‘ನನ್ನ ಹೆಸರು ಉಮರ್ ಖಾಲಿದ್, ನಾನು ಭಯೋತ್ಪಾದಕನಲ್ಲ’
ಉಮರ್ ಖಾಲಿದ್ ತಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡ ಮಾತುಗಳನ್ನು ಪೋಸ್ಟ್ ಮಾಡಿದ ಕುನಾಲ್ ಕಾಮ್ರಾ
ಉಮರ್ ಖಾಲಿದ್, ಕುನಾಲ್ ಕಾಮ್ರಾ
ಹೊಸದಿಲ್ಲಿ: ಸ್ಟ್ಯಾಂಡ್ಅಪ್ ಕಮೇಡಿಯನ್ ಕುನಾಲ್ ಕಾಮ್ರಾ ಅವರು, ದಿಲ್ಲಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಉಮರ್ ಖಾಲಿದ್ ಅವರ ಬರಹವನ್ನು ಹಂಚಿಕೊಂಡಿದ್ದು, ಅವರ ದೀರ್ಘಕಾಲದ ಸೆರೆವಾಸ ಮತ್ತು ವಿಚಾರಣೆ ವಿಳಂಬದ ಬಗ್ಗೆ ಗಮನ ಸೆಳೆದಿದ್ದಾರೆ. ಮಾಧ್ಯಮಗಳಲ್ಲಿ ಖಾಲಿದ್ ಅವರ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದರೂ, ತಮ್ಮ ಪರವಾಗಿ ಮಾತನಾಡಲು ಅವರಿಗೆ ಅವಕಾಶ ಸಿಕ್ಕಿಲ್ಲ ಎಂದು ಕಾಮ್ರಾ ಹೇಳಿದ್ದಾರೆ.
ತಮ್ಮ ಸ್ನೇಹಿತ ಉಮರ್ ಖಾಲಿದ್ ಅವರು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಂಡ ಮಾತುಗಳ ಮೂಲಕ ಅವರ ಬಗ್ಗೆ ಜನರಿಗೆ ತಿಳಿಸಲು ಬಯಸಿರುವುದಾಗಿ ಕಾಮ್ರಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
‘ನನ್ನ ಹೆಸರು ಉಮರ್ ಖಾಲಿದ್, ನಾನು ಭಯೋತ್ಪಾದಕನಲ್ಲ’ :
‘ನನ್ನ ಹೆಸರು ಉಮರ್ ಖಾಲಿದ್, ನಾನು ಭಯೋತ್ಪಾದಕನಲ್ಲ’ ಎಂಬ ಮಾತನ್ನು ಹತ್ತು ವರ್ಷಗಳ ಹಿಂದೆ ಹೇಳಿದ್ದೆ. ಆದರೆ, ಈಗ ಹೆಚ್ಚು ಪ್ರಸ್ತುತವಾದ ಮಾತು ಏನೆಂದರೆ, ‘ನನ್ನ ಹೆಸರು ಉಮರ್ ಖಾಲಿದ್, ಅದಕ್ಕಾಗಿಯೇ ಅವರು ನನ್ನನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ’ ಎಂದು ಖಾಲಿದ್ ತಮ್ಮ ಬರಹದಲ್ಲಿ ಹೇಳಿದ್ದಾರೆ.
ಆಡಳಿತಾರೂಢ ವ್ಯವಸ್ಥೆಯ ವಕ್ತಾರರು ಟಿವಿ ಸುದ್ದಿ ವಾಹಿನಿಗಳಲ್ಲಿ ಕಾಣಿಸಿಕೊಂಡು ತಮ್ಮನ್ನು ‘ರಾಷ್ಟ್ರೀಯ ಭದ್ರತೆಗೆ ಬೆದರಿಕೆ’ ಎಂದು ಬಿಂಬಿಸುತ್ತಾರೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಕೂಡ ತಮ್ಮನ್ನು ‘ಬೌದ್ಧಿಕ ಭಯೋತ್ಪಾದಕ’ ಎಂದು ಕರೆದಿದ್ದರು. ‘ಬುದ್ಧಿಜೀವಿಗಳು ಭಯೋತ್ಪಾದಕರಾದಾಗ, ಅವರು ಅತ್ಯಂತ ಅಪಾಯಕಾರಿಯಾಗುತ್ತಾರೆ’ ಎಂದು ಅವರು ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದರು ಎಂದು ಖಾಲಿದ್ ಉಲ್ಲೇಖಿಸಿದ್ದಾರೆ.
2020ರ ಸೆಪ್ಟೆಂಬರ್ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಬಂಧನಕ್ಕೊಳಗಾದ ತಾವು ಅಂದಿನಿಂದ ಜೈಲಿನಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ವಿರುದ್ಧದ ಭಯೋತ್ಪಾದಕ ಕೃತ್ಯದ ಆರೋಪಕ್ಕೆ ಆಧಾರವೇನು ಎಂದು ಪ್ರಶ್ನಿಸಿರುವ ಖಾಲಿದ್, 2020ರ ಫೆಬ್ರುವರಿಯಲ್ಲಿ ಮಹಾರಾಷ್ಟ್ರದ ಒಂದು ಸಣ್ಣ ಪಟ್ಟಣದಲ್ಲಿ ಮಾಡಿದ ಭಾಷಣವೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಆ ಭಾಷಣದಲ್ಲಿ ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯಾಗ್ರಹದ ಮೌಲ್ಯಗಳನ್ನು ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ.
‘ನಾವು ಹಿಂಸೆಗೆ ಹಿಂಸೆಯಿಂದ ಪ್ರತಿಕ್ರಿಯಿಸುವುದಿಲ್ಲ. ದ್ವೇಷಕ್ಕೆ ದ್ವೇಷದಿಂದ ಪ್ರತಿಕ್ರಿಯಿಸುವುದಿಲ್ಲ. ಅವರು ದ್ವೇಷವನ್ನು ಹರಡಿದರೆ, ನಾವು ಪ್ರೀತಿಯನ್ನು ಹರಡುತ್ತೇವೆ. ಅವರು ನಮ್ಮನ್ನು ಲಾಠಿಗಳಿಂದ ಹೊಡೆದರೆ, ನಾವು ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುತ್ತೇವೆ. ಅವರು ಗುಂಡು ಹಾರಿಸಿದರೆ, ನಾವು ಸಂವಿಧಾನವನ್ನು ಕೈಯಲ್ಲಿ ಹಿಡಿದು ಕೈಗಳನ್ನು ಮೇಲಕ್ಕೆತ್ತುತ್ತೇವೆ. ಅವರು ನಮ್ಮನ್ನು ಜೈಲಿಗೆ ಹಾಕಿದರೆ, ನಾವು ಸಂತೋಷದಿಂದ “ಸಾರೆ ಜಹಾಂ ಸೆ ಅಚ್ಚಾ ಹಿಂದೂಸ್ತಾನ್ ಹಮಾರಾ” ಎಂದು ಹಾಡುತ್ತಾ ಜೈಲಿಗೆ ಹೋಗುತ್ತೇವೆ. ಆದರೆ, ನಮ್ಮ ದೇಶವನ್ನು ನಾಶಮಾಡಲು ನಾವು ನಿಮಗೆ ಬಿಡುವುದಿಲ್ಲ’ ಎಂದು ಭಾಷಣದಲ್ಲಿ ಹೇಳಿದ್ದಾಗಿ ಖಾಲಿದ್ ಉಲ್ಲೇಖಿಸಿದ್ದಾರೆ.
ಈ ಮಾತುಗಳಲ್ಲಿ ಭಯೋತ್ಪಾದಕನನ್ನು ಗುರುತಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕಪಿಲ್ ಮಿಶ್ರಾ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಆಕ್ಷೇಪ :
ಮಹಾರಾಷ್ಟ್ರದಲ್ಲಿ ತಾವು ಮಾಡಿದ ಭಾಷಣವು ದೊಡ್ಡ ಪಿತೂರಿಯ ಭಾಗವಾಗಿತ್ತು ಮತ್ತು ಭಾಷಣ ನಡೆದ ಸ್ಥಳದಿಂದ 1,000 ಕಿಲೋಮೀಟರ್ ಗಿಂತಲೂ ಹೆಚ್ಚು ದೂರದಲ್ಲಿರುವ ದಿಲ್ಲಿಯಲ್ಲಿ ಒಂದು ವಾರದ ಬಳಿಕ ನಡೆದ ಹಿಂದೂ-ಮುಸ್ಲಿಂ ಗಲಭೆಗಳಿಗೆ ಪ್ರಚೋದನೆ ನೀಡಿತ್ತು ಎಂಬುದು ದಿಲ್ಲಿ ಪೊಲೀಸರ ಆರೋಪ ಎಂದು ಖಾಲಿದ್ ಹೇಳಿದ್ದಾರೆ.
ಆದರೆ, ಹಿಂಸಾಚಾರ ಆರಂಭವಾಗುವುದಕ್ಕೆ ಕೆಲವೇ ಗಂಟೆಗಳ ಮೊದಲು ಗಲಭೆ ನಡೆದ ಸ್ಥಳದಲ್ಲೇ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಭಾಷಣ ಮಾಡಿದ್ದರು. ಪ್ರತಿಭಟನಾಕಾರರಿಂದ ರಸ್ತೆಗಳನ್ನು ತೆರವುಗೊಳಿಸದಿದ್ದರೆ ತಾವೇ ಕಾನೂನನ್ನು ಕೈಗೆತ್ತಿಕೊಳ್ಳುವುದಾಗಿ ಅವರು ಬಹಿರಂಗವಾಗಿ ಬೆದರಿಕೆ ಹಾಕಿದ್ದರು. ದಿಲ್ಲಿ ಪೊಲೀಸ್ನ ಹಿರಿಯ ಅಧಿಕಾರಿಯೊಬ್ಬರ ಸಮ್ಮುಖದಲ್ಲಿ ಕ್ಯಾಮೆರಾ ಎದುರೇ ಈ ಎಚ್ಚರಿಕೆ ನೀಡಲಾಗಿತ್ತು ಎಂದು ಖಾಲಿದ್ ತಮ್ಮ ಬರಹದಲ್ಲಿ ಉಲ್ಲೇಖಿಸಿದ್ದಾರೆ.
ಮಿಶ್ರಾ ಅವರನ್ನು ಬಂಧಿಸುವುದು ಇರಲಿ, ಅವರ ವಿರುದ್ಧ FIR ಕೂಡ ದಾಖಲಿಸಲಿಲ್ಲ. ಈಗ ಮಿಶ್ರಾ ದಿಲ್ಲಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದಾರೆ ಎಂದೂ ಹೇಳಿದ್ದಾರೆ.
‘ಅವರನ್ನು ಏಕೆ ಬಂಧಿಸಬೇಕು? ಏಕೆಂದರೆ, ಅವರ ಹೆಸರು ಉಮರ್ ಖಾಲಿದ್ ಅಲ್ಲ, ಕಪಿಲ್ ಮಿಶ್ರಾ!’ ಎಂದು ಖಾಲಿದ್ ಹೇಳಿದ್ದಾರೆ. ಕೆಲವರಿಗೆ ತಪ್ಪು ಮಾಡಿದರೂ ಶಿಕ್ಷೆಯಾಗುವುದಿಲ್ಲ; ಇನ್ನು ಕೆಲವರು ವಿಚಾರಣೆಯೇ ಆರಂಭವಾಗದೆ ಜೈಲಿನಲ್ಲಿರಬೇಕಾಗುತ್ತದೆ ಎಂಬುದು ತಮ್ಮ ವಾದ ಎಂದು ಅವರು ತಿಳಿಸಿದ್ದಾರೆ.
‘ನನ್ನ ವಿರುದ್ಧದ ಆರೋಪಗಳು ಕಲ್ಪಿತ’ :
ತಮ್ಮ ಮೇಲಿನ ಆರೋಪಗಳು ಸಂಪೂರ್ಣ ಕಲ್ಪಿತವಾಗಿವೆ. ಗಲಭೆಗೆ ಮುಸ್ಲಿಮರನ್ನು ಒಗ್ಗೂಡಿಸಿದ್ದರು ಎಂಬ ಆರೋಪ ತಮ್ಮ ಮೇಲಿದೆ. ಆದರೆ, ಗಲಭೆಯಲ್ಲಿ ಸಂತ್ರಸ್ತರಾದವರಲ್ಲಿ ಬಹುಪಾಲು ಜನರು ಮುಸ್ಲಿಮರೇ ಆಗಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳಿಗೆ ಉತ್ತರಿಸಲು ಅಥವಾ ತಮ್ಮನ್ನು ಸಮರ್ಥಿಸಿಕೊಳ್ಳಲು ಎಂದಿಗೂ ಅವಕಾಶ ನೀಡಿಲ್ಲ. ಸಾಕ್ಷಿಗಳನ್ನು ಅಡ್ಡಪ್ರಶ್ನೆ ಮಾಡುವುದು ಮತ್ತು ಸಾಕ್ಷ್ಯಾಧಾರಗಳನ್ನು ಪರಿಶೀಲಿಸುವುದು ಸೇರಿದಂತೆ ನ್ಯಾಯಾಲಯದ ವಿಚಾರಣೆಯಲ್ಲಿ ನಡೆಯುವ ಪ್ರಕ್ರಿಯೆಗಳು ತಮ್ಮ ಪ್ರಕರಣದಲ್ಲಿ ನಡೆದಿಲ್ಲ. ತಮ್ಮ ವಿರುದ್ಧದ ಪ್ರಕರಣದಲ್ಲಿ ವಿಚಾರಣೆ ಆರಂಭವಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ನೂರಾರು ಸುದ್ದಿ ವಾಹಿನಿಗಳಲ್ಲಿ ಸಾವಿರಾರು ಚರ್ಚೆಗಳಿಗೆ ಕಾರಣವಾದ ತಮ್ಮ ವಿರುದ್ಧದ ಪ್ರಕರಣಗಳಲ್ಲಿ ಯಾವುದೇ ನ್ಯಾಯಾಲಯದಲ್ಲಿ ವಿಚಾರಣೆಯೇ ನಡೆದಿಲ್ಲ. 2016ರ JNU ದೇಶದ್ರೋಹದ ಪ್ರಕರಣವೂ ಇದರಲ್ಲಿ ಸೇರಿದೆ. ಈ ಪ್ರಕರಣದ ಬಳಿಕ ಭಾರತದ ರಾಜಕೀಯ ಚರ್ಚೆಗಳಲ್ಲಿ ‘ತುಕ್ಡೆ ತುಕ್ಡೆ ಗ್ಯಾಂಗ್’ ಎಂಬ ಪದ ಬಳಕೆಗೆ ಬಂತು ಎಂದು ಅವರು ಉಲ್ಲೇಖಿಸಿದ್ದಾರೆ.
ಇಷ್ಟು ವರ್ಷಗಳಿಂದ ವಿಚಾರಣೆಯ ದಿನಾಂಕಗಳು ಮುಂದೂಡುತ್ತಲೇ ಬಂದಿವೆ, ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮೊದಲೇ ಸುದ್ದಿ ವಾಹಿನಿಗಳಲ್ಲಿ ತಮ್ಮನ್ನು ತಪ್ಪಿತಸ್ಥರೆಂದು ಬಿಂಬಿಸಲಾಗಿದೆ. ಅಲ್ಲಿ ಅವರೇ ನ್ಯಾಯಾಧೀಶರು, ತೀರ್ಪುಗಾರರು ಮತ್ತು ಶಿಕ್ಷೆ ವಿಧಿಸುವವರಾಗಿದ್ದಾರೆ ಎಂದು ಖಾಲಿದ್ ಟೀಕಿಸಿದ್ದಾರೆ.
ತಮ್ಮ ವಿರುದ್ಧದ ಆರೋಪಗಳನ್ನು ಪದೇ ಪದೇ ಪ್ರಸಾರ ಮಾಡುವ ಮೂಲಕ ಅವುಗಳನ್ನೇ ಸತ್ಯವೆಂದು ಜನರು ನಂಬುವಂತೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಖಾಲಿದ್ ಹೇಳಿದ್ದಾರೆ.
ಒಬ್ಬ ವ್ಯಕ್ತಿಗೆ ತನ್ನ ಪರವಾಗಿ ವಾದಿಸಲು ಅವಕಾಶ ನೀಡದೆ ಅವರನ್ನು ದೋಷಿ ಎಂದು ತೀರ್ಮಾನಿಸಬಹುದೇ? ನ್ಯಾಯಾಲಯದ ವಿಚಾರಣೆ ಇಲ್ಲದೆ ಅನಿರ್ದಿಷ್ಟಾವಧಿಯವರೆಗೆ ಜೈಲಿನಲ್ಲಿ ಇರಿಸಬಹುದೇ? ಇವೆಲ್ಲವನ್ನೂ ಮಾಡಿದ ಬಳಿಕವೂ ನಮ್ಮನ್ನು ‘ನಾಗರಿಕ ಸಮಾಜ’ ಎಂದು ಕರೆದುಕೊಳ್ಳಲು ಸಾಧ್ಯವೇ ಎಂದು ಖಾಲಿದ್ ಪ್ರಶ್ನಿಸಿದ್ದಾರೆ.
ಒಬ್ಬ ವ್ಯಕ್ತಿಯ ಹೆಸರು ಉಮರ್ ಖಾಲಿದ್ ಎಂದ ಮಾತ್ರಕ್ಕೆ ಅವರನ್ನು ‘ದೇಶದ್ರೋಹಿ’ ಎಂದು ಕರೆಯಲು, ಆರೋಪ ಎದುರಿಸುತ್ತಿರುವ ವ್ಯಕ್ತಿಗೂ ತನ್ನ ಪರವಾಗಿ ವಾದಿಸಲು ಅವಕಾಶ ನೀಡಬೇಕು ಎಂಬ ನ್ಯಾಯದ ಮೂಲ ನಿಯಮಗಳ ಅಗತ್ಯವಿಲ್ಲವೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಟ್ಟಿದ್ದಾರೆ.
ತಮ್ಮ ಬಿಡುಗಡೆಗೆ ಆಗ್ರಹಿಸಿ ಆಯೋಜಿಸುವ ಕಾರ್ಯಕ್ರಮಗಳಿಗೆ ಆಡಳಿತ ವ್ಯವಸ್ಥೆಯ ಬೆಂಬಲಿಗರು ಅಡ್ಡಿಪಡಿಸುತ್ತಾರೆ. ಪುಸ್ತಕ ಓದುವ ಕಾರ್ಯಕ್ರಮಗಳ ಮೇಲೆ ದಾಳಿ ನಡೆಸುತ್ತಾರೆ ಮತ್ತು ಚಲನಚಿತ್ರ ಪ್ರದರ್ಶನಗಳನ್ನು ರದ್ದುಗೊಳಿಸುವಂತೆ ಮಾಡುತ್ತಾರೆ ಎಂದು ಖಾಲಿದ್ ಆರೋಪಿಸಿದ್ದಾರೆ.
ತಮ್ಮ ಹೆಸರನ್ನು ಯಾರೂ ಉಚ್ಚರಿಸದಂತೆ ಮತ್ತು ತಮ್ಮೊಂದಿಗೆ ಒಗ್ಗಟ್ಟು ಪ್ರದರ್ಶಿಸುವುದೇ ಅಪರಾಧ ಎಂಬ ವಾತಾವರಣ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ತಮ್ಮ ಮಾತುಗಳು ಜನರನ್ನು ತಲುಪಬಾರದು ಎಂಬುದು ಇದರ ಹಿಂದಿನ ಉದ್ದೇಶ. ತಾವು ‘ದೇಶವಿರೋಧಿ’ ಎಂಬ ಆರೋಪವನ್ನು ಸುಳ್ಳೆಂದು ಬಯಲು ಮಾಡಲು ತಮ್ಮ ಮಾತುಗಳೇ ಸಾಕು ಎಂದು ಖಾಲಿದ್ ತಮ್ಮ ಬರಹದಲ್ಲಿ ತಿಳಿಸಿದ್ದಾರೆ.