ಪ್ರಧಾನಿ ಮೋದಿ ವಿರುದ್ಧ ಕಣಕ್ಕಿಳಿದಿದ್ದ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ: ನಗಬೇಕೋ? ಅಳಬೇಕೋ? ಎಂದು ನೋವು ಹಂಚಿಕೊಂಡ ಕಾಮಿಡಿಯನ್
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಅವರ ವಿರುದ್ಧ ಕಣಕ್ಕಿಳಿಯಲು ನಾಮಪತ್ರ ಸಲ್ಲಿಸಿದ್ದ ಖ್ಯಾತ ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರ ಪ್ರಮಾಣ ಪತ್ರವನ್ನು ಬುಧವಾರ ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಕುರಿತು ವಿಡಿಯೊ ಸಂದೇಶವೊಂದನ್ನು ಪೋಸ್ಟ್ ಮಾಡಿರುವ ಶ್ಯಾಮ್ ರಂಗೀಲಾ, ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ 55 ಅಭ್ಯರ್ಥಿಗಳ ಪೈಕಿ 36 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರಾಯ್ ಸೇರಿದಂತೆ 15 ಅಭ್ಯರ್ಥಿಗಳ ನಾಮಪತ್ರಗಳು ಪರಿಶೀಲನಾ ಪ್ರಕ್ರಿಯೆಯಲ್ಲಿ ಸ್ವೀಕೃತಗೊಂಡಿವೆ ಎಂದಿದ್ದಾರೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳಲ್ಲಿ ತೊಡಕುಗಳನ್ನು ಎದುರಿಸಬೇಕಾಯಿತು ಎಂದು ಆರೋಪಿಸಿರುವ ಅವರು, ನನ್ನ ನಾಮಪತ್ರಗಳನ್ನು ಕಾಲಮಿತಿಯೊಳಗೆ ಸಲ್ಲಿಸದಂತೆ ತಡೆಯಲಾಯಿತು ಎಂದು ದೂರಿದ್ದಾರೆ. ಅವರ ಆಪಾದನೆಯು ಜಿಲ್ಲಾಧಿಕಾರಿ ಕಚೇರಿಯವರೆಗೂ ವಿಸ್ತರಿಸಿದ್ದು, ನನ್ನನ್ನು ಅನ್ಯಾಯವಾಗಿ ಏಕಾಂಗಿಯಾಗಿಸಲಾಯಿತು ಹಾಗೂ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸಂದರ್ಭದಲ್ಲಿ ನನಗೆ ಸೂಕ್ತ ನೆರವನ್ನು ನಿರಾಕರಿಸಲಾಯಿತು ಎಂದೂ ಆರೋಪಿಸಿದ್ದಾರೆ.
“ನನ್ನ ದಾಖಲೆಗಳಲ್ಲಿ ಸ್ವಲ್ಪ ಸಮಸ್ಯೆಯಿದೆ ಎಂದು ಇಂದು ಜಿಲ್ಲಾಧಿಕಾರಿಗಳು ನನಗೆ ತಿಳಿಸಿದರು ಹಾಗೂ ನಾನು ಪ್ರಮಾಣ ವಚನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಅವರು ನನ್ನೊಂದಿಗೆ ವಕೀಲರು ಬರಲು ಅವಕಾಶ ನೀಡಲಿಲ್ಲ ಹಾಗೂ ನನ್ನೊಬ್ಬನನ್ನೇ ಕರೆಸಿಕೊಂಡರು. ನನ್ನ ಸ್ನೇಹಿತನನ್ನು ಥಳಿಸಲಾಯಿತು. ಮೋದಿಯವರು ನಟಿಸಬಹುದು ಮತ್ತು ಅಳಬಹುದು. ಆದರೆ, ನಾನಿಲ್ಲಿ ಅಳಲು ಬಯಸುವುದಿಲ್ಲ” ಎಂದು ರಂಗೀಲಾ ಹೇಳಿಕೊಂಡಿದ್ದಾರೆ.
“ನಿನ್ನೆ 27 ನಾಮಪತ್ರಗಳ ಸಲ್ಲಿಕೆಯಾಯಿತು ಹಾಗೂ ಇಂದು 32 ನಾಮಪತ್ರಗಳು ತಿರಸ್ಕೃತಗೊಂಡಿವೆ. ಚುನಾವಣಾ ಆಯೋಗವನ್ನು ನೋಡಿ ನನಗೆ ನಗುವಂತಾಗುತ್ತಿದೆ. ನಾನು ನಗಲೊ ಅಥವಾ ಅಳಲೊ” ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ವಾರಣಾಸಿ ಜಿಲ್ಲಾಧಿಕಾರಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯು, ಶ್ಯಾಮ್ ರಂಗೀಲಾರ ನಾಮಪತ್ರದಲ್ಲಿ ದೋಷವಿತ್ತು ಹಾಗೂ ಔಪಚಾರಿಕ ಕಾರ್ಯವಿಧಾನಗಳಿಗೆ ಅನುಗುಣವಾಗಿರಲಿಲ್ಲ ಎಂದು ಚುನಾವಣಾ ಆಯೋಗದ ಕ್ರಮವನ್ನು ಸಮರ್ಥಿಸಿಕೊಂಡಿದೆ.