Madhya Pradesh| ವೃದ್ಧನ ಹೆಗಲ ಮೇಲೆ ಕುಳಿತು ಹಳ್ಳ ದಾಟುವ ವಿಡಿಯೋ ವೈರಲ್ : ಕಂದಾಯ ಅಧಿಕಾರಿ ಅಮಾನತು
Photo | indiatoday
ಇಂದೋರ್: ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕಂದಾಯ ಅಧಿಕಾರಿಯೊಬ್ಬರು ಕ್ಷೇತ್ರ ಪರಿಶೀಲನೆಗೆ ತೆರಳಿದ್ದ ವೇಳೆ ನೀರು ತುಂಬಿದ್ದ ಹಳ್ಳವನ್ನು ದಾಟಲು ವೃದ್ಧರೊಬ್ಬರ ಹೆಗಲ ಮೇಲೆ ಕುಳಿತು ಸಾಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದರ ಬೆನ್ನಲ್ಲೆ ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಮಾತಾ ಗ್ರಾಮ ಪಂಚಾಯಿತಿ ಪ್ರದೇಶಕ್ಕೆ ಕ್ಷೇತ್ರ ಸಮೀಕ್ಷೆ ನಡೆಸಲು ಕಂದಾಯ ಅಧಿಕಾರಿ ಪಟ್ವಾರಿ ನೀಲೇಶ್ ನಾಮದೇವ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ 45 ಸೆಕೆಂಡ್‌ಗಳ ವಿಡಿಯೋದಲ್ಲಿ ನೀರು ತುಂಬಿದ್ದ ಹಳ್ಳವನ್ನು ದಾಟುವಾಗ ನಾಮದೇವ್ 65 ವರ್ಷದ ವೃದ್ಧ ಲಾಲ್ವಾ ಕೇವಟ್ ಅವರ ಬೆನ್ನಿನ ಮೇಲೆ ಕುಳಿತಿರುವುದು ಕಂಡುಬಂದಿದೆ.
ಅಧಿಕಾರಿಗಳ ಪ್ರಕಾರ, ವನ್ಯಜೀವಿಗಳಿಂದ ಉಂಟಾದ ಹಾನಿಯ ಮೌಲ್ಯಮಾಪನದ ಭಾಗವಾಗಿ ಕೇವಟ್ ಅವರ ಮನೆ ಮತ್ತು ಕೃಷಿ ಭೂಮಿಯನ್ನು ಪರಿಶೀಲಿಸಲು ನಾಮದೇವ್ ತೆರಳಿದ್ದರು.
ಕೇವಟ್ ಅವರ ಮನೆಗೆ ಹಳ್ಳವನ್ನು ದಾಟಿ ಸಾಗಬೇಕಿದೆ. ಆದರೆ ಅವರು ತನ್ನ ಶೂಗಳು ಒದ್ದೆಯಾಗುವುದನ್ನು ಬಯಸಿರಲಿಲ್ಲ. ಪರಿಶೀಲನೆ ನಡೆಸಬೇಕಿದ್ದರೆ ನನಗೆ ನೀರನ್ನು ದಾಟಲು ಸಹಕರಿಸಬೇಕು ಎಂದು ಅವರು ವೃದ್ಧ ವ್ಯಕ್ತಿಗೆ ಹೇಳಿದ್ದಾರೆ. ಈ ವೇಳೆ ನಾಮದೇವ್ ರನ್ನು ಲಾಲ್ವಾ ಕೇವಟ್ ಅವರು ಹೆಗಲ ಮೇಲೆ ಹೊತ್ತುಕೊಂಡು ನೀರನ್ನು ದಾಟಲು ಸಹಾಯ ಮಾಡಿದ್ದಾರೆ.
ಸ್ಥಳೀಯ ನಿವಾಸಿಯೊಬ್ಬರು ಈ ಘಟನೆಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಬಳಿಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಅಧಿಕಾರಿಯ ವರ್ತನೆಗೆ ವ್ಯಾಪಕವಾದ ಟೀಕೆ ವ್ಯಕ್ತವಾಗಿದೆ.
ವಿಡಿಯೋ ವೈರಲ್ ಬಳಿಕ ಹಿರಿಯ ಅಧಿಕಾರಿಗಳು ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ. ನಾಮದೇವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಪ್ರಿಯಾ ಪಾಠಕ್ ಹೇಳಿದ್ದಾರೆ.