ಪತಿ ಆಸ್ಟ್ರೇಲಿಯಾದಲ್ಲಿದ್ದಾನೆ ಎಂದು 2 ವರ್ಷ ನಂಬಿಸಿದ್ದ ಪತ್ನಿ: ಗುಜರಾತ್‌ನಲ್ಲಿ 'ದೃಶ್ಯಂ' ಮಾದರಿಯ ಕೊಲೆ ರಹಸ್ಯ ಬಯಲು!
ಮೃತ ಜಿಗ್ನೇಶ್ ಮಾವಡಿಯಾ , ಪತ್ನಿ ಭೂಮಿಬೆನ್ , ನಿಲೇಶ್ ಕಚ್ಚತಿಯಾ , ಬಲ್ವೀರ್ ವರ್ಮಾ | Photo Credit : indiatoday.in
ಗಾಂಧಿನಗರ: ಗುಜರಾತ್ ನ ಜಾಮ್ ನಗರದಲ್ಲಿ 'ದೃಶ್ಯಂ' ಸಿನಿಮಾ ಮಾದರಿಯ ರೋಚಕ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ತನ್ನ ಪತಿಯು ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾನೆ ಎಂದು ಕಳೆದ 2 ವರ್ಷಗಳಿಂದ ಕುಟುಂಬದವರನ್ನು ನಂಬಿಸಿದ್ದ ಮಹಿಳೆಯೊಬ್ಬಳು, ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆ ಮಾಡಿ 12 ಅಡಿ ಆಳದ ಕಾಂಕ್ರೀಟ್ ನೆಲದ ಅಡಿಯಲ್ಲಿ ಹೂತಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ.
ಮೃತವ್ಯಕ್ತಿಯನ್ನು ಜಿಗ್ನೇಶ್ ಮಾವಡಿಯಾ ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ಮೃತ ಜಿಗ್ನೇಶ್ ಪತ್ನಿ ಪೃಥ್ವಿ ಅಲಿಯಾಸ್ ಭೂಮಿಬೆನ್, ಆಕೆಯ ಪ್ರಿಯಕರನೆನ್ನಲಾದ ನಿಲೇಶ್ ಕಚ್ಚತಿಯಾ ಮತ್ತು ಆತನ ಸ್ನೇಹಿತ ಬಲ್ವೀರ್ ವರ್ಮಾ ಎಂಬ ಗುರುತಿಸಲಾಗಿದ್ದು, ಮೂವರನ್ನೂ ಬಂಧಿಸಲಾಗಿದೆ.
ಸಂತ್ರಸ್ತ ಜಿಗ್ನೇಶ್ ಮಾವಡಿಯಾ ಅವರ ಪತ್ನಿ ಭೂಮಿಬೆನ್, "ತನ್ನ ಪತಿ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಪತಿಯ ಕಂಪನಿಯು ಫೋನ್ ಕರೆಗಳನ್ನು ಮಾಡಲು ಕಟ್ಟುನಿಟ್ಟಾಗಿ ನಿಷೇಧಿಸಿದೆ" ಎಂದು ಕಳೆದ ಸುಮಾರು ಎರಡು ವರ್ಷಗಳಿಂದ ಸಂಬಂಧಿಕರಿಗೆ ನಂಬಿಸುತ್ತಿದ್ದಳು. ಆದರೆ ಆಸ್ಟ್ರೇಲಿಯಾ ಪ್ರವಾಸದ ಯೋಜನೆಯಲ್ಲಿದ್ದ ಸೋದರಸಂಬಂಧಿಯೊಬ್ಬರು ಜಿಗ್ನೇಶ್ ಅವರ ವಿಳಾಸ ಹಾಗೂ ಸಂಪರ್ಕ ವಿವರಗಳನ್ನು ಕೇಳಿದಾಗ ಭೂಮಿಬೆನ್ ಮಾಹಿತಿ ನೀಡಲು ಹಿಂಜರಿದಿದ್ದಳು.
ಆಕೆಯ ಸತತ ಹಿಂಜರಿಕೆಯು ಕುಟುಂಬದ ಸದಸ್ಯರಲ್ಲಿ ಅನುಮಾನವನ್ನು ಹುಟ್ಟುಹಾಕಿದೆ. ಅಂತಿಮವಾಗಿ ಜಿಗ್ನೇಶ್ ಅವರ ಸಹೋದರ ಜುಲೈ 26 ರಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಬೆನ್ನಲ್ಲೇ ಪೋಲೀಸರು ತನಿಖೆ ನಡೆಸಿದ್ದು , ಜುಲೈ 30, ಗುರುವಾರದಂದು ಜಾಮ್ನಗರದ ಕಾರ್ಖಾನೆಯೊಂದರ ಆವರಣದ ಅಡಿಯಿಂದ ಅಸ್ಥಿಪಂಜರದ ಅವಶೇಷಗಳನ್ನು ಹೊರತೆಗೆಯಲಾಯಿತು. ಮೃತನ ಗುರುತನ್ನು ಖಚಿತಪಡಿಸಿಕೊಳ್ಳಲು ಅವಶೇಷಗಳನ್ನು ವಿಧಿವಿಜ್ಞಾನ ತಜ್ಞರಿಗೆ ಹಸ್ತಾಂತರಿಸಲಾಗಿದೆ.
ಜಿಗ್ನೇಶ್ ಜೊತೆ ವಿವಾಹವಾಗಿದ್ದರೂ ನಿಲೇಶ್ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪೃಥ್ವಿ, ಆತನೊಂದಿಗೆ ಸೇರಿ ಸಂಚು ರೂಪಿಸಿ ಜಿಗ್ನೇಶ್ ಗೆ ವಿಷ ಪ್ರಾಶನ ಮಾಡಿ ಹತ್ಯೆ ಮಾಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂತ್ರಸ್ತನನ್ನು ಸ್ಥಳಕ್ಕೆ ಕರೆಸಿಕೊಂಡು ಕೊಲೆ:
ಮೇ 31, 2024ರ ರಾತ್ರಿ ಮದ್ಯಪಾರ್ಟಿಯ ನೆಪ ಹೇಳಿ ಜಿಗ್ನೇಶ್ ಅವರನ್ನು ಇಂಡಸ್ಟ್ರಿಯಲ್ ಶೆಡ್ ಗೆ ಆರೋಪಿಗಳು ಕರೆಸಿಕೊಂಡಿದ್ದರು. ಬಳಿಕ ಸೈನೆಡ್ ಬೆರೆಸಿದ ಮದ್ಯವನ್ನು ಕುಡಿಸಿ ಕೊಲೆ ಮಾಡಿದ ಆರೋಪಿಗಳು ಸುಮಾರು 12 ಅಡಿ ಆಳದ ಗುಂಡಿ ತೋಡಿ, ಮೃತದೇಹವನ್ನು ಹೂತುಹಾಕಿ, ಮಣ್ಣಿನಿಂದ ಮುಚ್ಚಿ, ಆ ಸ್ಥಳಕ್ಕೆ ಸುಮಾರು 1 ಅಡಿ ದಪ್ಪದ ಕಾಂಕ್ರೀಟ್ ಹಾಕಿ ಸೀಲ್ ಮಾಡಿದ್ದರು.
ಸ್ಥಳ ಮಹಜರು ನಡೆಸಿದ ಬಳಿಕ ಪೋಲೀಸರು ಅಗೆಯುವ ಕಾರ್ಯಾಚರಣೆ ನಡೆಸಿದ್ದಾರೆ. ಕಾಂಕ್ರೀಟ್ ಅಗೆದಾಗ ಜಿಗ್ನೇಶ್ ಅವರದ್ದೇ ಎನ್ನಲಾದ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಾ, “ಹೂತುಹಾಕಿದ ಸ್ಥಳವನ್ನು ಮುಚ್ಚಿದ್ದ ಸುಮಾರು ಒಂದು ಅಡಿ ದಪ್ಪದ ಕಾಂಕ್ರೀಟ್ ಪದರವನ್ನು ಅಗೆಯಲು ಪವರ್ ಡ್ರಿಲ್ಲಿಂಗ್ ಯಂತ್ರಗಳನ್ನು ಬಳಸಬೇಕಾಯಿತು. ಇದೀಗ ಮೃತನ ಗುರುತನ್ನು ಖಚಿತಪಡಿಸಿಕೊಳ್ಳಲು, ಅವಶೇಷಗಳನ್ನು ವಿಧಿವಿಜ್ಞಾನ ತಜ್ಞರಿಗೆ ಹಸ್ತಾಂತರಿಸಲಾಗಿದೆ. ಸಂತ್ರಸ್ತನ ಪತ್ನಿ, ಆಕೆಯ ಪ್ರಿಯಕರ ಮತ್ತು ಅವರ ಸಹಚರನನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
ಆರೋಪಿಗಳ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಮತ್ತು ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಸಂಪೂರ್ಣ ಸರಣಿಯನ್ನು ಪತ್ತೆಹಚ್ಚಲು ಮತ್ತು ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಮುಂದಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.