“ಅದು ಆಕೆಯ ಆಯ್ಕೆ”: ರಕ್ಷಾಬಂಧನ ಜಾಹೀರಾತಿನ ಉಡುಪಿನ ಬಗ್ಗೆ ಕಂಗನಾ ಟೀಕೆ; ಕೃತಿ ಸನೋನ್ ಪರ ನಿಂತ ರಾಹುಲ್ ಗಾಂಧಿ
Photo: x.com/NewsAlgebraIND
ಹೊಸದಿಲ್ಲಿ: ರಕ್ಷಾಬಂಧನದ ಜಾಹೀರಾತಿನಲ್ಲಿ ತೊಟ್ಟಿದ್ದ ಉಡುಪಿನ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಒಳಗಾಗಿದ್ದ ನಟಿ ಕೃತಿ ಸನೋನ್ ಅವರಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಏನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಸಂಪೂರ್ಣವಾಗಿ ಅವರದ್ದೇ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಚಿನ್ನಾಭರಣ ಬ್ರ್ಯಾಂಡ್‌ವೊಂದರ ರಕ್ಷಾಬಂಧನ ಜಾಹೀರಾತಿನಲ್ಲಿ ನಟಿ ಕೃತಿ ಸನೋನ್ ಧರಿಸಿದ್ದ ಉಡುಪಿನ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಒಳಗಾಗಿದ್ದರು. ಈ ಸಂಬಂಧ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪನ್ನು ತೀವ್ರವಾಗಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೃತಿ ಸನೋನ್, ಮಹಿಳೆಯರ ಸಾಂಸ್ಕೃತಿಕ ಮೌಲ್ಯಗಳನ್ನು ಅವರ ಉಡುಪಿನ ಆಧಾರದ ಮೇಲೆ ಏಕೆ ನಿರ್ಣಯಿಸಲಾಗುತ್ತದೆ ಎಂದು ಪ್ರಶ್ನಿಸಿದ್ದರು.
ಇದೀಗ ರಾಹುಲ್ ಗಾಂಧಿ ಅವರು ಕೃತಿ ಸನೋನ್ ಅವರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದಿರುವ ಅವರು , ಮಹಿಳೆಯ ಉಡುಪು ಮತ್ತು ಜೀವನಶೈಲಿಯ ಆಯ್ಕೆಯ ಮೇಲೆ ಆನ್ಲೈನ್ ನಲ್ಲಿ ನಿರ್ಬಂಧ ಹೇರಬಾರದು ಎಂದು ಹೇಳಿದ್ದಾರೆ.
"ಮಹಿಳೆ ಏನು ಧರಿಸಬೇಕು, ಏನು ಮಾಡಬೇಕು ಮತ್ತು ಎಲ್ಲಿಗೆ ಹೋಗಬೇಕು ಎಂಬುದು ಆಕೆಯ ಆಯ್ಕೆ. ಮಹಿಳೆಯರು ತಮ್ಮ ಆಯ್ಕೆಯಂತೆ ಬದುಕಿದ್ದಕ್ಕಾಗಿ ಅವರನ್ನು ಟ್ರೋಲ್ ಮಾಡುವುದನ್ನು ನಿಲ್ಲಿಸಿ" ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.