Maharashtra | Begya Pawar ಕಸ್ಟಡಿ ಸಾವು ಪ್ರಕರಣ : 9 ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಸಾಂದರ್ಭಿಕ ಚಿತ್ರ
ಮುಂಬೈ: ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ನ್ಯಾಯಾಲಯ 2011ರ ಬೇಗ್ಯಾ ಪವಾರ್ ಕಸ್ಟಡಿ ಸಾವಿನ ಪ್ರಕರಣದಲ್ಲಿ 9 ಮಂದಿ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಕೃತ್ಯವು ಗಂಭೀರ ಮತ್ತು ಕ್ರೂರವಾಗಿದ್ದು, ಅದನ್ನು ಸಾರ್ವಜನಿಕ ಕರ್ತವ್ಯದ ಭಾಗವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜೆ ಪಿ ಝಾಪಾಟೆ ಅವರು, 9 ಮಂದಿ ಪೊಲೀಸರನ್ನು ಕೊಲೆ, ಅಕ್ರಮ ಬಂಧನ, ತಪ್ಪೊಪ್ಪಿಗೆ ಪಡೆಯಲು ಹಲ್ಲೆ, ಸಾಕ್ಷ್ಯ ನಾಶಕ್ಕೆ ಸಂಬಂಧಿಸಿ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದ್ದಾರೆ.
ಇದೇ ವೇಳೆ ಪೊಲೀಸರು ತಮ್ಮ ಕರ್ತವ್ಯವನ್ನಷ್ಟೇ ನಿರ್ವಹಿಸಿದ್ದಾರೆ ಎಂಬ ಪ್ರತಿವಾದಿಯ ವಾದವನ್ನು ನ್ಯಾಯಾಲಯ ತಳ್ಳಿಹಾಕಿದೆ. "ಪೊಲೀಸ್ ಅಧಿಕಾರಿಗಳು ನಾಗರಿಕರ ರಕ್ಷಕರು. ಅವರು ಬೇಗ್ಯಾ ಪವಾರ್ ಅವರ ಮೇಲೆ ಹಲ್ಲೆ ನಡೆಸಿದರು, ಅದು ಅವರ ಸಾವಿಗೆ ಕಾರಣವಾಯಿತು. ಆದ್ದರಿಂದ, ಇದು ಸಾರ್ವಜನಿಕ ಕರ್ತವ್ಯದ ಭಾಗವಲ್ಲ” ಎಂದು ನ್ಯಾಯಾಲಯ ಹೇಳಿದೆ.
ಜೀವಾವಧಿ ಶಿಕ್ಷೆಗೆ ಗುರಿಯಾದವರಲ್ಲಿ ರಿಸೋಡ್ ಪೊಲೀಸ್ ಠಾಣೆಯ ಆಗಿನ ಉಸ್ತುವಾರಿ ಮಾಧವ್ ದಂಡೆ, ಸಿಬ್ಬಂದಿ ಮದನ್ ಪವಾರ್, ಶಿವಾಜಿ ಖಿಲ್ಲರಿ, ಪಂಜಾಬ್ ಪಾಟ್ಕರ್, ರಮೇಶ್ ಪವಾರ್, ಪ್ರಕಾಶ್ ತಾರಾಮ್, ನಾಗೋರಾವ್ ಖಂಡ್ಕೆ, ಅಶೋಕ್ ವೈದ್ಯ ಮತ್ತು ವಸಂತ ಜಾಧವ್ ಸೇರಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಮಾಧವ್ ದಂಡೆ ಮತ್ತು ಅವರ ತಂಡವು ಮೇ 10, 2011ರಂದು ವಧೋನಾ ಗ್ರಾಮದಿಂದ ಬೇಗ್ಯಾ ಪವಾರ್ ಮತ್ತು ರಾಜು ಪವಾರ್ ಅವರನ್ನು ಅಕ್ರಮವಾಗಿ ಕಸ್ಟಡಿಗೆ ತೆಗೆದುಕೊಂಡರು. ಬಳಿಕ ಅವರನ್ನು ರಿಸೋಡ್ ಪೊಲೀಸ್ ಠಾಣೆಗೆ ಕರೆತಂದು, ದರೋಡೆ ಪ್ರಕರಣ ಒಪ್ಪಿಕೊಳ್ಳುವಂತೆ ಕಬ್ಬಿಣದ ಪೈಪ್ ಗಳಿಂದ ಹಲ್ಲೆ ನಡೆಸಲಾಗಿತ್ತು. ಗಂಭೀರವಾಗಿದ್ದ ಬೇಗ್ಯಾ ಪವಾರ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್‌ನಲ್ಲೇ ಅವರು ಮೃತಪಟ್ಟಿದ್ದಾರೆ. ರಾಜು ಪವಾರ್ ಅವರ ಕೈ ಮತ್ತು ಕಾಲಿಗೆ ಗಂಭೀರ ಗಾಯಗಳಾಗಿದ್ದವು.
ಬಳಿಕ ಪ್ರಕರಣ ಮುಚ್ಚಿಹಾಕಲು ಪೊಲೀಸರು ಸುಳ್ಳು ಎಫ್ಐಆರ್ ದಾಖಲಿಸಿದ್ದರು. ದರೋಡೆಗೆ ಸಿದ್ಧತೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸುವ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಗಾಯಗಳಾಗಿವೆ ಎಂದು ದಾಖಲೆ ಸೃಷ್ಟಿಸಲಾಗಿತ್ತು. ಅಲ್ಲದೆ, ಗ್ರಾಮಸ್ಥರೇ ಬೇಗ್ಯಾ ಪವಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳುವಂತೆ ವೈದ್ಯಕೀಯ ಸಿಬ್ಬಂದಿಯ ಮೇಲೂ ಒತ್ತಡ ಹೇರಲಾಗಿತ್ತು.
ಈ ಪ್ರಕರಣವನ್ನು 2011ರ ಜೂನ್ 14ರಂದು ಸಿಐಡಿ ತನಿಖೆಗೆ ವಹಿಸಲಾಗಿತ್ತು. ಆ ಬಳಿಕ ನಿಜಾಂಶ ಬೆಳಕಿಗೆ ಬಂದಿದೆ.