×
Ad

ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಗಲ್ಲು ತಪ್ಪಿಸಲು ಕೊನೆಯ ಪ್ರಯತ್ನ | ತಲಾಲ್ ಕುಟುಂಬದೊಂದಿಗೆ ನಾಳೆ ಯೆಮನ್‌ ನಲ್ಲಿ ನಿರ್ಣಾಯಕ ಮಾತುಕತೆ

Update: 2025-07-14 23:44 IST

ಕೋಝಿಕೋಡ್: ಯೆಮನ್‌ ನ ಜೈಲಿನಲ್ಲಿ ಮರಣದಂಡನೆ ಎದುರಿಸುತ್ತಿರುವ ಕೇರಳದ ನರ್ಸ್ ನಿಮಿಷಪ್ರಿಯ ಅವರ ಬಿಡುಗಡೆ ಸಂಬಂಧದ ಪ್ರಯತ್ನಗಳು ತೀವ್ರಗೊಂಡಿವೆ. ಪ್ರಸಿದ್ಧ ಸೂಫಿ ಗುರು ಶೇಖ್ ಹಬೀಬ್ ಉಮರ್ ಬಿನ್ ಹಫೀಲ್ ನೇತೃತ್ವದಲ್ಲಿ ತುರ್ತು ಮಾತುಕತೆಗಳು ತಡರಾತ್ರಿವರೆಗೆ ಮುಂದುವರೆದಿದ್ದು, ನಿರ್ಣಾಯಕ ಹಂತಕ್ಕೆ ಪ್ರವೇಶಿಸಿದೆ ಎಂದು mediaoneonline.com ವರದಿ ಮಾಡಿದೆ.

ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ತಕ್ಷಣದ ಹಸ್ತಕ್ಷೇಪದ ಬಳಿಕ ಶೇಖ್ ಹಬೀಬ್ ಉಮರ್ ಅವರ ನಿಯೋಗವು ಉತ್ತರ ಯೆಮನ್‌ ನ ದಮಾರ್ ನಲ್ಲಿರುವ ತಲಾಲ್ ಕುಟುಂಬದ ತವರು ಪ್ರದೇಶಕ್ಕೆ ಭೇಟಿ ನೀಡಿ ಮಾತುಕತೆ ಆರಂಭಿಸಿದೆ. ದಮಾರ್‌ ನ ಬುಡಕಟ್ಟು ಮುಖಂಡರು, ತಲಾಲ್ ಅವರ ಕುಟುಂಬ ಸದಸ್ಯರು ಮತ್ತು ಕಾನೂನು ಸಮಿತಿಯೊಂದಿಗೆ ನಾಳೆ (ಮಂಗಳವಾರ) ಮತ್ತಷ್ಟು ಮಾತುಕತೆ ನಡೆಯಲಿದೆ ಎಂದು ತಿಳಿದು ಬಂದಿದೆ.

ನಿಯೋಗದ ಮೂಲಗಳ ಪ್ರಕಾರ, ಮಾತುಕತೆಗಳು ಆಶಾದಾಯಕವಾಗಿ ಸಾಗುತ್ತಿದ್ದು, ನಾಳೆಯ ಸಂವಹನದಲ್ಲಿ ಸಮಾಧಾನ ತರಿಸುವ ಅಂತಿಮ ನಿರ್ಧಾರ ಕೈಗೊಳ್ಳಲಾಗಬಹುದೆಂಬ ನಿರೀಕ್ಷೆಯಿದೆ. ಪ್ರಕರಣವು ಗಂಭೀರವಾಗಿರುವ ಹಿನ್ನೆಲೆಯಲ್ಲಿ, ಸ್ಥಳೀಯ ಕುಟುಂಬಗಳು ಅದನ್ನು ಭಾವನಾತ್ಮಕವಾಗಿ ನೋಡುತ್ತಿದೆ. ಆದುದರಿಂದ ಇದುವರೆಗೆ ನೇರ ಸಂವಾದ ಸಾಧ್ಯವಾಗಿರಲಿಲ್ಲ. ಕಾಂತಪುರಂ ಎ ಪಿ ಅಬೂಬಕರ್ ಮುಸ್ಲಿಯರ್ ಅವರ ಮಧ್ಯಪ್ರವೇಶದಿಂದ ಮಾತ್ರ ಈ ಸಮಾಲೋಚನೆ ಸಾಧ್ಯವಾಗಿದೆ ಎನ್ನಲಾಗಿದೆ.

ಈ ನಡುವೆ, ನಿಮಿಷಪ್ರಿಯ ಅವರ ಮರಣದಂಡನೆಯನ್ನು ಜುಲೈ 16 ರಂದು ಜಾರಿಗೊಳಿಸಲಾಗುವುದೆಂಬ ವರದಿಗಳು ಬಂದಿದೆ. ಈ ಹಿನ್ನೆಲೆಗಳಲ್ಲಿ ಮುಂದಿನ ಮಾತುಕತೆಗಳು ನಿರ್ಣಾಯಕವಾಗಿದ್ದು, ತಲಾಲ್ ಕುಟುಂಬದಿಂದ ಕ್ಷಮೆ ಅಥವಾ ಶಿಕ್ಷಾ ಮುಂದೂಡಿಕೆಗೆ ಒಪ್ಪಿಗೆ ಪಡೆಯುವ ನಿರೀಕ್ಷೆಯಿದೆ.

ಇಡೀ ದೇಶವು ಈ ಘಟನೆಯನ್ನು ಕುತೂಹಲದಿಂದ ನೋಡುತ್ತಿದೆ. ಎ ಪಿ ಉಸ್ತಾದರ ಮಧ್ಯಪ್ರವೇಶದಿಂದ ಮಾನವೀಯ ನೆಲೆಯಲ್ಲಿ ಈ ಪ್ರಕರಣವು ಇತ್ಯರ್ಥವಾಗಬಹುದು ಎಂಬ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News