‘ಕ್ರೆಡಿಟ್ ಪಡೆಯುವ ವಿಚಾರವಲ್ಲ’: ಧ್ರುವ್ ರಾಥಿ ಟೀಕೆಗೆ ಬಿಟ್ಟು ತಬಾಹಿ ಪ್ರತಿಕ್ರಿಯೆ
Photo | Instagram
ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಪರಿಸರ ಕಾರ್ಯಕರ್ತ ಬಿಟ್ಟು ತಬಾಹಿ ಅವರನ್ನು ಭೇಟಿಯಾಗಿದ್ದನ್ನು ‘ಪಿಆರ್’ ಎಂದು ಟೀಕಿಸಿದ್ದ ಯೂಟ್ಯೂಬರ್ ಧ್ರುವ್ ರಾಥಿ ಅವರ ಹೇಳಿಕೆಗೆ ಬಿಟ್ಟು ತಬಾಹಿ ಪ್ರತಿಕ್ರಿಯಿಸಿದ್ದಾರೆ. ‘ಇದು ಸರ್ಕಾರ ತನ್ನ ಕೆಲಸದ ಕ್ರೆಡಿಟ್ ಪಡೆಯುವ ವಿಚಾರವಲ್ಲ’ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಬಿಯೋರಾದ 21 ವರ್ಷದ ಸುರೇಂದ್ರ ಸಿಂಗ್ ಚೌಧರಿ ಅವರು ‘ಬಿಟ್ಟು ತಬಾಹಿ’ ಎಂದೇ ಪರಿಚಿತರಾಗಿದ್ದಾರೆ. ಕಸದಿಂದ ತುಂಬಿದ್ದ ಅಜ್ನರ್ ನದಿಯನ್ನು ಅವರು ತಿಂಗಳುಗಳಿಂದ ಸ್ವತಃ ಸ್ವಚ್ಛಗೊಳಿಸುತ್ತಿದ್ದಾರೆ. ಅವರ ಪ್ರಯತ್ನ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ, ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶನಿವಾರ ಭೋಪಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಚೌಧರಿ ಅವರನ್ನು ಭೇಟಿಯಾಗಿದ್ದರು.
ಚೌಧರಿ ಅವರ ದೃಢತೆ ಹಾಗೂ ನದಿಯನ್ನು ಸ್ವಚ್ಛಗೊಳಿಸಲು ನಡೆಸಿದ ಪ್ರಯತ್ನವನ್ನು ಯಾದವ್ ಶ್ಲಾಘಿಸಿದ್ದರು. ಈ ಭೇಟಿಯ ವಿಡಿಯೊವನ್ನು ಮುಖ್ಯಮಂತ್ರಿ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.
ರಾಥಿ ಟೀಕೆ
ವೀಡಿಯೊಗೆ ಪ್ರತಿಕ್ರಿಯಿಸಿದ್ದ ಧ್ರುವ್ ರಾಥಿ, ‘ಒಬ್ಬ ಹುಡುಗ ಎಲ್ಲ ಕೆಲಸವನ್ನೂ ಮಾಡಿದ ಬಳಿಕ, ಆತನ ಕೆಲಸ ವೈರಲ್ ಆದಾಗ ಫೋಟೊಶೂಟ್‌ಗಾಗಿ ಕರೆಸಿಕೊಳ್ಳಲಾಗಿದೆ. ಸರ್ಕಾರ ತನ್ನ ಕೆಲಸ ಮಾಡುತ್ತಿದೆ ಎಂದು ಆತನಿಂದ ಹೇಳಿಸಲಾಗುತ್ತಿದೆ’ ಎಂದು ಟೀಕಿಸಿದ್ದರು.
ಸರ್ಕಾರವು ಶ್ರೇಯಸ್ಸು ಪಡೆಯಲು ಮುಂದಾಗಿದೆ; ಯುವಕನೊಬ್ಬ ಎಲ್ಲ ಕೆಲಸ ಮಾಡಿದ ಬಳಿಕ ಆತನ ಪ್ರಯತ್ನ ವೈರಲ್ ಆದಾಗ ಫೋಟೊಶೂಟ್‌ಗಾಗಿ ಕರೆಸಲಾಗಿದೆ. ಸರಕಾರ ಏನು ಮಾಡುತ್ತಿದೆ? ಏನೂ ಇಲ್ಲ, ಕೇವಲ ಪಿಆರ್ ಮಾಡುತ್ತಿದೆ ಎಂದು ಅವರು ಹೇಳಿದ್ದರು.
‘ನಾಗರಿಕ ಪ್ರಜ್ಞೆಯ ವಿಚಾರ’
ರಾಥಿ ಅವರ ಕಮೆಂಟ್ ಗೆ ನೇರವಾಗಿ ಪ್ರತಿಕ್ರಿಯಿಸಿದ ಬಿಟ್ಟು ತಬಾಹಿ, ‘ಧ್ರುವ್ ಭಯ್ಯಾ, ಇದು ಕ್ರೆಡಿಟ್ ಪಡೆಯುವ ವಿಚಾರವಲ್ಲ. ಸರ್ಕಾರವು ಈ ಹಿಂದೆಯೂ ನನ್ನ ಕೆಲಸವನ್ನು ಮೆಚ್ಚಿದೆ. ಇದು ನಾಗರಿಕ ಪ್ರಜ್ಞೆಯ ವಿಚಾರ. ಜನರೂ ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ನನ್ನಂತೆ ಸ್ವಚ್ಛತೆಗಾಗಿ ಮುಂದೆ ಬರಬೇಕು ಎಂಬುದು ನನ್ನ ಆಶಯ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ‘ಥೋಡಾ ಅಂತರ ಆಯಾ ಹೈ’ ಎಂಬ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಜನರು ನದಿಗೆ ಕಸ ಹಾಕುವುದನ್ನು ಕಡಿಮೆ ಮಾಡಿದ್ದಾರೆ ಎಂದು ಬಿಟ್ಟು ತಬಾಹಿ ಹೇಳಿದ್ದರು.
CM ಮೋಹನ್ ಯಾದವ್ ರಿಂದ ಶ್ಲಾಘನೆ
ಭೇಟಿಯ ಸಂದರ್ಭದಲ್ಲಿ ಮೋಹನ್ ಯಾದವ್ ಅವರು ವೈಯಕ್ತಿಕ ಪ್ರಯತ್ನದಿಂದಲೂ ಅರ್ಥಪೂರ್ಣ ಬದಲಾವಣೆ ತರಬಹುದು ಎಂಬುದನ್ನು ತೋರಿಸಿದ್ದಕ್ಕಾಗಿ ಬಿಟ್ಟು ತಬಾಹಿ ಅವರನ್ನು ಶ್ಲಾಘಿಸಿದರು.
ಬಿಟ್ಟು ಅವರು ಅಜ್ನರ್ ನದಿಯನ್ನು ಸ್ವಚ್ಛಗೊಳಿಸುವುದರ ಜತೆಗೆ, ಬದಲಾವಣೆ ತರಲು ಯಾವಾಗಲೂ ದೊಡ್ಡ ಗುಂಪಿನ ಅಗತ್ಯವಿಲ್ಲ; ಒಂದು ಪ್ರಾಮಾಣಿಕ ಪ್ರಯತ್ನದಿಂದಲೇ ಬದಲಾವಣೆ ಆರಂಭಿಸಬಹುದು ಎಂಬುದನ್ನು ಸಮಾಜಕ್ಕೆ ತೋರಿಸಿದ್ದಾರೆ ಎಂದು ಮುಖ್ಯಮಂತ್ರಿ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಜನರ ಭಾಗವಹಿಸುವಿಕೆಯ ಮೂಲಕ ಜಲಮೂಲಗಳನ್ನು ಸಂರಕ್ಷಿಸುವ ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದ ರಾಜ್ಯ ಸರ್ಕಾರದ ‘ಜಲ ಗಂಗಾ ಸಂವರ್ಧನ ಅಭಿಯಾನ’ದೊಂದಿಗೆ ಬಿಟ್ಟು ತಬಾಹಿ ಅವರ ಕೆಲಸವನ್ನೂ ಯಾದವ್ ಜೋಡಿಸಿದ್ದಾರೆ.
‘ದಿ ಓಷನ್ ಕ್ಲೀನಪ್’ ಸಿಇಒ ಉದ್ಯೋಗದ ಆಫರ್
ಚೌಧರಿ ಅವರ ಪ್ರಯತ್ನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದಿದೆ. ನೆದರ್ಲ್ಯಾಂಡ್ಸ್ ಮೂಲದ ಲಾಭರಹಿತ ಸಂಸ್ಥೆ ‘ದಿ ಓಷನ್ ಕ್ಲೀನಪ್’ನ ಸ್ಥಾಪಕ ಹಾಗೂ ಸಿಇಒ ಬೋಯನ್ ಸ್ಲಾಟ್ ಅವರು, ಬಿಟ್ಟು ತಬಾಹಿ ಅವರ ಪ್ರಯತ್ನಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನೋಡಿದ ಬಳಿಕ ಅವರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಆಫರ್ ನೀಡಿದ್ದಾರೆ.
ಎಕ್ಸ್ ಬಳಕೆದಾರರೊಬ್ಬರು ಅಜ್ನರ್ ನದಿಯ ಸ್ವಚ್ಛಗೊಳಿಸುವ ಮೊದಲು ಮತ್ತು ಬಳಿಕದ ಚಿತ್ರಗಳನ್ನು ಹಂಚಿಕೊಂಡು, ‘21 ವರ್ಷದ ಭಾರತೀಯ ವ್ಯಕ್ತಿ ಬಿಟ್ಟು ತಬಾಹಿ ಎಂದು ಕರೆಯಲ್ಪಡುವ ಸುರೇಂದ್ರ ಸಿಂಗ್ ಚೌಧರಿ ತಿಂಗಳುಗಳಿಂದ ಹೆಚ್ಚು ಕಲುಷಿತವಾಗಿದ್ದ ಅಜ್ನರ್ ನದಿಯನ್ನು ಸ್ವತಃ ಸ್ವಚ್ಛಗೊಳಿಸುತ್ತಿದ್ದಾರೆ’ ಎಂದು ಬರೆದಿದ್ದರು.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಬೋಯನ್ ಸ್ಲಾಟ್, “ನಮಗಾಗಿ ಕೆಲಸ ಮಾಡಲು ಬನ್ನಿ” ಎಂದು ಬರೆದಿದ್ದಾರೆ.
ಇದಕ್ಕೂ ಮುನ್ನ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಕೂಡ ಮಧ್ಯಪ್ರದೇಶದ ಕಲುಷಿತ ನದಿಯನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ಬಿಟ್ಟು ತಬಾಹಿ ಅವರನ್ನು ಶ್ಲಾಘಿಸಿದ್ದರು. ಅವರನ್ನು ‘ವೀರ’ ಎಂದು ಕರೆದಿದ್ದ ಪೀಟರ್ಸನ್, ಅವರು ಅಂತರರಾಷ್ಟ್ರೀಯ ಮನ್ನಣೆಗೆ ಅರ್ಹರು ಎಂದು ಹೇಳಿದ್ದರು.