತ್ತಿರುವ ಭದ್ರತಾ ಸಂಬಂಧಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಭಾರತೀಯ ಪ್ರಜೆಗಳು ಇರಾನ್ ಗೆ ಅನಗತ್ಯ ಪ್ರವಾಸ ಕೈಗೊಳ್ಳುವ ಮುನ್ನ ರೂಪುಗೊಳ್ಳುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು" ಎಂದು ಸ್ಪಷ್ಟಪಡಿಸಲಾಗಿದೆ.
"ಜತೆಗೆ ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳ ಮೇಲೆ ನಿರಂತರವಾಗಿ ನಿಗಾ ಇಡುವಂತೆ ಸಲಹೆ ಮಾಡಲಾಗಿದ್ದು, ಭಾರತೀಯ ಅಧಿಕಾರಿಗಳು ನೀಡುವ ಪರಿಷ್ಕೃತ ಸಲಹೆಗಳನ್ನು ಅನುಸರಿಸಬೇಕು. ಈಗಾಗಲೇ ಇರಾನ್ ನಲ್ಲಿರುವ ಭಾರತೀಯ ಪ್ರಜೆಗಳು ಇರಾನ್ ತೊರೆಯುವ ಆಸಕ್ತಿ ಹೊಂದಿದ್ದರೆ, ಲಭ್ಯವಿರುವ ವಾಣಿಜ್ಯ ವಿಮಾನ ಮತ್ತು ನೌಕಾಸೇವೆಗಳ ಮೂಲಕ ಮರಳುವುದನ್ನು ಪರಿಗಣಿಸಬಹುದು" ಎಂದು ಹೇಳಿದೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕವನ್ನು ಒಳಗೊಂಡ ಗಂಭೀರ ಸೇನಾ ಉದ್ವಿಗ್ನತೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.