Maharashtra | ಬ್ಲ್ಯಾಕ್ ಮೇಲ್ ಮಾಡಿ ಅಪ್ರಾಪ್ತರು, ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; 22 ವರ್ಷದ ವ್ಯಕ್ತಿ ಬಂಧನ
ಆರೋಪಿಯ ಫೋನ್ ನಲ್ಲಿ 600ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಪತ್ತೆ!
ನಂದೂರ್ಬಾರ್: ಅಪ್ರಾಪ್ತ ವಯಸ್ಕರು ಹಾಗೂ ಯುವಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಪೊಲೀಸರು 22 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ಫೋನ್‌ನಲ್ಲಿ 600ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳು ಪತ್ತೆಯಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿ ಸನಪ್ ತಿಳಿಸಿದ್ದಾರೆ.
ಆರೋಪಿಯು 2022ರಿಂದ 2026ರ ಆಗಸ್ಟ್ 6ರವರೆಗೆ ಸಂತ್ರಸ್ತರನ್ನು ಬ್ಲ್ಯಾಕ್‌ಮೇಲ್ ಮಾಡಿ ಶೋಷಿಸುತ್ತಿದ್ದ. ಅವರ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಕರಿಗೆ ಹಣದ ಆಮಿಷವೊಡ್ಡಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ವ್ಯಕ್ತಿಯೊಬ್ಬನ ಕುರಿತು ಪೊಲೀಸರಿಗೆ ಗೌಪ್ಯ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ, ಆರೋಪಿ ತನ್ನನ್ನು ರೈಸಿಂಗ್‌ಪುರ ನಿವಾಸಿ 22 ವರ್ಷದ ಚೇತನ್ ಪ್ರಕಾಶ್ ಕೋಲಿ ಎಂದು ಗುರುತಿಸಿಕೊಂಡಿದ್ದಾನೆ ಎಂದು ಅಶ್ವಿನಿ ಸನಪ್ ಹೇಳಿದ್ದಾರೆ.
ಆರೋಪಿಯ ಮೊಬೈಲ್ ಫೋನ್ ಪರಿಶೀಲಿಸಿದಾಗ ಹಲವಾರು ಅಶ್ಲೀಲ ವೀಡಿಯೊಗಳು ಮತ್ತು ಫೋಟೊಗಳು ಪತ್ತೆಯಾಗಿವೆ. ಬಳಿಕ ವಿಧಿವಿಜ್ಞಾನ ತಂಡ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡು ಅಗತ್ಯವಿರುವ ಎಲ್ಲ ತಪಾಸಣೆಗಳನ್ನು ಪೂರ್ಣಗೊಳಿಸಿದೆ. ಹೆಚ್ಚಿನ ಪರೀಕ್ಷೆಗಾಗಿ ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮೊಬೈಲ್ ಫೋನ್‌ನಿಂದ 600ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಕಂಡುಬಂದ ವೀಡಿಯೊಗಳ ಆಧಾರದಲ್ಲಿ ಸಂತ್ರಸ್ತರನ್ನು ಗುರುತಿಸುವ ಪ್ರಕ್ರಿಯೆಯನ್ನು ಪೊಲೀಸರು ಆರಂಭಿಸಿದ್ದಾರೆ. ಗುರುತಿಸಲಾದ ಸಂತ್ರಸ್ತರನ್ನು ಸಂಪರ್ಕಿಸಿ ಅವರ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಅಶ್ವಿನಿ ಸನಪ್ ಹೇಳಿದ್ದಾರೆ.
2022ರಿಂದಲೇ ಕೃತ್ಯ
‘ಆರೋಪಿ 2022ರಿಂದ ಈ ಕೃತ್ಯಗಳನ್ನು ನಡೆಸುತ್ತಿದ್ದಾನೆ ಎಂಬುದು ಪ್ರಸ್ತುತ ತನಿಖೆಯಿಂದ ಬಹಿರಂಗವಾಗಿದೆ. ಮೊಬೈಲ್‌ನಲ್ಲಿ ಪತ್ತೆಯಾದ ವೀಡಿಯೊಗಳು ಮತ್ತು ಫೋಟೋಗಳ ಆಧಾರದಲ್ಲಿ ಸಂತ್ರಸ್ತರನ್ನು ಸಂಪರ್ಕಿಸಲಾಗುವುದು. ಅವರ ಹೇಳಿಕೆಗಳನ್ನು ದಾಖಲಿಸಲಾಗುವುದು’ ಎಂದು ಅಶ್ವಿನಿ ಸನಪ್ ತಿಳಿಸಿದ್ದಾರೆ.