́"ರಾಜೀವ್ ಗಾಂಧಿ ಹತ್ಯೆಗೆ ಮುನ್ನ ಭದ್ರತೆ ಹಿಂಪಡೆದಿದ್ದರ ಹಿಂದೆ ಉದ್ದೇಶವಿತ್ತು" : ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಗಾಂಧಿ ಕುಟುಂಬ
ಪುಸ್ತಕದಲ್ಲಿ ಅಮ್ಮ ಕೆಲವು ವಿಷಯಗಳನ್ನು ಉಲ್ಲೇಖಿಸಿಲ್ಲ ಎಂದ ರಾಹುಲ್ ಗಾಂಧಿ
Screengrab: FB/Indian National Congress
ಹೊಸದಿಲ್ಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರತೆಯನ್ನು ಹಿಂಪಡೆದಿದ್ದ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ದೀರ್ಘಕಾಲದ ಕಳವಳವನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ರಾಜೀವ್ ಗಾಂಧಿ ಅವರ ಹತ್ಯೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಅವರ ಭದ್ರತೆಯನ್ನು ಹಿಂಪಡೆಯಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಮಕ್ಕಳಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರೊಂದಿಗೆ ‘Belonging: A Journey of Love’ ಪುಸ್ತಕದ ಕುರಿತು ಮುಕ್ತವಾಗಿ ಮಾತನಾಡಿದ ಸೋನಿಯಾ, ರಾಜೀವ್ ಗಾಂಧಿ ಅವರ ಸುರಕ್ಷತೆಯ ಬಗ್ಗೆ ತಾವು ಈ ಹಿಂದೆ ವ್ಯಕ್ತಪಡಿಸಿದ್ದ ಆತಂಕ ಹಾಗೂ ತಮ್ಮ ಕಳವಳವನ್ನು ಮತ್ತಷ್ಟು ಹೆಚ್ಚಿಸಿದ ಘಟನೆಗಳನ್ನು ಸ್ಮರಿಸಿಕೊಂಡಿದ್ದಾರೆ.
ಎಕ್ಸ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ತನ್ನ ನೆನಪುಗಳ ಆಧಾರದಲ್ಲಿ ಪುಸ್ತಕವನ್ನು ಬರೆದಿರುವುದಾಗಿ ತಿಳಿಸಿದ್ದಾರೆ. ರಾಹುಲ್ ಮತ್ತು ಪ್ರಿಯಾಂಕಾ ತಮ್ಮದೇ ನೆನಪುಗಳನ್ನು ನೀಡಿದರು, ಇದರಿಂದ ಆ ಕಥೆಗಳಿಗೆ "ಹೊಸ ಜೀವ" ದೊರೆತಿದೆ ಎಂದು ಹೇಳಿದ್ದಾರೆ. ನನ್ನ ಮಕ್ಕಳೇ ನನ್ನ ಅತ್ಯಂತ ದೊಡ್ಡ ಸಂತೋಷ ಮತ್ತು ಶಕ್ತಿಯ ಮೂಲ ಎಂದು ಬಣ್ಣಿಸಿದ ಸೋನಿಯಾ, ಅದೇ ವೇಳೆ ನನ್ನ ತಾಳ್ಮೆಯನ್ನು ಅತಿ ಹೆಚ್ಚು ಪರೀಕ್ಷಿಸಿದ ಇಬ್ಬರೂ ಅವರೇ ಆಗಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.
ರಾಜೀವ್ ಹತ್ಯೆ ಉದ್ದೇಶದಿಂದಲೇ ಭದ್ರತೆ ಹಿಂಪಡೆಯಲಾಗಿತ್ತು?
ಸಂಭಾಷಣೆಯ ವೇಳೆ ಸೋನಿಯಾ ಗಾಂಧಿ ಅವರು, ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ರಾಜೀವ್ ಗಾಂಧಿ ಕೈಗೊಂಡಿದ್ದ ಪ್ರವಾಸಗಳನ್ನು ಸ್ಮರಿಸಿಕೊಂಡರು. ಆಗ ಅವರು ತೆರೆದ ಜೀಪ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳನ್ನು ಎದುರಿಸಿದ್ದರು ಎಂದು ಹೇಳಿದ್ದಾರೆ.
ಅದೊಂದು ಅತ್ಯಂತ ಭಯಾನಕ ಪ್ರವಾಸವಾಗಿತ್ತು ಎಂದು ಹೇಳಿದ ಸೋನಿಯಾ ಗಾಂಧಿ, ವಿಶೇಷವಾಗಿ ವಿರೋಧ ಪಕ್ಷಗಳ ಆಡಳಿತವಿದ್ದ ರಾಜ್ಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಗಳ ಬಗ್ಗೆ ತಮಗಿದ್ದ ಆತಂಕವನ್ನು ನೆನಪಿಸಿಕೊಂಡರು.
ರಾಜೀವ್ ಗಾಂಧಿ ಅವರ ಭದ್ರತೆಯ ಹೊಣೆ ಹೊತ್ತಿದ್ದವರು ಅವರ ಸುರಕ್ಷತೆಯ ಬಗ್ಗೆ ಸಾಕಷ್ಟು ಗಮನ ಹರಿಸಿರಲಿಲ್ಲ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಒಂದು ಪ್ರವಾಸದಲ್ಲಿ ತಂದೆಯೊಂದಿಗೆ ತೆರಳಿದ್ದ ರಾಹುಲ್ ಕೂಡ ಕಲ್ಲು ತೂರಾಟ ಮತ್ತು ಪ್ರತಿಭಟನೆಗಳನ್ನು ಕಣ್ಣಾರೆ ಕಂಡಿದ್ದರು. ಮನೆಗೆ ಮರಳಿದ ಬಳಿಕ ತಂದೆಯ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದನ್ನು ಸೋನಿಯಾ ಸ್ಮರಿಸಿಕೊಂಡಿದ್ದಾರೆ.
"ರಾಹುಲ್ ಮನೆಗೆ ಬಂದು, ಅಮ್ಮಾ, ಅಪ್ಪನ ಭದ್ರತೆಯ ಬಗ್ಗೆ ನಾವು ಏನಾದರೂ ಮಾಡದಿದ್ದರೆ, ಶೀಘ್ರದಲ್ಲೇ ಅವರ ಅಂತ್ಯಕ್ರಿಯೆಗೆ ಹಾಜರಾಗಲು ನಾನು ಮರಳಬೇಕಾಗುತ್ತದೆ ಎಂದು ಹೇಳಿದ್ದರು" ಎಂದು ಸೋನಿಯಾ ತಿಳಿಸಿದ್ದಾರೆ.
ರಾಜೀವ್ ಗಾಂಧಿ ಅವರ ಭದ್ರತೆಯನ್ನು ಹಿಂಪಡೆದಿದ್ದರ ಕುರಿತು ಸೋನಿಯಾ ಗಂಭೀರ ಆರೋಪ ಮಾಡಿದ್ದಾರೆ. ರಾಜೀವ್ ಅವರ ಭದ್ರತೆಯನ್ನು ಹಿಂಪಡೆದಿದ್ದು ಆಕಸ್ಮಿಕ ಘಟನೆಯಾಗಿರಲಿಲ್ಲ. ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಹಾಗೆ ಮಾಡಲಾಗಿತ್ತು ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.
ಪುಸ್ತಕದಲ್ಲಿ ಅಮ್ಮ ಕೆಲವು ವಿಷಯಗಳನ್ನು ಉಲ್ಲೇಖಿಸಿಲ್ಲ ಎಂದ ರಾಹುಲ್ ಗಾಂಧಿ:
ಎಕ್ಸ್ನಲ್ಲಿ ವೀಡಿಯೊ ಹಂಚಿಕೊಂಡಿರುವ ರಾಹುಲ್ ಗಾಂಧಿ, 500ಕ್ಕೂ ಹೆಚ್ಚು ಪುಟಗಳ ಪುಸ್ತಕವಾಗಿದ್ದರೂ ನನ್ನ ತಾಯಿ ಕೆಲವು ವಿಚಾರಗಳನ್ನು ಉಲ್ಲೇಖಿಸದೆ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ. ನನ್ನ ತಂದೆಯ ಭದ್ರತೆಯನ್ನು ಹಿಂಪಡೆದಿದ್ದರ ಹಿಂದೆಯೂ ಉದ್ದೇಶವಿತ್ತು ಎಂದು ಅವರು ಆರೋಪಿಸಿದ್ದಾರೆ.
"ಆ ಪ್ರಸ್ತಾಪ ಯೋಜನೆಯ ಪ್ರಕಾರ ನಡೆಯಲಿಲ್ಲ. ನನ್ನ ಏಳನೇ ಹುಟ್ಟುಹಬ್ಬವೂ ಹಾಗೆಯೇ ನಡೆಯಲಿಲ್ಲ. 2004ರಲ್ಲಿ ತೆಗೆದುಕೊಂಡ ನಿರ್ಧಾರವು ನಮ್ಮಲ್ಲಿ ಕೆಲವರಿಗೆ ನೆಮ್ಮದಿ ನೀಡಿದರೆ, ಇನ್ನು ಕೆಲವರಿಗೆ ಸಂತೋಷ ತಂದಿತ್ತು. ಅಪ್ಪನ ಭದ್ರತೆಯನ್ನು ಹಿಂಪಡೆದಿದ್ದರ ಹಿಂದೆ ಒಂದು ಉದ್ದೇಶವಿತ್ತು. 500ಕ್ಕೂ ಹೆಚ್ಚು ಪುಟಗಳ ಪುಸ್ತಕ ಬರೆದಿದ್ದರೂ, ಅಮ್ಮ ತಮ್ಮ ಪುಸ್ತಕದಲ್ಲಿ ಕೆಲವು ವಿಷಯಗಳನ್ನು ಉಲ್ಲೇಖಿಸದೆ ಬಿಟ್ಟಿದ್ದಾರೆ" ಎಂದು ರಾಹುಲ್ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರು, ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಸಂತೋಷದ ಕ್ಷಣಗಳ ಜೊತೆಗೆ ನೋವಿನ ಅನುಭವಗಳೂ ಮತ್ತೆ ನೆನಪಿಗೆ ಬಂದವು ಎಂದು ಹೇಳಿದ್ದಾರೆ.
"ಆ ನೆನಪುಗಳನ್ನು ಮತ್ತೆ ಮೆಲುಕು ಹಾಕಿದಾಗ, ಆಗಿನ ಸಂತೋಷ, ನಗು ಮತ್ತು ನಾವು ಅನುಭವಿಸಿದ ನೋವುಗಳೆಲ್ಲವೂ ಮತ್ತೆ ನೆನಪಿಗೆ ಬಂದವು. ‘Belonging" ಪುಸ್ತಕದ ಮೂಲಕ ಅಮ್ಮನ ಜೀವನಯಾನ ಅಪಾರ ಪ್ರೀತಿ ಮತ್ತು ಭೀಕರ ದುರಂತಗಳಿಂದ ಕೂಡಿರುವುದನ್ನು ಕಾಣಬಹುದು. ಇವೆಲ್ಲವನ್ನೂ ಅವರು ಘನತೆ ಮತ್ತು ಧೈರ್ಯದಿಂದ ಎದುರಿಸಿದ್ದಾರೆ" ಎಂದು ಅವರು ಬರೆದುಕೊಂಡಿದ್ದಾರೆ.
ಸಂಭಾಷಣೆಯ ವೇಳೆ ಸೋನಿಯಾ ಗಾಂಧಿ ಅವರು, 1968ರಲ್ಲಿ ಇಟಲಿಯಿಂದ ಭಾರತಕ್ಕೆ ಬಂದ ಬಳಿಕದ ತಮ್ಮ ಆರಂಭಿಕ ದಿನಗಳ ಬಗ್ಗೆಯೂ ಮಾತನಾಡಿದ್ದಾರೆ.