ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಣೆ
Photo Credit : x.com/nabilajamal
ಚೆನ್ನೈ : ಕೋಲ್ಕತ್ತಾದಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನ 6E-723 ರ ಎಡಭಾಗದ ಎಂಜಿನ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾದ ಹಿನ್ನೆಲೆಯಲ್ಲಿ, ಚೆನ್ನೈ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿತ್ತು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಬುಧವಾರ ತಿಳಿಸಿದೆ.
ವಿಮಾನದಲ್ಲಿ 224 ಪ್ರಯಾಣಿಕರಿದ್ದು, ವಿಮಾನವು ರಾತ್ರಿ 11:37 ಕ್ಕೆ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನವು ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಿಕೊಳ್ಳಲು ತುರ್ತು ಪರಿಸ್ಥಿತಿ ಘೋಷಣೆಯಾದ ಕೂಡಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಸಕ್ರಿಯಗೊಳಿಸಲಾಯಿತು. ನಂತರ ತುರ್ತು ಪರಿಸ್ಥಿತಿಯನ್ನು ಹಿಂಪಡೆಯಲಾಯಿತು.
ರಾತ್ರಿ 11:30 ರ ನಿಗದಿತ ಆಗಮನದ ಸಮಯದ ಬದಲಿಗೆ, ವಿಮಾನವು ರಾತ್ರಿ 11:37 ಕ್ಕೆ ನಿಲ್ದಾಣಕ್ಕೆ ತಲುಪುವ ನಿರೀಕ್ಷೆಯಿದ್ದ ಹಿನ್ನೆಲೆಯಲ್ಲಿ ರಾತ್ರಿ 11:29 ಕ್ಕೆ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಬಳಿಕ ವಿಮಾನವು ರಾತ್ರಿ 11:37 ಕ್ಕೆ ರನ್ವೇ 25 ರಲ್ಲಿ ಸುರಕ್ಷಿತವಾಗಿ ಇಳಿಯಿತು.
ರಾತ್ರಿ 11:47 ಕ್ಕೆ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಹಿಂಪಡೆಯಲಾಯಿತು. ಆ ಬಳಿಕ ವಿಮಾನ ನಿಲ್ದಾಣದ ಕಾರ್ಯಾಚರಣೆಯು ಎಂದಿನಂತೆ ಮುಂದುವರಿಯಿತು ಎಂದು ಪಾಧಿಕಾರ ಮಾಹಿತಿ ನೀಡಿದೆ.
ಕಳೆದ ತಿಂಗಳು, ದುಬೈನಿಂದ ಮುಂಬೈಗೆ ತೆರಳುತ್ತಿದ್ದ ಅಂತರರಾಷ್ಟ್ರೀಯ ಇಂಡಿಗೋ ವಿಮಾನವು ವಿಮಾನದ ಕೆಳಭಾಗದ ಕಾರ್ಗೋ ಹೋಲ್ನಲ್ಲಿ ಹೊಗೆ ಕಾಣಿಸಿಕೊಂಡ ಬಗ್ಗೆ ಪೈಲಟ್ಗಳಿಗೆ ಎಚ್ಚರಿಕೆ ಬಂದ ಹಿನ್ನೆಲೆಯಲ್ಲಿ ಗುಜರಾತ್ನ ರಾಜ್ಕೋಟ್ ವಿಮಾನ ನಿಲ್ದಾಣದಲ್ಲಿ ಅನಿವಾರ್ಯ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ವಿಮಾನ ಸಿಬ್ಬಂದಿ ತುರ್ತು ಪರಿಸ್ಥಿತಿ ಘೋಷಿಸಿ, ರಾಜ್ಕೋಟ್ನ ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಆದ್ಯತೆಯ ಲ್ಯಾಂಡಿಂಗ್ ಅನುಮತಿಯನ್ನು ಕೋರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ರನ್ವೇ ಬಳಿ ಅಗ್ನಿಶಾಮಕ ವಾಹನಗಳು ಮತ್ತು ವೈದ್ಯಕೀಯ ತಂಡಗಳನ್ನು ನಿಯೋಜಿಸಲಾಗಿತ್ತು.
ಈ ವರ್ಷದ ಮಾರ್ಚ್ನಲ್ಲಿ, ಲ್ಯಾಂಡಿಂಗ್ಗೆ ಸ್ವಲ್ಪ ಮೊದಲು ಎಂಜಿನ್ ವೈಫಲ್ಯ ವರದಿಯಾದ ನಂತರ ದಿಲ್ಲಿಗೆ ಬರುತ್ತಿದ್ದ ಇಂಡಿಗೋ ವಿಮಾನಕ್ಕಾಗಿ ಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು . ವಿಶಾಖಪಟ್ಟಣದಿಂದ ಹೊಸದಿಲ್ಲಿಗೆ ಬಂದಿದ್ದ 161 ಜನರನ್ನು ಹೊಂದಿದ್ದ ಇಂಡಿಗೋ 6E 579 ವಿಮಾನ ಲ್ಯಾಂಡಿಂಗ್ ವೇಳೆ ಈ ವ್ಯವಸ್ಥೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.