ನಂದಿಗ್ರಾಮ ಉಪ ಚುನಾವಣೆ | ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ಗೆ ಅ.20ರವರೆಗೆ ಮಧ್ಯಂತರ ಜಾಮೀನು
ಮಿಲನ್ ಪ್ರಧಾನ್ | Photo Credit : indiatoday.in
ಕೋಲ್ಕತಾ: ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಕಲ್ಕತ್ತಾ ಉಚ್ಚ ನ್ಯಾಯಾಲಯ ಮಂಗಳವಾರ ಅಕ್ಟೋಬರ್ 20ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ನ್ಯಾಯಮೂರ್ತಿ ತೀರ್ಥಂಕರ್ ಘೋಷ್ ಅವರ ಏಕ ಸದಸ್ಯ ಪೀಠ ತಲಾ 10,000ರೂ.ಗಳ ಎರಡು ವೈಯುಕ್ತಿಕ ಬಾಂಡ್‌ಗಳ ಆಧಾರದ ಮೇಲೆ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇತರ ಅಭ್ಯರ್ಥಿಗಳಂತೆ ಅವರು ಮುಕ್ತವಾಗಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಪ್ರಚಾರ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಜಾಮೀನು ನೀಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಆದರೆ, ಪ್ರಧಾನ್ ಅವರು ತಮ್ಮ ಮೊಬೈಲ್ ಫೋನ್ ಅನ್ನು ಪೊಲೀಸ್ ಠಾಣೆಯಲ್ಲಿ ಇರಿಸಬೇಕು ಮತ್ತು ಅಕ್ಟೋಬರ್ 21ರಂದು ಹಲ್ಡಿಯಾ ಸಬ್ ಡಿವಿಷನಲ್ ಕೋರ್ಟ್ ಮಂದೆ ಶರಣಾಗಬೇಕು ಎಂದು ನಿರ್ದೇಶಿಸಿದೆ.
ತನಿಖಾಧಿಕಾರಿಯು ಪ್ರಧಾನ್ ಅವರ ಸ್ಥಿತಿಗತಿ ಪರಿಶೀಲಿಸಲು ಪ್ರತಿದಿನ ಬೆಳಗ್ಗೆ 8.30ರಿಂದ 10.00ರ ನಡುವೆ ಮತ್ತು ರಾತ್ರಿ 9.30ರಿಂದ 10.30ರ ನಡುವೆ ಕರೆ ಮಾಡಬೇಕು ಎಂದು ನ್ಯಾಯಾಲಯ ಸೂಚಿಸಿದೆ.
2007ರಲ್ಲಿ ಪ್ರಧಾನ್ ವಿರುದ್ಧ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಕಂಟೈ (ಕಾಂತಿ)ನಲ್ಲಿ ಎರಡು ಮತ್ತು ಹಲ್ಡಿಯಾದಲ್ಲಿ ನಾಲ್ಕು. ಸೆಪ್ಟಂಬರ್‌ನಲ್ಲಿ ಅವರ ಬಂಧನದ ಬಳಿಕ ಕೆಳ ನ್ಯಾಯಾಲಯ ಅಕ್ಟೋಬರ್ 7ರವರೆಗೆ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು.