ಮಲ್ಲಿಕಾರ್ಜುನ ಖರ್ಗೆ (Photo: PTI)

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇರ ಸೂಚನೆಯಂತೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ 'ಇಂಡಿಯಾ' (INDIA) ಮೈತ್ರಿಕೂಟ ಹಮ್ಮಿಕೊಂಡಿದ್ದ ಸಾಂಕೇತಿಕ ಸಾರ್ವಜನಿಕ ದೋಷಾರೋಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಪ್ರಧಾನಿ ಮತ್ತು ಗೃಹ ಸಚಿವರ ನೇರ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗವನ್ನು ನಡೆಸುತ್ತಿದ್ದಾರೆ' ಎಂದು ದೂರಿದರು.

ಏಳು ತಿಂಗಳ ಹಿಂದೆ 193 ಸಂಸದರು ಸಲ್ಲಿಸಿದ್ದ ದೋಷಾರೋಪಣಾ ನೋಟಿಸ್‌ ಗಳನ್ನು ಯಾವುದೇ ಪರಿಗಣನೆಯಿಲ್ಲದೆ ತಿರಸ್ಕರಿಸಲಾಗಿತ್ತು ಎಂದು ಖರ್ಗೆ ತಿಳಿಸಿದರು.

'ನಾವು ಇಂದು ಮಂಡಿಸಿರುವ ದೋಷಾರೋಪಣಾ ಪ್ರಸ್ತಾವನೆಯು ಸಾಂವಿಧಾನಿಕ ಸಂಸ್ಥೆಯ ಗೌರವವನ್ನು ಎತ್ತಿಹಿಡಿಯುವ ಉದ್ದೇಶ ಹೊಂದಿದೆ. ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ವಿರೋಧ ಪಕ್ಷಗಳಿಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕು ಎಂಬುದಷ್ಟೇ ನಮ್ಮ ಅಪೇಕ್ಷೆ' ಎಂದು ಅವರು ಸ್ಪಷ್ಟಪಡಿಸಿದರು.

ಮತದಾರರ ಪಟ್ಟಿಯಲ್ಲಿ ತಿರುಚುವಿಕೆ ನಡೆಯುತ್ತಿದೆ ಎಂಬ ಆರೋಪದ ಬಗ್ಗೆಯೂ ಎಚ್ಚರಿಕೆ ನೀಡಿದ ಖರ್ಗೆ, 'ದುರ್ಬಲ ವರ್ಗಗಳು, ಮಹಿಳೆಯರು ಮತ್ತು ಯುವಜನರ ಮತದಾನದ ಹಕ್ಕುಗಳನ್ನು ದಿಲ್ಲಿಯಲ್ಲಿ ಕುಳಿತಿರುವ ಯಾರೋ ಒಬ್ಬರು ಕಂಪ್ಯೂಟರ್ ಮೂಲಕ ಗುಪ್ತವಾಗಿ ಅಳಿಸಿಹಾಕದಂತೆ ನಾವು ನೋಡಿಕೊಳ್ಳಬೇಕು' ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor