ಐಎಎಸ್ ಹುದ್ದೆ ತ್ಯಜಿಸಿದ 5 ದಿನಗಳಲ್ಲೇ ಬಿಜೆಪಿ ಸೇರ್ಪಡೆ : ಎರಡು ದಿನಗಳಲ್ಲಿ ಲೋಕಸಭಾ ಉಪಚುನಾವಣೆಯ ಟಿಕೆಟ್ ಪಡೆದ ದೇಬಾಶಿಶ್ ಶರ್ಮಾ
ಗುವಾಹಟಿ: ನಾಗಾಂವ್ ಜಿಲ್ಲಾ ಆಯುಕ್ತರ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಕೆಲವೇ ದಿನಗಳಲ್ಲೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ದೇಬಾಶಿಶ್ ಶರ್ಮಾ ಅವರನ್ನು ಬಿಜೆಪಿ ನಾಗಾಂವ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಿದೆ. ಅಕ್ಟೋಬರ್ 6 ರಂದು ಲೋಕಸಭಾ ಉಪಚುನಾವಣೆಯು ನಡೆಯಲಿದೆ.
ನಾಗಾಂವ್ ಜಿಲ್ಲಾ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದ ಶರ್ಮಾ, ಸೆಪ್ಟೆಂಬರ್ 3 ರಂದು ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಬಳಿಕ ಸೆಪ್ಟೆಂಬರ್ 8 ರಂದು ಬಿಜೆಪಿ ಸೇರಿದ್ದ ಅವರಿಗೆ, ಎರಡು ದಿನಗಳ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನೀಡಲಾಗಿದೆ.
ಕಳೆದ ವಾರ ಕಾಂಗ್ರೆಸ್ ಸಂಸದ ರಕಿಬುಲ್ ಹುಸೇನ್ ಅವರು ಅಸ್ಸಾಂ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿ, ನಾಗಾಂವ್ ಜಿಲ್ಲಾ ಆಯುಕ್ತರಾಗಿ ಶರ್ಮಾ ಅವರ ಅಧಿಕಾರಾವಧಿಯಲ್ಲಿ ಕೈಗೊಂಡ ವಿವಿಧ ನಿರ್ಧಾರಗಳನ್ನು ಪರಿಶೀಲಿಸಿ, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಅಗತ್ಯ ಕ್ರಮ ಹಾಗೂ ಮಾರ್ಗದರ್ಶನಕ್ಕಾಗಿ ಈ ದೂರನ್ನು ಚುನಾವಣಾ ಆಯೋಗಕ್ಕೆ ರವಾನಿಸಿದೆ.
ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಹಾಗೂ ಸಾರ್ವಜನಿಕ ಸಂಪರ್ಕದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶರ್ಮಾ, 1992ರಲ್ಲಿ ಅಸ್ಸಾಂ ಸಿವಿಲ್ ಸರ್ವಿಸ್ ಗೆ ಸೇರ್ಪಡೆಗೊಂಡಿದ್ದರು. ಅವರ ಮೊದಲು ಬಾರ್ಪೇಟಾ ಗೆ ನೇಮಕಗೋಡಿದ್ದರು. ಅಂದಿನ ಅಸ್ಸಾಂ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಎಸ್. ಕೆ. ಸಿನ್ಹಾ ಅವರ ವಿಶೇಷ ಅಧಿಕಾರಿಯಾಗಿ ಹಾಗೂ ಮುಂಬೈನ ಅಸ್ಸಾಂ ಭವನದ ಉಪ ಸ್ಥಾನಿಕ ಆಯುಕ್ತರಾಗಿ ಸೇವೆ ಸಲ್ಲಿಸುವ ಮೂಲಕ ಮಹಾರಾಷ್ಟ್ರದಲ್ಲಿ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.
ಅವರು ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರಾಗಿ ಹಾಗೂ ಮೊರಿಗಾಂವ್ ಜಿಲ್ಲಾ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಅವರನ್ನು ನಾಗಾಂವ್ ಗೆ ವರ್ಗಾಯಿಸಲಾಗಿತ್ತು. ಅಲ್ಲಿಂದಲೇ ಅವರು ಸ್ವಯಂ ನಿವೃತ್ತಿ ಪಡೆದಿದ್ದರು. ಶರ್ಮಾ ಅವರು ಕ್ಯಾನ್ಸರ್ ಆರೈಕೆ ಸಂಸ್ಥೆಯಾದ ದೀಪ್ ಶಿಕಾ ದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಟ್ರಸ್ಟಿಯೂ ಆಗಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದ ಪ್ರದ್ಯುತ್ ಬೊರ್ದೊಲೊಯ್, ಬಳಿಕ ಬಿಜೆಪಿ ಸೇರಿ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ದಿಸ್ಪುರ ಕ್ಷೇತ್ರದಿಂದ ಜಯಗಳಿಸಿದ ಹಿನ್ನೆಲೆಯಲ್ಲಿ ನಾಗಾಂವ್ ಲೋಕಸಭಾ ಕ್ಷೇತ್ರ ತೆರವಾಗಿತ್ತು.