ವಿಕ್ರಮ್ ನಾಥ್ | Photo Credit : PTI 

ಹೊಸದಿಲ್ಲಿ: ‘ವಕೀಲರು ಮನೆಯಿಂದಲೇ ಕೆಲಸ ಮಾಡುವ ಮೂಲಕ ವಾಯು ಮಾಲಿನ್ಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ನ್ಯಾಯಾಧೀಶರಾದ ನಾವು ಪ್ರಕರಣಗಳ ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಬರಲೇಬೇಕು’ ಎಂದು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ವಿಕ್ರಮ್ ನಾಥ್ ಬುಧವಾರ ಬೇಸರ ವ್ಯಕ್ತಪಡಿಸಿದರು.

ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯ ತೀವ್ರವಾಗಿರುವ ಹಿನ್ನೆಲೆಯಲ್ಲಿ, ಈ ವಿಚಾರ ಸುಪ್ರೀಂ ಕೋರ್ಟ್ನಲ್ಲೂ ಚರ್ಚೆಗೆ ಗ್ರಾಸವಾಯಿತು.

ಮಾಲಿನ್ಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ, ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ದೀಪಾವಳಿಯ ಬಳಿಕ, ನವೆಂಬರ್ 17ರಂದು ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಆದರೆ, ದಿಲ್ಲಿಯ ಮಾಲಿನ್ಯ ಪರಿಸ್ಥಿತಿ ಗಂಭೀರವಾಗಿರುವುದರಿಂದ ದೀಪಾವಳಿಗೂ ಮುನ್ನವೇ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಪ್ರತಿವಾದಿ ಪರ ವಕೀಲರು ಒತ್ತಾಯಿಸಿದರು.

ಇದಕ್ಕೆ ಹಾಸ್ಯದ ಧಾಟಿಯಲ್ಲಿ ಪ್ರತಿಕ್ರಿಯಿಸಿದ ಇಂದಿರಾ ಜೈಸಿಂಗ್, ದೀಪಾವಳಿಗೂ ಮುನ್ನ ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಿರುವುದರಿಂದ ವಿಚಾರಣೆಯನ್ನು ನವೆಂಬರ್ 17ರ ಬಳಿಕ ನಡೆಸಬೇಕು ಎಂದು ಹೇಳಿದರು.

ಆಗ ನ್ಯಾಯಮೂರ್ತಿ ವಿಕ್ರಮ್ ನಾಥ್, ‘ದೀಪಾವಳಿಯ ಬಳಿಕ ಮಾಲಿನ್ಯ ಇನ್ನಷ್ಟು ತೀವ್ರವಾಗಲಿದೆ. ದೀಪಾವಳಿಗೂ ಮುನ್ನ ಗಾಳಿ ಶುದ್ಧವಾಗಿರಲಿದೆ. ಹೀಗಾಗಿ, ನೀವು ಅದಕ್ಕೂ ಮುನ್ನವೇ ಬನ್ನಿ’ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇಂದಿರಾ ಜೈಸಿಂಗ್, ‘ದೀಪಾವಳಿಗೂ ಮುನ್ನ ಹಾಗೂ ಬಳಿಕ ಮಾಲಿನ್ಯ ಮುಂದುವರಿಯಲಿದೆ. ನನಗೆ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ದೊರೆತರೆ ಮಾಲಿನ್ಯವನ್ನು ಸಹಿಸಿಕೊಳ್ಳಬಲ್ಲೆ. ಆದರೆ, ನ್ಯಾಯಾಧೀಶರೂ ನ್ಯಾಯಾಲಯಕ್ಕೆ ಬಂದು ಮಾಲಿನ್ಯವನ್ನು ಎದುರಿಸಬೇಕಾಗುತ್ತದೆ’ ಎಂದು ಲಘು ಧಾಟಿಯಲ್ಲಿ ಹೇಳಿದರು.

‘ನಮಗೆ ಮನೆಯಲ್ಲಿ ಕೂರಲು ಸಾಧ್ಯವಿಲ್ಲ. ನೀವು ಮನೆಯಿಂದಲೇ ಕೆಲಸ ಮಾಡುವ ಮೂಲಕ ಮಾಲಿನ್ಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ನಮಗೆ ಆ ಅವಕಾಶವಿಲ್ಲ’ ಎಂದು ನ್ಯಾಯಮೂರ್ತಿ ವಿಕ್ರಮ್ ನಾಥ್ ಹೇಳಿದರು. ವಕೀಲರು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಪಾಲ್ಗೊಳ್ಳಬಹುದಾದ ಅವಕಾಶವನ್ನು ಉಲ್ಲೇಖಿಸಿ ಅವರು ಈ ಮಾತುಗಳನ್ನು ಹೇಳಿದರು.

ದೀಪಾವಳಿ ಬಳಿಕ ಮತ್ತಷ್ಟು ಹದಗೆಟ್ಟಿತ್ತು ಗಾಳಿ

ಕಳೆದ ವರ್ಷ ದೀಪಾವಳಿಯ ಸಂದರ್ಭದಲ್ಲಿ ದಿಲ್ಲಿಯ ವಾಯು ಗುಣಮಟ್ಟ ಗಣನೀಯವಾಗಿ ಕುಸಿದಿತ್ತು. 2025ರ ಅಕ್ಟೋಬರ್ 18ರಂದು ನಗರದ 24 ಗಂಟೆಗಳ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 268ರಷ್ಟಿತ್ತು. ಅಕ್ಟೋಬರ್ 19ರಂದು ಅದು 296ಕ್ಕೆ ಏರಿಕೆಯಾಗಿತ್ತು. ದೀಪಾವಳಿಯ ದಿನವಾದ ಅಕ್ಟೋಬರ್ 20ರಂದು 345ಕ್ಕೆ ತಲುಪಿತ್ತು.

ಅಕ್ಟೋಬರ್ 21ರಂದು AQI 351ಕ್ಕೆ ಏರಿಕೆಯಾಗಿದ್ದರೆ, ಅಕ್ಟೋಬರ್ 22ರಂದು 353ಕ್ಕೆ ತಲುಪಿತ್ತು. ಈ ಅವಧಿಯಲ್ಲಿ ದಿಲ್ಲಿಯ ವಾಯು ಗುಣಮಟ್ಟ ‘ಕಳಪೆ’ ಪ್ರವರ್ಗದಲ್ಲಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor