ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ಶಾಸಕ ಎನ್.ಎ.ಹಾರಿಸ್ ನೇತೃತ್ವದ ನಿಯೋಗ: ಅಲ್ಪಸಂಖ್ಯಾತ ಸಮುದಾಯದ ಪ್ರಮುಖ ವಿಚಾರಗಳ ಕುರಿತು ಚರ್ಚೆ
ಬೆಂಗಳೂರು : ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎನ್.ಎ.ಹಾರಿಸ್ ನೇತೃತ್ವದ ನಿಯೋಗವು ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಸಂಬಂಧಿಸಿದ ಪ್ರಮುಖ ವಿಚಾರಗಳ ಕುರಿತು ಚರ್ಚಿಸಿತು.
ಈ ಭೇಟಿಯಲ್ಲಿ, ಅಲ್ಪಸಂಖ್ಯಾತ ಸಮುದಾಯದ ರಾಜಕೀಯ ಪ್ರತಿನಿಧಿತ್ವ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ, ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರ ಅಗತ್ಯತೆಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು.
ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ, ಯುವಜನರ ಸಬಲೀಕರಣ, ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿ ಹಾಗೂ ಮೂಲಭೂತ ಸೌಲಭ್ಯಗಳ ಲಭ್ಯತೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಿತು.
ಅಲ್ಪಸಂಖ್ಯಾತ ಸಮುದಾಯದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳ ಮೂಲಕ ಪರಿಣಾಮಕಾರಿಯಾಗಿ ಸರಕಾರದ ಗಮನಕ್ಕೆ ತಂದು, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವೇದಿಕೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎನ್.ಎ.ಹಾರಿಸ್ ಅವರಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಚಿವರಾದ ಯು.ಟಿ.ಖಾದರ್, ರಾಜ್ಯಸಭಾ ಸದಸ್ಯರಾದ ಡಾ.ಸಯ್ಯದ್ ನಾಸಿರ್ ಹುಸೇನ್, ಮನ್ಸೂರ್ ಅಲಿ ಖಾನ್, ಶಾಸಕಿ ಖನೀಝ್ ಫಾತಿಮಾ ಹಾಗೂ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಉಪಸ್ಥಿತರಿದ್ದರು.
"ಕರ್ನಾಟಕದ ಅಭಿವೃದ್ಧಿಯ ಪಯಣದಲ್ಲಿ ಪ್ರತಿಯೊಂದು ಸಮುದಾಯವೂ ಸಮಾನ ಅವಕಾಶಗಳನ್ನು ಹೊಂದಿ, ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲುದಾರರಾಗಬೇಕು. ಅಲ್ಪಸಂಖ್ಯಾತ ಸಮುದಾಯದ ಸಮಸ್ಯೆಗಳು ಮತ್ತು ಅಗತ್ಯತೆಗಳನ್ನು ಜನಪ್ರತಿನಿಧಿಗಳ ಮೂಲಕ ಪರಿಣಾಮಕಾರಿಯಾಗಿ ಸರಕಾರದ ಗಮನಕ್ಕೆ ತಂದು, ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಶಾಸಕರ ವೇದಿಕೆ ಕಾರ್ಯನಿರ್ವಹಿಸಲಿದೆ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕೆ ಆದ್ಯತೆ ನೀಡುವ ಮೂಲಕ ಸಮುದಾಯದ ಯುವಜನರು ಮತ್ತು ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ"
ಎನ್.ಎ.ಹಾರಿಸ್ ಶಾಸಕರು, ಶಾಂತಿನಗರ ವಿಧಾನಸಭಾ ಕ್ಷೇತ್ರ