ಪ್ರಧಾನಿ ಮೋದಿಯನ್ನು ಭೇಟಿಯಾಗಿ ಪುಳಕಗೊಂಡ ಸಂಸದ ಯೂಸುಫ್ ಪಠಾಣ್!

► "ಎಷ್ಟಕ್ಕೆ ಮಾರಾಟವಾದಿರಿ?" ಎಂದು ಕೇಳಿದ ಜನರು ►“ಕ್ರಿಕೆಟ್‌ ನಲ್ಲಿ ಗಳಿಸಿದ್ದ ಗೌರವವನ್ನು ರಾಜಕೀಯದಲ್ಲಿ ಕಳೆದುಕೊಂಡಿದ್ದೀರಿ” ಎಂದು ಕಮೆಂಟ್‌

Update: 2026-08-07 22:25 IST

 ನರೇಂದ್ರ ಮೋದಿ , ಯೂಸುಫ್ ಪಠಾಣ್ | Photo Credit : Yusuf Pathan

ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಿಂದ ಆಯ್ಕೆಯಾಗಿ ಬಳಿಕ ನ್ಯಾಷನಲಿಸ್ಟ್‌ ಸಿಟಿಝನ್ಸ್‌ ಪಾರ್ಟಿ ಆಫ್ ಇಂಡಿಯಾ(NCPI)ಗೆ ಸೇರ್ಪಡೆಯಾದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪೋಸ್ಟ್ ಗೆ ಸಾವಿರಾರು ಕಮೆಂಟ್ ಗಳು ಬಂದಿದ್ದು, ಹೆಚ್ಚಿನ ಜನರು ಅವರ ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

Full View

ಯೂಸುಫ್ ಪಠಾಣ್ ಅವರು ಫೇಸ್ಬುಕ್ ನಲ್ಲಿ ಹಂಚಿಕೊಂಡ ಪೋಸ್ಟ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಹ ಸಂಸದರಾದ ಖಲೀಲುರ್ ರೆಹಮಾನ್ ಹಾಗೂ ಅಬು ತಾಹೆರ್ ಖಾನ್ ಅವರೊಂದಿಗೆ ಭೇಟಿ ಮಾಡಿ, ತಮ್ಮ ಕ್ಷೇತ್ರಗಳ ಅಭಿವೃದ್ಧಿ, ಸಾರ್ವಜನಿಕರ ಸಮಸ್ಯೆಗಳು ಮತ್ತು ಬೇಡಿಕೆಗಳ ಕುರಿತು ಚರ್ಚಿಸಿದ್ದಾಗಿ ತಿಳಿಸಿದ್ದಾರೆ. ಕ್ಷೇತ್ರದ ಜನರ ಹಿತಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆಂದು ಅವರು ಹೇಳಿದ್ದಾರೆ. ಅಲ್ಲದೆ, ತಮ್ಮ ತಂದೆಯನ್ನು ಭೇಟಿಯಾದ ಹಿಂದಿನ ಸಂದರ್ಭವನ್ನು ಪ್ರಧಾನಿ ನೆನಪಿಸಿಕೊಂಡಿದ್ದನ್ನು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ಈ ಪೋಸ್ಟ್ ಪ್ರಕಟವಾದ ತಕ್ಷಣ ಕಮೆಂಟ್ ಗಳ ಸುರಿಮಳೆಯೇ ಬಂದಿದೆ.

ಹಲವಾರು ಜನರು, ‘ನಿಮಗೆ ನಿಜವಾಗಿಯೂ ಜನಬೆಂಬಲವಿದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ತೋರಿಸಿ’, ‘2029ರಲ್ಲಿ ಮತ್ತೆ ಗೆದ್ದು ಬನ್ನಿ’, ‘ಇದು ನಿಮ್ಮ ಮೊದಲ ಮತ್ತು ಕೊನೆಯ ಸಂಸದೀಯ ಅವಧಿಯಾಗಲಿದೆ’, ‘ನಿಮ್ಮ ಕ್ಷೇತ್ರಕ್ಕೆ ಒಮ್ಮೆ ಹೋಗಿ ಜನರ ಅಭಿಪ್ರಾಯ ಕೇಳಿ’, ‘ನೋಟಾಕ್ಕಿಂತಲೂ ಕಡಿಮೆ ಮತ ಸಿಗುತ್ತದೆ’, ‘ನೀವು ಮತ್ತೆ ಸಂಸದರಾಗಲು ಸಾಧ್ಯವಿಲ್ಲ’ ಎಂದು ಟೀಕಿಸಿದ್ದಾರೆ.

ಅನೇಕರು ಅವರ ಪ್ರಧಾನಿ ಭೇಟಿಯನ್ನು ಪ್ರಶ್ನಿಸಿ, ‘ಈ ಒಪ್ಪಂದಕ್ಕೆ ಎಷ್ಟು ಹಣ ಪಡೆದಿದ್ದೀರಿ?’, ‘ನಿಮ್ಮ ಬೆಲೆ ಎಷ್ಟು?’, ‘ಎಷ್ಟು ಕೋಟಿ ರೂ.ಗೆ ಮಾರಾಟವಾಗಿದ್ದೀರಿ?’, ‘ಕೊನೆಯ ಪಾವತಿ ಸಿಕ್ಕಿತೇ?’, ‘ಐಪಿಎಲ್ ಗಿಂತ ದೊಡ್ಡ ಬಿಡ್ ಸಿಕ್ಕಿದೆಯೇ?’, ‘ಆತ್ಮಸಾಕ್ಷಿಯನ್ನು ಮಾರಿದ್ದೀರಿ’, ‘ಹಣಕ್ಕಾಗಿ ಎಲ್ಲವನ್ನೂ ಮಾರಿದ್ದೀರಿ’ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ಹಲವರು ಅವರನ್ನು ‘ಮೀರ್ ಜಾಫರ್’, ‘ಮೀರ್ ಜಾಫರ್ 2.0’, ‘ಗದ್ದಾರ್’, ‘ದೇಶದ್ರೋಹಿ’, ‘ಪಲ್ಟೂರಾಮ್’, ‘ಮಾರಿಕೊಂಡವರು’, ‘ಹೇಡಿ’, ‘ಬೆನ್ನುಮೂಳೆಯಿಲ್ಲದ ನಾಯಕ’, ‘ಡಬಲ್ ಗೇಮ್ ಆಡಿದವರು’, ‘ನಂಬಿಕೆಗೆ ದ್ರೋಹ ಮಾಡಿದವರು’ ಎಂದು ಆರೋಪಿಸಿ ಕಮೆಂಟ್‌ ಮಾಡಿದ್ದಾರೆ.

ಕೆಲವರು, ‘ಮುಸ್ಲಿಮರು, ದಲಿತರು, ಆದಿವಾಸಿಗಳು ಹಾಗೂ ಕ್ರೈಸ್ತರ ಮೇಲಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾದ ಸಂದರ್ಭದಲ್ಲಿ ಅಧಿಕಾರದ ಪರ ನಿಂತಿದ್ದೀರಿ’, ‘ನಾಯಕತ್ವಕ್ಕೆ ಧೈರ್ಯ ಬೇಕು, ರಾಜಿ ಅಲ್ಲ’, ‘ನಿಮ್ಮ ಮೇಲಿದ್ದ ಗೌರವ ಕಳೆದುಕೊಂಡಿದ್ದೇವೆ’, ‘ಇನ್ನು ನಿಮ್ಮನ್ನು ಫಾಲೋ ಮಾಡುವುದಿಲ್ಲ’, ‘ನಿಮ್ಮ ರಾಜಕೀಯ ಅಧ್ಯಾಯ ಮುಂದಿನ ಚುನಾವಣೆಯೊಂದಿಗೆ ಮುಗಿಯಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲವು ಕಮೆಂಟ್ ಗಳಲ್ಲಿ, ‘ED ಅಥವಾ ಇತರ ತನಿಖಾ ಸಂಸ್ಥೆಗಳ ಒತ್ತಡ ಇದೆಯೇ?’, ‘ಈಗ ನಿಮ್ಮ ವಿರುದ್ಧದ ಪ್ರಕರಣಗಳು ಮುಗಿಯುತ್ತವೆ, ಮನೆಯೂ ಸುರಕ್ಷಿತವಾಗಿರುತ್ತದೆ’, ‘ಬಿಜೆಪಿಗೆ ಸೇರುವ ಮುನ್ನುಡಿಯೇ ಇದು?’, ‘ಗುಪ್ತ ಒಪ್ಪಂದ ಮಾಡಿಕೊಂಡಿದ್ದೀರಾ?’, ‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೀರಾ?’ ಎಂಬ ಪ್ರಶ್ನೆಗಳನ್ನೂ ಕೇಳಿದ್ದಾರೆ.

ಕೆಲವರು 2002ರ ಗುಜರಾತ್ ಗಲಭೆ, ಮುಸ್ಲಿಂ ಸಮುದಾಯದ ಪ್ರಶ್ನೆಗಳು, ಕ್ಷೇತ್ರ ಪುನರ್ವಿಂಗಡಣೆ ಮಸೂದೆ, ನೀಟ್ ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಕುರಿತು ಯೂಸುಫ್ ಪಠಾಣ್ ಮೌನವಾಗಿದ್ದರೆಂದು ಆರೋಪಿಸಿ, ಈಗ ಪ್ರಧಾನಿ ಭೇಟಿ ಮಾಡಿರುವುದನ್ನು ಪ್ರಶ್ನಿಸಿದ್ದಾರೆ.

ಇನ್ನೂ ಕೆಲವರು, 'ನಿಮ್ಮ ಸಹೋದರ ಇರ್ಫಾನ್ ಪಠಾಣ್ಗಿಂತ ನೀವು ಭಿನ್ನವಾಗಿ ನಡೆದುಕೊಂಡಿದ್ದೀರಿ', 'ಕ್ರಿಕೆಟ್ನಲ್ಲಿ ಗಳಿಸಿದ ಗೌರವವನ್ನು ರಾಜಕೀಯದಲ್ಲಿ ಕಳೆದುಕೊಂಡಿದ್ದೀರಿ' ಎಂದೂ ಟೀಕಿಸಿದ್ದಾರೆ. ಮತ್ತೆ ಕೆಲವರು, ‘ಧೋನಿ ನಿಮ್ಮನ್ನು ಆಗಲೇ ಅರ್ಥ ಮಾಡಿಕೊಂಡಿದ್ದರು’, ‘ಮ್ಯಾಚ್ ಫಿಕ್ಸಿಂಗ್ ಗಿಂತ ದೊಡ್ಡ ರಾಜಕೀಯ ಫಿಕ್ಸಿಂಗ್ ಮಾಡಿದ್ದೀರಿ’ ಎಂದು ಟೀಕಿಸಿದ್ದಾರೆ.

ಪ್ರತಿಕ್ರಿಯೆ ನೀಡಿದ ಕೆಲವು ಜನರು ಯೂಸುಫ್ ಪಠಾಣ್ ಅವರನ್ನು ಬೆಂಬಲಿಸಿ, ‘ಜನಪ್ರತಿನಿಧಿಯಾಗಿ ಪ್ರಧಾನಿಯನ್ನು ಭೇಟಿ ಮಾಡುವುದರಲ್ಲಿ ತಪ್ಪಿಲ್ಲ’, ‘ಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರದಲ್ಲಿರುವವರೊಂದಿಗೆ ಮಾತನಾಡುವುದು ಕರ್ತವ್ಯ’, ‘ಪಕ್ಷಕ್ಕಿಂತ ಜನರ ಹಿತ ಮುಖ್ಯ’, ‘ಒಳ್ಳೆಯ ಹೆಜ್ಜೆ’, ‘ನಿಜವಾದ ಆಟಗಾರ ಹೀಗೆ ನಡೆದುಕೊಳ್ಳುತ್ತಾನೆ’, ‘ಅಭಿನಂದನೆಗಳು’, ‘ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅಭಿವೃದ್ಧಿಗಾಗಿ ಸಹಕಾರ ಪಡೆಯಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವರು, ‘ಕೆಲಸವಾಗಬೇಕು, ಪಕ್ಷ ಯಾವುದು ಎಂಬುದು ಮುಖ್ಯವಲ್ಲ’, ‘ಕ್ಷೇತ್ರದ ಜನರ ಸಮಸ್ಯೆಗಳನ್ನು ಪ್ರಧಾನಿಯ ಗಮನಕ್ಕೆ ತಂದಿರುವುದು ಸರಿಯಾದ ಕ್ರಮ’, ‘ರಾಜಕೀಯಕ್ಕಿಂತ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ’ ಎಂದಿದ್ದಾರೆ.

ಯೂಸುಫ್ ಪಠಾಣ್ ಅವರ ಪ್ರಧಾನಿ ಭೇಟಿಯ ಪೋಸ್ಟ್ ಗೆ ಬಂದಿರುವ ನೂರಾರು ಕಮೆಂಟ್ ಗಳಲ್ಲಿ ಮೀಮ್ಸ್, ವ್ಯಂಗ್ಯಚಿತ್ರಗಳು, ಎಮೋಜಿಗಳು ಹಾಗೂ ವೈಯಕ್ತಿಕ ಟೀಕೆಗಳು ಹೆಚ್ಚಾಗಿ ಕಂಡುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News