Photo: x.com/DigiPrimeNews

ಹೊಸದಿಲ್ಲಿ : ಹೆಚ್ಚುತ್ತಿರುವ ಪರಿಶೀಲನೆಯ ನಡುವೆ, ಪ್ರಧಾನಿ ಮೋದಿಯವರ ವಿಡಿಯೋವನ್ನು ಫೇಸ್ಬುಕ್ ತೆಗೆದುಹಾಕಿದ್ದಕ್ಕಾಗಿ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯಗಳು(CSAM), ಡೀಪ್ ಫೇಕ್ ಕಂಟೆಂಟ್ ಹಾಗೂ ತನ್ನ ವೇದಿಕೆಗಳನ್ನು ನಿರ್ವಹಿಸುವಲ್ಲಿನ ದೋಷಗಳಿಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ದೈತ್ಯ ಮೆಟಾದ ಸಿಇಒ ಮಾರ್ಕ್ ಝುಕರ್‌ಬರ್ಗ್ ಸರ್ಕಾರಕ್ಕೆ ಕ್ಷಮೆಯಾಚಿಸಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿರುವುದಾಗಿ Times of India ವರದಿ ಮಾಡಿದೆ.

ವಿದ್ಯಾರ್ಥಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದ ವಿಡಿಯೋವನ್ನು ತೆಗೆದುಹಾಕಲು ತಾಂತ್ರಿಕ ದೋಷಗಳೇ ಕಾರಣ ಎಂದು ಮೆಟಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯಲ್ ಕಪ್ಲಾನ್, ಪ್ರಧಾನಿ ಮೋದಿಯವರ ಪೋಸ್ಟ್ ಅನ್ನು ನಿರ್ಬಂಧಿಸಿದ ತಪ್ಪಿಗಾಗಿ ನಾನು ಮೆಟಾ ಪರವಾಗಿ ಸಚಿವರಿಗೆ (ಅಶ್ವಿನಿ ವೈಷ್ಣವ್) ಕ್ಷಮೆಯಾಚಿಸಿದ್ದೇನೆ ಎಂದು ತಿಳಿಸಿದ್ದಾರೆ.  

“ಝುಕರ್‌ಬರ್ಗ್ ಅವರ ಕ್ಷಮೆಯಾಚನೆಯನ್ನು ಕಪ್ಲಾನ್ ಮೂಲಕ ಸಂವಹನ ಮಾಡಲಾಗಿದೆ” ಎಂದು ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಕೆಲವು ನಿರ್ದಿಷ್ಟ ರೀತಿಯ ಕಂಟೆಂಟ್ ಗಳನ್ನು ಬೂಸ್ಟ್ ಮಾಡಲು ತಾನು ಹಣ ಪಡೆದಿರುವುದನ್ನೂ ಈ ಟೆಕ್ ಕಂಪನಿ ದೃಢಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಮೋದಿಯವರ ವಿಡಿಯೋ ತೆಗೆದುಹಾಕಿದ್ದಕ್ಕಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ತನ್ನ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾದ ಕಂಟೆಂಟ್ ಮೇಲಿನ ಯಾವುದೇ ಹೊಣೆಗಾರಿಕೆಯಿಂದ ಮೆಟಾಗೆ ರಕ್ಷಣೆ ನೀಡುವ ಸೇಫ್ ಹಾರ್ಬರ್ ನಿಯಮವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿಯು ಬುಧವಾರದಂದು ಝುಕರ್‌ಬರ್ಗ್ ಗೆ ಮೂರು ದಿನಗಳ ಗಡುವು ನೀಡಿದ ಕೆಲವೇ ಗಂಟೆಗಳಲ್ಲಿ ಈ ಕ್ಷಮೆಯಾಚನೆ ಹೊರಬಿದ್ದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor