×
Ad

ತುರ್ತು ಪರಿಸ್ಥಿತಿ ಹೇರಲು ಮೋದಿ ಪ್ರಯತ್ನಿಸಬಹುದು: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಮೋದಿ ಒಂದು ವರ್ಷದ ಒಳಗೆ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದ ವಿಪಕ್ಷ ನಾಯಕ

Update: 2026-06-04 12:20 IST
Photo | PTI

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಒತ್ತಡವನ್ನು ನಿಗ್ರಹಿಸಲು ‘ತುರ್ತು ಪರಿಸ್ಥಿತಿಯಂತಹ’ ಕ್ರಮವನ್ನು ಹೇರಲು ಪ್ರಯತ್ನಿಸಬಹುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ. ಅಲ್ಲದೆ, ಒಂದು ವರ್ಷದೊಳಗೆ ಮೋದಿ ಪ್ರಧಾನಿ ಹುದ್ದೆಯಲ್ಲಿ ಇರುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಆದಿವಾಸಿ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಅಂತರರಾಷ್ಟ್ರೀಯ ಆರ್ಥಿಕ ಅಸ್ಥಿರತೆಯ ನಡುವೆಯೂ ಬಿಜೆಪಿ ಸರಕಾರ ದೇಶದ ಆರ್ಥಿಕ ರಕ್ಷಣಾ ವ್ಯವಸ್ಥೆಗಳನ್ನು ದುರ್ಬಲಗೊಳಿಸುತ್ತಿದ್ದು, ಇದರ ಪರಿಣಾಮವಾಗಿ ‘ಯಾರಿಂದಲೂ ತಡೆಯಲಾಗದ ಭೀಕರ ಆರ್ಥಿಕ ಸುನಾಮಿ’ ದೇಶಕ್ಕೆ ಅಪ್ಪಳಿಸಲಿದೆ ಎಂದು ಎಚ್ಚರಿಸಿದರು.

ತಾವು ಹಿಂದೆ ನಿಯಂತ್ರಿಸುತ್ತಿದ್ದ ವ್ಯವಸ್ಥೆಯೇ ಈಗ ಪ್ರಧಾನಿ ಮೋದಿ ಅವರ ಕೈತಪ್ಪುತ್ತಿದೆ ಎಂದು ಆರೋಪಿಸಿದ ರಾಹುಲ್, ‘ಪ್ರಧಾನಿ ಮತ್ತು ಅವರ ಸಚಿವ ಸಂಪುಟದ ಸಹೋದ್ಯೋಗಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ವ್ಯವಸ್ಥೆಯೇ ಈಗ ಕುಸಿಯುತ್ತಿದೆ. ಸಾರ್ವಜನಿಕ ಒತ್ತಡ ಭಾರೀ ಪ್ರಮಾಣದಲ್ಲಿ ಹೆಚ್ಚಾಗಲಿದೆ. ಅದು ಅವರಿಗೆ ಅಪಾಯಕಾರಿಯಾಗಲಿದೆ’ ಎಂದು ಹೇಳಿದರು.

‘ದೇಶದೊಳಗೆ, ವ್ಯವಸ್ಥೆಯೊಳಗೇ ಸಾಂಸ್ಥಿಕ ದಂಗೆ ನಡೆಯುತ್ತಿದೆ. ಚುನಾವಣಾ ಆಯೋಗ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ ಎಂದು ನೀವು ಭಾವಿಸಬಹುದು. ಆದರೆ ಮುಖ್ಯ ಚುನಾವಣಾ ಆಯುಕ್ತರ ಸಂದೇಶಗಳು ನನ್ನವರೆಗೆ ತಲುಪುತ್ತಿವೆ. ಗುಪ್ತಚರ ವ್ಯವಸ್ಥೆಯ ಮುಖ್ಯಸ್ಥರು, ನ್ಯಾಯಾಂಗದ ಹಿರಿಯ ಸದಸ್ಯರು ಸೇರಿದಂತೆ ಹಲವರು ಅಸಮಾಧಾನಗೊಂಡಿದ್ದಾರೆ. ಅವರು ನಮಗೆ ಮಾಹಿತಿ ನೀಡುತ್ತಿದ್ದಾರೆ’ ಎಂದು ರಾಹುಲ್ ಹೇಳಿದರು.

‘ಚುನಾವಣೆಗಳಲ್ಲಿ ಅಕ್ರಮ ನಡೆದಿದೆ. ಆರ್ಥಿಕ ಒತ್ತಡ, ಬಡತನ ಮತ್ತು ಸಂಕಷ್ಟಗಳು ಜನರಲ್ಲಿ ಆಕ್ರೋಶ ಮೂಡಿಸಲಿವೆ. ಇಡೀ ವ್ಯವಸ್ಥೆಯು ಒಳಗಿನಿಂದಲೇ ನಡುಗುತ್ತಿದೆ. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಅವರ ಪುತ್ರರು ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಹಲವರ ಕುರಿತ ಮಾಹಿತಿ ವೇಗವಾಗಿ ನನ್ನವರೆಗೆ ಬರುತ್ತಿದೆ’ ಎಂದು ಅವರು ಆರೋಪಿಸಿದರು.

‘ಸಾರ್ವಜನಿಕ ಒತ್ತಡವನ್ನು ನಿಗ್ರಹಿಸಲು ಅವರು ತುರ್ತು ಪರಿಸ್ಥಿತಿಯಂತಹ ಕ್ರಮವನ್ನು ಹೇರಲು ಪ್ರಯತ್ನಿಸಬಹುದು. ಅದು ಸಾಧ್ಯ. ಈಗ ಪರಿಸ್ಥಿತಿ ಅವರ ನಿಯಂತ್ರಣದಿಂದ ಜಾರುತ್ತಿದೆ. ತಾವು ನಿಯಂತ್ರಿಸುತ್ತಿದ್ದ ವ್ಯವಸ್ಥೆಯೇ ಕುಸಿಯುತ್ತಿದೆ ಎಂಬುದು ಅವರಿಗೆ ಗೊತ್ತಿದೆ. ಅದೇ ವ್ಯವಸ್ಥೆಯು ಈಗ ನನಗೆ ಮಾಹಿತಿ ನೀಡುತ್ತಿದೆ. ಇದು ಈಗ ನಡೆಯುತ್ತಿರುವ ಪ್ರಕ್ರಿಯೆ’ ಎಂದು ಹೇಳಿದರು.

‘ನನ್ನ ಅಂದಾಜಿನ ಪ್ರಕಾರ, ಒಂದು ವರ್ಷದೊಳಗೆ ನರೇಂದ್ರ ಮೋದಿ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆʼ ಎಂದು ಹೇಳಿದರು.  

ಭಾರತವು ತನ್ನ ಇತಿಹಾಸದಲ್ಲೇ ಕಂಡಿರದಂತಹ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದರು. ‘ಈ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ವನವಾಸಿ’ ಪದಕ್ಕೆ ಆಕ್ಷೇಪ

ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳು ‘ಆದಿವಾಸಿ ವಿರೋಧಿ ಮನಸ್ಥಿತಿ’ ಹೊಂದಿದ್ದು, ಬುಡಕಟ್ಟು ಸಮುದಾಯದ ‘ಜಲ, ಜಂಗಲ್ ಔರ್ ಜಮೀನ್’ (ನೀರು, ಅರಣ್ಯ ಮತ್ತು ಭೂಮಿ) ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸುತ್ತಿವೆ ಎಂದು ರಾಹುಲ್ ಆರೋಪಿಸಿದರು.

×
Ad

‘RSS ಮತ್ತು ಬಿಜೆಪಿ “ವನವಾಸಿ” ಎಂಬ ಪದವನ್ನು ಬಳಸುತ್ತವೆ. ಆದರೆ “ಆದಿವಾಸಿ” ಎಂಬುದು ಈ ಭೂಮಿಯ ಮೂಲ ನಿವಾಸಿಗಳು ಎಂಬ ಅರ್ಥ ನೀಡುತ್ತದೆ. “ವನವಾಸಿ” ಎಂದರೆ ಕಾಡಿನಲ್ಲಿ ವಾಸಿಸುವ ಜನರು ಎಂಬ ಅರ್ಥ ಬರುತ್ತದೆ’ ಎಂದು ಹೇಳಿದರು.

‘ವನವಾಸಿ ಎಂಬ ಪದವು ಆದಿವಾಸಿಗಳಿಗೆ ಯಾವುದೇ ಸಂಸ್ಕೃತಿ, ಇತಿಹಾಸ ಅಥವಾ ಭಾಷೆ ಇಲ್ಲ ಎಂಬ ಸಂದೇಶ ನೀಡುತ್ತದೆ. ಸಾವಿರಾರು ವರ್ಷಗಳ ಜ್ಞಾನ, ಇತಿಹಾಸ ಮತ್ತು ಸಂಸ್ಕೃತಿಯನ್ನು ಹೊಂದಿರುವ ಆದಿವಾಸಿ ಸಮುದಾಯ ದೇಶದ ಅಮೂಲ್ಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಪತ್ತಾಗಿದೆ. “ವನವಾಸಿ” ಎಂಬ ಪದವು ಆ ಬೇರುಗಳನ್ನು ಕತ್ತರಿಸುವ ಮತ್ತು ರಾಷ್ಟ್ರದ ಇತಿಹಾಸವನ್ನು ಅಳಿಸುವ ಪ್ರಯತ್ನವಾಗಿದೆ’ ಎಂದು ರಾಹುಲ್ ಗಾಂಧಿ ಹೇಳಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News