Photo credit : NDTV

ಇಂಫಾಲ : ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಭದ್ರತಾ ಪರಿಸ್ಥಿತಿ ಕ್ಷೀಣಿಸಿದೆ. ರವಿವಾರ ರಾತ್ರಿ ಮತ್ತು ಸೋಮವಾರ ಬೆಳಿಗ್ಗೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ. ಈ ಹತ್ಯೆಗಳು ಪ್ರತಿಭಟನೆಗೆ ಕಾರಣವಾಗಿದ್ದು, ಇಂಫಾಲ ನಗರದಲ್ಲಿ ಜನಜೀವನ ಸ್ತಬ್ಧಗೊಂಡಿದೆ.

ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆಯ ಭಾಗವಾಗಿ ಇಬ್ಬರ ಮೃತದೇಹಗಳನ್ನು ಮುಖ್ಯಮಂತ್ರಿ ನಿವಾಸದ ಹೊರಗೆ ತಂದಿರಿಸಿದರು. ಪೊಲೀಸರು ಅವುಗಳನ್ನು ಬಲವಂತವಾಗಿ ತೆರವುಗೊಳಿಸಿದರು.

ಮೊದಲ ಘಟನೆಯಲ್ಲಿ ಮೈತೈ ಮತ್ತು ಪಾಂಗಲ್ ಮುಸ್ಲಿಮರು ವಾಸಿಸುವ ಪ್ರದೇಶದಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅಲ್ಲಿ ಕಲ್ಲು ತೂರಾಟ ಮತ್ತು ಗುಂಡಿನ ಚಕಮಕಿ ನಡೆದಿದ್ದು, ಜನಸಮೂಹದಲ್ಲಿದ್ದ ಹಲವರು ಗಾಯಗೊಂಡರು. ಗಂಭೀರವಾಗಿ ಗಾಯಗೊಂಡ 24 ವರ್ಷದ ಯುವಕ ಮೃತಪಟ್ಟಿದ್ದಾನೆ.

ಇಂಫಾಲ ಪೂರ್ವ ಜಿಲ್ಲೆಯ ಖಾಮೆನ್‌ಲೋಕ್‌ನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಸಮೀಪದ ಬೆಟ್ಟಗಳಿಗೆ ಸೌದೆ ಸಂಗ್ರಹಿಸಲು ತೆರಳಿದ್ದ ಮೂವರು ಗ್ರಾಮಸ್ಥರನ್ನು ಶಂಕಿತ ಬುಡಕಟ್ಟು ಬಂಡುಕೋರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ಹತ್ಯೆಗಳು ಗ್ರಾಮಸ್ಥರಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಸಂತ್ರಸ್ತರ ಮೃತದೇಹಗಳನ್ನು ಹೊತ್ತು ಇಂಫಾಲದಲ್ಲಿರುವ ಮುಖ್ಯಮಂತ್ರಿಯವರ ನಿವಾಸದತ್ತ ಮೆರವಣಿಗೆ ನಡೆಸಿದರು. ಬಳಿಕ ನಿವಾಸದ ಮುಂದೆ ಮೃತದೇಹಗಳನ್ನು ಇರಿಸಿದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅಶ್ರುವಾಯು ಸಿಡಿಸಿ, ಲಾಠಿ ಪ್ರಹಾರ ನಡೆಸಿದರು. ಬಳಿಕ ಮೃತದೇಹಗಳನ್ನು ತೆರವುಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor