INS ಮಹೇಂದ್ರಗಿರಿ ಲೋಕಾರ್ಪಣೆ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
INS ಮಹೇಂದ್ರಗಿರಿ | Photo Credit : PTI
ವಿಶಾಖಪಟ್ಟಣಂ, ಜು. 11: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ವಿಶಾಖಪಟ್ಟಣಂನ ಹಡಗುಕಟ್ಟೆಯಲ್ಲಿ ಸ್ವದೇಶಿ ವಿನ್ಯಾಸದ ಅಗೋಚರ ಯುದ್ಧನೌಕೆ (ಸ್ಟೆಲ್ತ್ ಫ್ರಿಗೇಟ್) ‘ಐಎನ್‌ಎಸ್ ಮಹೇಂದ್ರಗಿರಿ’ಯನ್ನು ನೌಕಾಪಡೆಗೆ ಸೇರ್ಪಡೆಗೊಳಿಸಿದರು. ಇದರೊಂದಿಗೆ ಭಾರತೀಯ ನೌಕಾಸೇನೆಗೆ ಮತ್ತೊಂದು ಅತ್ಯಾಧುನಿಕ ಯುದ್ಧನೌಕೆ ಸೇರಿಕೊಂಡಂತಾಗಿದೆ.
ಪೂರ್ವಘಟ್ಟಗಳ ಮಹೇಂದ್ರಗಿರಿ ಪರ್ವತ ಶ್ರೇಣಿಯ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದ್ದು, ಇದು ಪುಟಿದೇಳುವ ಸಾಮರ್ಥ್ಯ, ಶಕ್ತಿ ಮತ್ತು ಅಚಲ ಸಂಕಲ್ಪದ ಸಂಕೇತವಾಗಿದೆ.
ಭಾರತೀಯ ನೌಕಾಪಡೆಯ ‘ಯುದ್ಧನೌಕೆ ವಿನ್ಯಾಸ ಘಟಕ’ವು ಸ್ವದೇಶಿ ಮಾದರಿಯಲ್ಲಿ ಮಹೇಂದ್ರಗಿರಿಯನ್ನು ವಿನ್ಯಾಸಗೊಳಿಸಿದ್ದು, ಮುಂಬೈನ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ ಇದನ್ನು ನಿರ್ಮಿಸಿದೆ.
ಮಹೇಂದ್ರಗಿರಿಯು 17ಎ ಕ್ಲಾಸ್ ಸ್ಟೆಲ್ತ್ ಫ್ರಿಗೇಟ್‌ಗಳ ಸರಣಿಯಲ್ಲಿ ಆರನೇ ಹಡಗಾಗಿದೆ.
ಈ ಯುದ್ಧನೌಕೆಯು ಶೇಕಡಾ 75ಕ್ಕಿಂತಲೂ ಹೆಚ್ಚಿನ ಸ್ವದೇಶಿ ವಸ್ತುಗಳನ್ನು ಒಳಗೊಂಡಿದ್ದು, ಭಾರತ ಸರ್ಕಾರದ ‘ಆತ್ಮನಿರ್ಭರ ಭಾರತ’ ಉಪಕ್ರಮದ ಯಶಸ್ಸನ್ನು ಸಾರುತ್ತದೆ ಮತ್ತು ಭಾರತೀಯ ಹಡಗು ನಿರ್ಮಾಣ ಪರಿಸರ ವ್ಯವಸ್ಥೆಯ ಬೆಳೆಯುತ್ತಿರುವ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.