ಸಂಜೀವ್ ಭಟ್ ಸೆರೆವಾಸಕ್ಕೆ 8 ವರ್ಷ | ʼನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ’: ಮಕ್ಕಳಿಂದ ಭಾವನಾತ್ಮಕ ಪೋಸ್ಟ್
"ಜನರು ಸರಕಾರವನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ಪ್ರಜಾಪ್ರಭುತ್ವವೂ ದುರ್ಬಲವಾಗುತ್ತದೆ"
ಮಾಜಿ IPS ಅಧಿಕಾರಿ ಸಂಜೀವ್ ಭಟ್ | Photo Credit : Facebook / Sanjiv Bhatt
ಹೊಸದಿಲ್ಲಿ: ಮಾಜಿ IPS ಅಧಿಕಾರಿ ಸಂಜೀವ್ ಭಟ್ ಅವರ ಸೆರೆವಾಸಕ್ಕೆ ಸೆ.5ರಂದು ಎಂಟು ವರ್ಷ ಪೂರ್ಣಗೊಂಡಿದೆ. ಈ ಸಂದರ್ಭದಲ್ಲಿ ಅವರ ಮಕ್ಕಳಾದ ಆಕಾಶಿ ಭಟ್ ಮತ್ತು ಶಾಂತನು ಭಟ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.
ತಮ್ಮ ತಂದೆಯನ್ನು ಸುಳ್ಳು ಆರೋಪಗಳಡಿ ಜೈಲಿಗೆ ಕಳುಹಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ‘ಅವರನ್ನು ನಮ್ಮಿಂದ ದೂರ ಮಾಡುವ ಮೂಲಕ ನಮ್ಮ ಕುಟುಂಬವನ್ನು ಛಿದ್ರಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
ಸಂಜೀವ್ ಭಟ್ ಅವರು ಸರಕಾರವನ್ನು, ಆಡಳಿತವರ್ಗವನ್ನು ಪ್ರಶ್ನಿಸುವ ಮತ್ತು ಸತ್ಯದ ಪರವಾಗಿ ಮಾತನಾಡುವ ನಿಲುವು ಹೊಂದಿದ್ದರು. ತಮ್ಮ ಸುರಕ್ಷತೆ, ಉದ್ಯೋಗ ಮತ್ತು ಸ್ವಾತಂತ್ರ್ಯಕ್ಕಿಂತ ಸತ್ಯ ಮತ್ತು ಆತ್ಮಸಾಕ್ಷಿಗೆ ಅವರು ಹೆಚ್ಚಿನ ಬೆಲೆ ನೀಡಿದ್ದರು ಎಂದು ಮಕ್ಕಳು ತಿಳಿಸಿದ್ದಾರೆ.
ಅಧಿಕಾರದಲ್ಲಿರುವವರು ತಮ್ಮ ತಪ್ಪುಗಳಿಗೆ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸುತ್ತಿದ್ದರು. ದ್ವೇಷ ಮತ್ತು ಹಿಂಸೆಯಿಂದ ತೊಂದರೆಗೊಳಗಾದವರ ಪರವಾಗಿ ಅವರು ಮಾತನಾಡುತ್ತಿದ್ದರು’ ಎಂದು ಮಕ್ಕಳು ಹೇಳಿದ್ದಾರೆ.
ಈ ನಿಲುವಿಗಾಗಿ ಸಂಜೀವ್ ಭಟ್ ಅವರು ತಮ್ಮ ವೃತ್ತಿ, ಖ್ಯಾತಿ, ಸ್ವಾತಂತ್ರ್ಯ ಮತ್ತು ಕುಟುಂಬದೊಂದಿಗೆ ಕಳೆಯಬೇಕಿದ್ದ ಹಲವು ವರ್ಷಗಳನ್ನು ಕಳೆದುಕೊಂಡಿದ್ದಾರೆ. ಆದರೂ ತಮ್ಮ ದೃಢ ನಂಬಿಕೆಯಿಂದ ಹಿಂದೆ ಸರಿದಿಲ್ಲ ಎಂದು ಮಕ್ಕಳು ತಿಳಿಸಿದ್ದಾರೆ.
‘ನಮ್ಮ ತಂದೆಯ ಪ್ರಕರಣದಲ್ಲಿ ನ್ಯಾಯ ಸಿಗುತ್ತಿಲ್ಲ. ಅಧಿಕಾರದ ವಿರುದ್ಧ ಪ್ರಶ್ನೆ ಎತ್ತುವವರನ್ನು ರಕ್ಷಿಸಬೇಕಾದ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು. ಜನರು ಸರಕಾರವನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ಪ್ರಜಾಪ್ರಭುತ್ವಕ್ಕೆ ಅಪಾಯವಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಅನ್ಯಾಯ ನಡೆಯುತ್ತಿದ್ದಾಗ ಮೌನವಾಗಿದ್ದರೆ ಅದರ ಪರಿಣಾಮ ಎಲ್ಲರೂ ಅನುಭವಿಸಬೇಕಾಗುತ್ತದೆ. ಆದ್ದರಿಂದ ಅಧಿಕಾರದಲ್ಲಿರುವವರನ್ನು ಪ್ರಶ್ನಿಸಲು ಜನರು ಹೆದರಬಾರದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಂಟು ವರ್ಷಗಳಲ್ಲಿ ತಮ್ಮ ತಂದೆ ಅನುಭವಿಸಿದ ಕಷ್ಟಗಳನ್ನು ಕಣ್ಣಾರೆ ನೋಡಿದ್ದೇವೆ. ಆದರೂ ಅವರ ಧೈರ್ಯ ಕುಗ್ಗಿಲ್ಲ. ಆತ್ಮಸಾಕ್ಷಿ ಮತ್ತು ಸತ್ಯದ ಮೇಲಿನ ನಂಬಿಕೆಯನ್ನು ಅವರು ಬಿಟ್ಟುಕೊಟ್ಟಿಲ್ಲ ಎಂದು ಮಕ್ಕಳು ಹೇಳಿದ್ದಾರೆ.
ಒಬ್ಬ ವ್ಯಕ್ತಿಯ ಧೈರ್ಯವೂ ಇತರರಿಗೆ ಪ್ರೇರಣೆಯಾಗಬಹುದು. ತಮ್ಮ ತಂದೆ ಅಪಾಯದ ಅರಿವಿದ್ದರೂ ಧೈರ್ಯ, ಸತ್ಯ ಮತ್ತು ಆತ್ಮಸಾಕ್ಷಿಯ ಪರವಾಗಿ ನಿಂತರು ಎಂದು ತಿಳಿಸಿದ್ದಾರೆ.
‘ನ್ಯಾಯ ಸಿಗಲು ವಿಳಂಬವಾಗುತ್ತಿರುವುದು ಕಳವಳಕಾರಿ. ನ್ಯಾಯಾಂಗ ಸ್ವತಂತ್ರವಾಗಿರಬೇಕು. ಕಾನೂನು ಎಲ್ಲರಿಗೂ ಸಮಾನವಾಗಿರಬೇಕು. ಜನರ ಹಕ್ಕು ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು’ ಎಂದು ಅವರು ಹೇಳಿದ್ದಾರೆ.
‘2,923 ದಿನಗಳು ಕಳೆದರೂ ನಮ್ಮ ತಂದೆಯ ಧೈರ್ಯ ಕುಗ್ಗಿಲ್ಲ. ನಾವು ಶರಣಾಗುವುದಿಲ್ಲ. ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ನಾವು ಗಾಯಗೊಂಡಿರಬಹುದು, ಜರ್ಜರಿತರಾಗಿರಬಹುದು; ಆದರೆ ಕುಗ್ಗಿಲ್ಲ, ಬಗ್ಗಿಲ್ಲ’ ಎಂದು ಆಕಾಶಿ ಭಟ್ ಮತ್ತು ಶಾಂತನು ಭಟ್ ಹೇಳಿದ್ದಾರೆ.