ಅಕ್ರಮ ಹಣ ವರ್ಗಾವಣೆ ಪ್ರಕರಣ | ಸಾಧನಾ ಗ್ರೂಪ್ ಅಧ್ಯಕ್ಷರನ್ನು ಬಂಧಿಸಿದ ED
ರಾಕೇಶ್ ಕುಮಾರ್ ಗುಪ್ತಾ | Photo Credit : PTI
ಹೊಸದಿಲ್ಲಿ, ಅ. 10: ದಿವಾಳಿತನ ಮತ್ತು ದಿವಾಳಿ ಸಂಹಿತೆ (ಐಬಿಸಿ) ಪ್ರಕ್ರಿಯೆಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ದಿಲ್ಲಿ ಮೂಲದ ಮಾಧ್ಯಮ ಮತ್ತು ಪ್ರಸಾರ ಕಂಪೆನಿಯ ಅಧ್ಯಕ್ಷರನ್ನು ಬಂಧಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಸಾಧನಾ ಗ್ರೂಪ್ ನ ಅಧ್ಯಕ್ಷ ರಾಕೇಶ್ ಕುಮಾರ್ ಗುಪ್ತಾ (63) ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ನಿಬಂಧನೆಗಳಡಿ ಶುಕ್ರವಾರ ರಾತ್ರಿ ದಿಲ್ಲಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಗುಪ್ತಾ ಅವರನ್ನು ಶನಿವಾರ ನಸುಕಿನ 2 ಗಂಟೆಯ ಸುಮಾರಿಗೆ ಘಾಜಿಯಾಬಾದ್‌ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರ ನಿವಾಸದ ಕಚೇರಿಯಲ್ಲಿ ಹಾಜರುಪಡಿಸಲಾಗಿದ್ದು, ಅವರನ್ನು ಐದು ದಿನಗಳ ಅವಧಿಗೆ ED ವಶಕ್ಕೆ ನೀಡಲಾಗಿದೆ.
ದಿಲ್ಲಿ ಪೊಲೀಸರ ಆರ್ಥಿಕ ಅಪರಾಧಗಳ ಘಟಕವು ಸೆಪ್ಟೆಂಬರ್‌ನಲ್ಲಿ ದಾಖಲಿಸಿಕೊಂಡ ಎಫ್‌ಐಆರ್ ಆಧಾರದಲ್ಲಿ ED, ಗುಪ್ತಾ ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಆರಂಭಿಸಿದೆ. 110.10 ಕೋಟಿ ರೂ.ಗಳ ಆದಾಯ ತೆರಿಗೆ ಬಾಕಿಯನ್ನು 20 ಲಕ್ಷ ರೂ.ಗಳಿಗೆ ಇತ್ಯರ್ಥಪಡಿಸಿಕೊಳ್ಳಲು ಸಾಧನಾ ಮೀಡಿಯಾ ಪ್ರೈವೇಟ್ ಲಿಮಿಟೆಡ್ (ಎಸ್‌ಎಂಪಿಎಲ್) ಕಂಪೆನಿಯ ದಿವಾಳಿತನವನ್ನು ಗುಪ್ತಾ ಪೂರ್ವಯೋಜಿತವಾಗಿ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಎಸ್‌ಎಂಪಿಎಲ್/ಆರ್ಯನ್ ಟಿವಿ ಮಾರಾಟದಿಂದ ಕ್ರಿಪ್ಟೋಕರೆನ್ಸಿ/ಹವಾಲಾ ಮೂಲಕ 2 ಕೋಟಿ ರೂ.ಗೂ ಅಧಿಕ ನಗದು ಸ್ವೀಕರಿಸಿರುವುದು ಗುಪ್ತಾ ವಿರುದ್ಧದ ಇತರ ಆರೋಪಗಳಲ್ಲಿ ಸೇರಿದೆ. ಅಲ್ಲದೆ, ಎಸ್‌ಎಂಪಿಎಲ್‌ಗೆ ಸಂಬಂಧಿಸಿದ ಸಾಲಗಾರರಿಗೆ 4.48 ಕೋಟಿ ರೂ. ಪಾವತಿಸುವಂತೆ ಮಾಡಿದ್ದು, ಈ ಪೈಕಿ 2.99 ಕೋಟಿ ರೂ.ಗಳನ್ನು ತಮ್ಮದೇ ಒಡೆತನದ ಶಾರ್ಪ್‌ಲೈನ್ ಬ್ರಾಡ್‌ಕಾಸ್ಟ್ ಕಂಪೆನಿಗೆ ಪಾವತಿಸಿಕೊಂಡಿದ್ದರು ಎಂದು ಆರೋಪಿಸಲಾಗಿದೆ.
ಸೆಬಿ 2025ರ ಮೇನಲ್ಲಿ ಹೊರಡಿಸಿದ ತನ್ನ ಆದೇಶದಲ್ಲಿ ಸಾಧನಾ ಬ್ರಾಡ್‌ಕಾಸ್ಟ್ ಷೇರುಗಳ ಅಕ್ರಮ ವಹಿವಾಟುಗಳ ಹಿಂದಿನ ಪ್ರಮುಖ ಸೂತ್ರಧಾರ ಎಂದು ಗುಪ್ತಾ ಅವರನ್ನು ಬಣ್ಣಿಸಿತ್ತು ಎಂದು ED ನ್ಯಾಯಾಲಯಕ್ಕೆ ತಿಳಿಸಿದೆ. ಈ ಪ್ರಕರಣದಲ್ಲಿ ಒಟ್ಟು ಅಪರಾಧದ ಮೊತ್ತ 168 ಕೋಟಿ ರೂ.ಗಳಷ್ಟಿದೆ ಎಂದು ಅದು ಹೇಳಿದೆ.