ಅಮೆರಿಕದ ವೆರ್ಮಾಂಟ್ ನಲ್ಲಿ ಭಾರತೀಯ ಗ್ಯಾಂಗ್ ಸ್ಟರ್ ನಿತೀಶ್ ಕೌಶಲ್ ಬಂಧನ: FBI
ನಿತೀಶ್ ಕೌಶಲ್ | Photo Credit : X \ @FBIMostWanted
ವಾಷಿಂಗ್ಟನ್: ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಗೆ ಭಾರತೀಯ ಗ್ಯಾಂಗ್ ಸ್ಟರ್ ನಿತೀಶ್ ಕೌಶಲ್ ನನ್ನು ಸೇರ್ಪಡೆ ಮಾಡಿದ ಕೆಲವೇ ದಿನಗಳ ಅಂತರದಲ್ಲಿ ಅಮೆರಿಕದಲ್ಲಿ ಹತ್ಯೆ, ಅಪಹರಣ ಮತ್ತು ಮಾದಕ ದ್ರವ್ಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆತನನ್ನು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (FBI) ಬಂಧಿಸಿದೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್, “ನಿತೀಶ್ ಕೌಶಲ್ ನನ್ನು ವೆರ್ಮಾಂಟ್ ನಲ್ಲಿ ಬಂಧಿಸಲಾಗಿದೆ” ಎಂದು ಪ್ರಕಟಿಸಿದೆ.
ಭಗ್ವಾನ್ ಪುರಿಯಾ ಸಂಘಟಿತ ಅಪರಾಧ ಗುಂಪಿನ ಪರವಾಗಿ ಭಾರತೀಯ ಪ್ರಜೆ ನಿತೀಶ್ ಕೌಶಲ್ ಹಿಂಸಾಕೃತ್ಯಗಳನ್ನು ನಡೆಸುತ್ತಿದ್ದಾನೆ. ಆತನ ಅಪರಾಧ ಕೃತ್ಯಗಳು ಅಪಹರಣ ಮತ್ತು ಹಲ್ಲೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ ಎಂದು ಅದು ಹೇಳಿದೆ.
ಮಂಗಳವಾರವಷ್ಟೇ ನಿತೀಶ್ ಕೌಶಲ್ ನನ್ನು ತನ್ನ ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಗೆ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಸೇರ್ಪಡೆ ಮಾಡಿತ್ತು.
ಹತ್ಯೆ, ಅಪಹರಣ, ಮಾದಕ ವಸ್ತುಗಳ ಕಳ್ಳಸಾಗಣೆ, ಸುಲಿಗೆ, ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ಅಕ್ರಮ ಹಣ ವರ್ಗಾವಣೆ ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ಅಂತಾರಾಷ್ಟ್ರೀಯ ಅಪರಾಧ ಸಂಘಟನೆಯೊಂದಿಗೆ ನಿತೀಶ್ ಕೌಶಲ್ ಗೆ ಸಂಬಂಧವಿದೆ ಎಂಬ ಆರೋಪಗಳನ್ನು ಆಧರಿಸಿ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಆತನ ಪತ್ತೆಗಾಗಿ ಲುಕೌಟ್ ನೋಟಿಸ್ ಜಾರಿಗೊಳಿಸಿತ್ತು.
ಭಗ್ವಾನ್ ಪುರಿಯಾ ಸಂಘಟಿತ ಅಪರಾಧ ಗುಂಪು ಮೂಲತಃ ಭಾರತದ ಪಂಜಾಬ್ ನಲ್ಲಿ ಸ್ಥಾಪನೆಯಾಗಿದ್ದು, ಕ್ಯಾಲಿಫೋರ್ನಿಯಾದ ಕೇಂದ್ರ ಜಿಲ್ಲೆ ಹಾಗೂ ಇನ್ನಿತರ ಭಾಗಗಳಲ್ಲಿ ಕಾರ್ಯಾಚರಿಸುತ್ತಿದೆ ಎಂದು ಅದು ಹೇಳಿದೆ.
ದರೋಡೆ ಹಾಗೂ ಭ್ರಷ್ಟ ಸಂಘಟನೆಗಳ ಪಿತೂರಿಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕ್ಯಾಲಿಫೋರ್ನಿಯಾದ ಕೇಂದ್ರ ಜಿಲ್ಲೆ ಹಾಗೂ ಲಾಸ್ ಏಂಜಲೀಸ್ ನ ಅಮೆರಿಕ ಜಿಲ್ಲಾ ನ್ಯಾಯಾಲಯವೊಂದು ಜೂನ್ 25ರಂದು ನಿತೀಶ್ ಕೌಶಲ್ ಬಂಧನಕ್ಕೆ ವಾರಂಟ್ ಹೊರಡಿಸಿತ್ತು.
ಭಗ್ವಾನ್ ಪುರಿಯಾ ಗುಂಪನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸಮನ್ವಯಿತ ಅಂತಾರಾಷ್ಟ್ರೀಯ ಜಾರಿ ಕಾರ್ಯಾಚರಣೆಯಾದ ‘ಆಪರೇಷನ್ ಹಾರ್ಡ್ ಬಾಲ್’ ಬೆನ್ನಿಗೇ, ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಈ ಕ್ರಮ ಕೈಗೊಂಡಿದೆ.